ಗೋರಖ್ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ಸ್ವಕ್ಷೇತ್ರ ಗೋರಖ್ಪುರದಲ್ಲಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿನಲ್ಲಿ ಕಳೆದ 6 ದಿನಗಳ ಅವಧಿಯಲ್ಲಿ 62 ಮಕ್ಕಳು ಸಾವಿಗೀಡಾಗಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಾವುಗಳು ಸಂಭವಿಸಲು ಕಾರಣವೇನು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಆದರೆ ಆಮ್ಲಜನಕ ಪೂರೈಕೆ ಇಲ್ಲದೇ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ.
ಸ್ವಕ್ಷೇತ್ರದಲ್ಲಿ ನಡೆದಿರುವ ಮಕ್ಕಳ ಸಾವಿನ ಕುರಿತಾಗಿ ಸಖೇದಾಶ್ಚರ್ಯ ವ್ಯಕ್ತಪಡಿಸಿರುವ ಮುಖ್ಯ ಮಂತ್ರಿ ಆದಿತ್ಯನಾಥ್ ಶನಿವಾರ ಅಧಿಕಾರಿಗಳು ಮತ್ತು ಸಚಿವರ ತುರ್ತು ಸಭೆ ಕರೆದಿದ್ದಾರೆ. ಈ ಬಗ್ಗೆ 24 ಗಂಟೆಯೊಳಗೆ ವರದಿ ನೀಡುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ , ಸಚಿವ ಅಶುತೋಷ್ ಟೆಂಡನ್ ಅವರು ಮುಖ್ಯಮಂತ್ರಿಯೊಂದಿಗಿನ ಸಭೆಯ ಬಳಿಕ ಗೋರಖ್‌ಪುರಕ್ಕೆ ತೆರಳಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಆಮ್ಲಜನಕದ ಕೊರತೆಯಿಂದ ಕಳೆದ ಸೋಮವಾರ 9 , ಮಂಗಳವಾರ 12 ,ಬುಧವಾರ 9,ಗುರುವಾರ 23 ಮತ್ತು ಶುಕ್ರವಾರ 3 ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಅಂಕಿ ಅಂಶಗಳು ಲಭ್ಯವಾಗಿವೆ.
ಆಮ್ಲಜನಕ ಸರಬರಾಜು ಮಾಡುವವರಿಗೆ ಹಣ ಪಾವತಿಸದ ಕಾರಣ ಅವರು ಆಮ್ಲಜನಕ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಆಮ್ಲಜನಕದ ಕೊರತೆಯಿಂದ ಮಕ್ಕಳು ಮೃತಪಟ್ಟಿದ್ದಾರೆ ಎಂದು ಸುದ್ದಿಯಾಯಿತು. ಆದರೆ ಮಕ್ಕಳಿಗೆ ಆಮ್ಲಜನಕ ನೀಡಲು ಕಾರಣವೇನು? ಆಮ್ಲಜನಕದ ಕೊರತೆ ಏಕಾಯಿತು? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ. ಮಕ್ಕಳ ವಿಭಾಗವಾಗಿದ್ದರಿಂದ ಹೆಚ್ಚಿನವರು ಉಸಿರಾಟ ಸಮಸ್ಯೆ ಇರುವ ಮಕ್ಕಳೇ ದಾಖಲಾಗಿದ್ದರು. ಜಿಲ್ಲಾಧಿಕಾರಿ ಇದನ್ನು ತಳ್ಳಿಹಾಕಿದ್ದು, “ಮಕ್ಕಳ ಸಾವಿಗೆ ಬೇರೆಯದೇ ವೈದ್ಯಕೀಯ ಕಾರಣವಿದೆ’ ಎಂದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ನಿಖರ ಕಾರಣ ತಿಳಿಯಲು ತನಿಖಾ ಸಮಿತಿ ರಚಿಸಿರುವ ಸರ್ಕಾರ, ಶನಿವಾರ ಸಂಜೆಯೊಳಗೆ ವರದಿ ನೀಡುವಂತೆ ಸಮಿತಿಗೆ ಸೂಚಿಸಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖೀಲೇಶ್ ಯಾದವ್, ಘಟನೆಗೆ ಸರ್ಕಾರವೇ ನೇರಹೊಣೆ ಎಂದು ಆರೋಪಿಸಿದ್ದಾರೆ.
ಶುಕ್ರವಾರ ಸಂಜೆ 48 ಗಂಟೆಯೊಳಗೆ 30 ಮಕ್ಕಳು ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಆದರೆ ಶನಿವಾರದ ವರದಿಗಳು ತೀವ್ರ ಆತಂಕಕ್ಕೆ ಕಾರಣವಾಗಿದ್ದು ಗೋರಖ್ಪುರದ ಜನತೆ ಕಂಗಾಲಾಗಿದ್ದಾರೆ.