“ಸಾಲ ಬೇಕು, ಒಂದು ಜಾಮೀನು ಹಾಕ್ತೀರಾ?’ ಹೀಗಂತ ಗೆಳೆಯರೋ, ಸಂಬಂಧಿಕರೋ ಕೇಳಿದರೆ ಸ್ವಲ್ಪ ಎಚ್ಚರದಿಂದಿರಿ. ಏಕೆಂದರೆ, ಈ ಕಾಲದಲ್ಲಿ ಜಾಮೀನು ಹಾಕುವುದು ಬೇರೆಯವರಿಗೆ ನಾವು ಮಾಡುವ ಸಹಾಯವಾಗಿ ಉಳಿದಿಲ್ಲ. ಅದರ ಹಿಂದೆ ಕಾನೂನಿನ ನೀತಿ, ನಿಯಮಗಳೇ ಇವೆ. ಸಾಲಗಾರ ಕಂತು ಕಟ್ಟಿ, ಸಾಲ ತೀರಿಸಿದರೆ ಇದ್ಯಾವುದೂ ಅರಿವಿಗೆ ಬರುವುದಿಲ್ಲ. ಆದರೆ, ಸಾಲ ಕಟ್ಟದೇ ಇದ್ದಾಗ ಅದರು ಕುಣಿಕೆ ಬಂದು ಬೀಳುವುದು ಜಾಮೀನುದಾರನಿಗೆ. ಹೀಗಾಗಿ ಜಾಮೀನು ಹಾಕುವ ಮುನ್ನ ತಿಳಿಯಬೇಕಾದ 8 ಸತ್ಯ ಇಲ್ಲಿದೆ.
1) ಜಾಮೀನುದಾರ ಕೂಡ ಸಾಲಗಾರನೇ. ಹೀಗಾಗಿ ಸಾಲದ ಮೊತ್ತವು ಜಾಮೀನುದಾರನ ಸಾಲ ಪಡೆಯುವ ಅರ್ಹತೆ ಕಡಿಮೆಮಾಡುತ್ತದೆ. ಉದಾಹರಣೆಗೆ- ನೀವು ಸ್ನೇಹಿತರೊಬ್ಬರಿಗೆ ಜಾಮೀನು ಹಾಕಿದ್ದೀರಿ ಎಂದಿಟ್ಟುಕೊಳ್ಳಿ. ನಂತರ ನಿಮಗೆ ಸಾಲಮಾಡಬೇಕಾದ ಪ್ರಸಂಗ ಎದುರಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗಿರುತ್ತದೆ. ಅಂದರೆ, ನಿಮಗೆ ಸಾಲ ಕೊಡುವವರು, ನಿಮ್ಮ ಜಾಮೀನನ್ನು ನಿಮ್ಮ ಸಾಲವೆಂದೇ ಪರಿಗಣಿಸುತ್ತಾರೆ. 10 ಲಕ್ಷ ಸಾಲ ಬೇಕು ಎಂದರೆ, ಜಾಮೀನು ಹಾಕಿದ ಮೊತ್ತವನ್ನು ಇದರಲ್ಲಿ ಕಳೆದು ಉಳಿದದ್ದಕ್ಕೆ ಸಾಲ ನೀಡಲೂ ಬಹುದು. ಒಂದು ಪಕ್ಷ ನೀವು ಜಾಮೀನು ಹಾಕಿದ ಸಾಲಗಾರ ಕಂತುಗಳನ್ನು ಪಾವತಿ ಮಾಡದೇ ಇದ್ದರೆ, ಅದೂ ಕೂಡ ನಿಮ್ಮ ಕ್ರೆಡಿಟ್ ರೇಟಿಂಗ್‌ನಲ್ಲಿ ಕಪ್ಪು ಚುಕ್ಕೆಯಾಗುತ್ತದೆ.
2) ಜಾಮೀನಿಗೆ, ಸ್ಟ್ಯಾಂ ಪ್ ಆಕ್ಟ್ ಪ್ರಕಾರ ಸ್ಟ್ಯಾಂಪ್ ಪೇಪರ್ ಬಳಸಲಾಗುವುದು. ಗ್ರಾಮಾಂತರ ಪ್ರದೇಶಗಳಲ್ಲಿ ಕೈಸಾಲದಂಥ ಪಡೆಯುತ್ತಾರೆ. ಇದು ಪೇಪರ್ ರಹಿತ ಜಾಮೀನು ಪದ್ಧತಿ. ಇದಕ್ಕೆ ಹವಾಲಿ ಎನ್ನುತ್ತಾರೆ. ಪಡೆಯುವ ಹಣವು ಸಣ್ಣ ಪ್ರಮಾಣದ್ದಾಗಿದ್ದರೆ ಜಾಮೀನು ಬೇಕು ಅಂತ ಕೇಳುವುದಿಲ್ಲ. ಆದರೆ, ಹಣದ ಪ್ರಮಾಣ ಹೆಚ್ಚಾದಂತೆ ಹಾಗೂ ಸಾಲಗಾರ ಪಡೆದ ಹಣ ಹಿಂತಿರುಗಿಸುವ ಸಾಮರ್ಥ್ಯದ ಬಗೆಗೆ ಸಂದೇಹ ಇದ್ದರಂತೂ ಜಾಮೀನನ್ನು ಕೇಳಲಾಗುವುದು. ಅದೂ ಕೂಡ ಸಾಲ ಪಡೆಯುವ ವ್ಯಕ್ತಿಗಿಂತ ಜಾಮೀನು ಹಾಕುವ ವ್ಯಕ್ತಿಯ ಆಸ್ತಿ, ಪಾಸ್ತಿಗಳ ಕಡೆ ಹೆಚ್ಚು ಗಮನ ಕೊಡುವುದುಂಟು.
3) ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ಸಂಘಗಳು ರೈತರಿಗೆ ಸಾಲ ನೀಡುವಾಗ ಜಾಮೀನು ತೆಗೆದು ಕೊಳ್ಳತ್ತವೆ. ತಮ್ಮಿಂದ ಇನ್ನೊಬ್ಬರಿಗೆ ಸಹಾಯವಾಯಿತು ಎನ್ನುವ ಹೃದಯ ವೈಶಾಲ್ಯವನ್ನು ತೋರಿಸುತ್ತಾರೆ. ಮುಂದಿನ ಪರಿಣಾಮವನ್ನು ಊಹಿಸುವುದಿಲ್ಲ. ಸಾಮಾನ್ಯವಾಗಿ ಅವರು ಅಂಥ ತೊಂದರೆಗಳನ್ನು ಎದುರಿಸುವುದಿಲ್ಲ. ಅದಕ್ಕೆ ಕಾರಣ ಇಂಥ ವ್ಯವಹಾರಗಳಲ್ಲಿ ವಾಣಿಜ್ಯ ಆಸಕ್ತಿ ಇರುವುದಿಲ್ಲ, ಬಹುತೇಕ ಅಕ್ಕ- ಪಕ್ಕದ ಮನೆಯವರು, ಅದೇ ಊರಿನವರು, ಸಂಬಂಧಿಕರು, ದಿನ ಮುಂಜಾನೆ ಮುಖ ನೋಡುವವರು ಇರುತ್ತಿದ್ದು, ಒಬ್ಬೊರೊಬ್ಬರ ಮುಖವನ್ನು ಅವರು ದಿನವೂ ನೋಡುವ ಅನಿವಾರ್ಯತೆ ಇರುತ್ತದೆ. ಇದೇ ಪರಿಸ್ಥಿತಿ ನಗರ ಪ್ರದೇಶಗಳಲ್ಲಿ ಇರುವುದಿಲ್ಲ.
4) ಜಾಮೀನು ನೀಡುವುದೆಂದರೆ, ಸಾಲ ಪಡೆಯಲು ಇನ್ನೊಬ್ಬರಿಗೆ ಸಹಾಯಮಾಡುವುದು ಅನ್ನೋ ನಂಬಿಕೆ ಇದೆ. ಈ ರೀತಿ ಮಾಡುವ “ಸಹಾಯ’ದ ಪರಿಣಾಮ ಏನಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದಿಲ್ಲ. ಆದರೆ ಒಂದು ಸತ್ಯ ಗೊತ್ತಿರಬೇಕು. ಒಬ್ಬ ಸಾಲಗಾರ ಸಾಲ ಮಾಡಿದ ತಕ್ಷಣ, ಅವನ ಜೊತೆಯಲ್ಲೇ ಇನ್ನೊಬ್ಬ ಸಾಲಗಾರನಾಗುತ್ತಾನೆ. ಆತನೇ ಜಾಮೀನುದಾರ. ಹಿಂದೆ ಸಾಲಗಾರ ಸಾಲ ಮರುಪಾವತಿ ಮಾಡದಿರುವಾಗ, ಜಾಮೀನುದಾರನಿಂದ ವಸೂಲು ಮಾಡಲಾಗುತ್ತಿತ್ತು. ಆದರೆ, ಈಗ ಕಾಯ್ದೆ ಬದಲಾಗಿದ್ದು, ಸಾಲಗಾರ ಮತ್ತು ಜಾಮೀನುದಾರರಿಬ್ಬರ ವಿರುದ್ಧ ಒಮ್ಮೆಲೇ ಅಥವಾ ಜಾಮೀನದಾರನ ವಿರುದ್ಧ ಮಾತ್ರ ಕ್ರಮ ಜರುಗಿಸಬಹುದು.
5) ಸಾಲ ಕೊಡುವವರೂ ಕೂಡ ಮರುಪಾವತಿ ಹೇಗೆ? ಅನ್ನೋ ಯೋಜನೆಯೊಂದಿಗೇ ಸಾಲ ನೀಡಿರುತ್ತಾರೆ. ಹೀಗಾಗಿ, ಸಾಲದ ಪ್ರಮಾಣದ ಮೂರು, ನಾಲ್ಕು ಪಟ್ಟು ಹೆಚ್ಚಿನ ಸೆಕ್ಯುರಿಟಿ ಕೇಳುತ್ತಾರೆ ಅಥವಾ ಸಾಲಗಾರನ, ಜಾಮೀನುದಾರರ ಆಸ್ತಿ ಮೌಲ್ಯಗಳನ್ನು ಲೆಕ್ಕ ಹಾಕಿಯೇ ಸಾಲ ಬಿಡುಗಡೆ ಮಾಡುತ್ತಾರೆ.
6) ಜಾಮೀನು ಅನ್ನೋದು ಇಂಡಿಯನ್ ಕಂಟ್ರ್ಯಾಕ್ಟ್ ಆಕ್ಟ್ 1872 ಅಡಿಯಲ್ಲಿ ಬರುತ್ತದೆ. ಜಾಮೀನು ಹಾಕಿದ ನಂತರ, ದುಡ್ಡು ಕಟ್ಟುವವನು ಓಡಿ ಹೋದರೆ ಇಡುಗಂಟನ್ನು ಯಾರು ಕಟ್ಟಬೇಕು, ಹೇಗೆ ಕಟ್ಟಬೇಕು, ಆತನೂ ಕಟ್ಟದೇ ಇದ್ದರೆ ಮುಂದೆ ಏನು ಮಾಡಬೇಕು? ಒಂದು ಪಕ್ಷ ಕಟ್ಟಿದರೂ ಎಷ್ಟು ಮೊತ್ತ ಕಟ್ಟಬೇಕು ಇವೆಲ್ಲವೂ ಆಕ್ಟ್ ಹೇಳಿದಂತೆಯೇ ನಡೆಯಬೇಕು.
7) ಜಾಮೀನುದಾರ, ಜಾಮೀನು ಹಾಕಿದ ಸಾಲಗಾರನು ನಿಧನರಾದಾಗ ಬಾಕಿ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ. ಒಂದು ಪಕ್ಷ ಸಾಲಗಾರ ಅಡವಿಟ್ಟ ಆಸ್ತಿ ಸಾಲಕ್ಕೆ ಸಾಲದಿದ್ದಾಗ, ಅದನ್ನು ಕಳೆದು ಉಳಿಕೆಯ ಸಾಲವನ್ನು ಜಾಮೀನುದಾರನೇ ತೀರಿಸಬೇಕಾಗುತ್ತದೆ.
8) ಜಾಮೀನು ಹಾಕುವ ಮೊದಲು ಸಾಲದ ಮೊತ್ತ ಎಷ್ಟು? ಕಂತಿನ ಮೊತ್ತ ಎಷ್ಟು? ಎನ್ನುವುದನ್ನು ತಿಳಿದುಕೊಳ್ಳುವುದು ಲೇಸು. ಜಾಮೀನಿಗೆ ಸಂಬಂಧಿಸಿದ ಕಾಗದಪತ್ರಗಳಿಗೆ ಸಹಿಮಾಡಿದ ಮೇಲೆ, ಜಾಮೀನುದಾರನ ಗಮನಕ್ಕೆ ತರದೇ, ಒಪ್ಪಿಗೆ ಪಡೆಯದೇ, ಜಾಮೀನಿನ ಕಟ್ಟುಪಾಡುಗಳನ್ನು ಬದಲಿಸಿದರೆ ಜಾಮೀನುದಾರನು ಹೊಣೆಗಾರನಾಗುವುದಿಲ್ಲ.
ರಮಾನಂದ ಶರ್ಮಾ