Advertisement

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

06:14 AM Dec 27, 2024 | Team Udayavani |

ತಮ್ಮ ಆಡಳಿತಾವಧಿಯಲ್ಲಿ ಡಾ. ಸಿಂಗ್‌ ಕೈಗೊಂಡ ಮಹತ್ವದ ಹಾಗೂ ಮೈಲಿಗಲ್ಲು ಎನಿಸುವ ನಿರ್ಧಾರಗಳಲ್ಲಿ ಭಾರತ-ಅಮೆರಿಕ ನಡುವಿನ ಅಣ್ವಸ್ತ್ರ ಒಪ್ಪಂದವೂ ಒಂದು. ಹಲವಾರು ದೃಷ್ಟಿಯಿಂದ ಇದು ಐತಿಹಾಸಿಕವಾದ ಒಪ್ಪಂದವಾಗಿದೆ.

Advertisement

ವಿಶೇಷವೆಂದರೆ ಸಿಂಗ್‌ ಪ್ರಧಾನಿಯಾದ ಮಾರನೇ ವರ್ಷವೇ ಎರಡೂ ದೇಶಗಳ ನಡುವೆ ನಾಗರಿಕ ಅಣು ಒಪ್ಪಂದದ ಪ್ರಕ್ರಿಯೆಗಳು ಶುರುವಾಗಿದ್ದವು. ಒಂದು ಕಡೆ, ಅಮೆರಿಕದ ಕಟ್ಟಾ ವಿರೋಧಿ ಎಡಪಕ್ಷಗಳ ಜತೆಗೇ ಸರ್ಕಾರ ರಚಿಸಿರುವ ಡಾ. ಸಿಂಗ್‌ ಅವರಿಗೆ ಈ ಡೀಲ್‌ ಬಗ್ಗೆ ಕೊಂಚ ಅಳುಕಿದ್ದರೂ, ಹೇಗಾದರೂ ಮಾಡಿ ಭಾರತದ ಸಂಸತ್‌ನಲ್ಲಿ ಒಪ್ಪಿಗೆ ಪಡೆಯುವ ಭರವಸೆ ಇತ್ತು.

ಹೀಗಾಗಿಯೇ, ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್‌ ಡಬ್ಲ್ಯು ಬುಷ್‌ರೊಂದಿಗೆ ಸೇರಿ ಈ ಒಪ್ಪಂದದ ಪ್ರಕ್ರಿಯೆಗೆ ನಾಂದಿ ಹಾಡಿದ್ದರು. ಈ ಪ್ರಕ್ರಿಯೆ 2005ರಿಂದ 2010ರ ವರೆಗೆ, ಅಂದರೆ, ಬರಾಕ್‌ ಒಬಾಮಾ ಅಮೆರಿಕದ ಅಧ್ಯಕ್ಷರಾದ ನಂತರವೂ ಮುಂದುವರಿದಿತ್ತು. ಆದರೆ, ಇಲ್ಲೊಂದು ಆತಂಕ ಎದುರಾಗಿತ್ತು. ರಿಪಬ್ಲಿಕನ್‌ ಪಕ್ಷಕ್ಕೆ ಸೇರಿದ್ದ ಜಾರ್ಜ್‌ ಬುಷ್‌ ಆರಂಭಿಸಿದ್ದ ಈ ಡೀಲ… ಅನ್ನು ಡೆಮಾಕ್ರೆಟಿಕ್‌ ಪಕ್ಷಕ್ಕೆ ಸೇರಿರುವ ಬರಾಕ್‌ ಒಬಮಾ ಮುಂದುವರಿಸುತ್ತಾರೆಯೇ ಅನುಮಾನ ಮೂಡಿತ್ತು. ಆದರೆ, ಡಾ. ಸಿಂಗ್‌ ಅವರ ಬುದ್ಧಿವಂತಿಕೆ ಮತ್ತು ಚಾಣಾಕ್ಷ್ಯತನದಿಂದಾಗಿ ಒಬಾಮಾ ಕೂಡ ಈ ಡೀಲ್‌ಗೆ ಒಪ್ಪುವಂತೆ ಮಾಡಿದ್ದರು. ಇದು ಅವರ ಹೆಗ್ಗಳಿಕೆ.

ಅಮೆರಿಕದಲ್ಲೇ ಸಲೀಸಾಯಿತು:
ಡಾ. ಮನಮೋಹನ್‌ ಸಿಂಗ್‌ ಅವರ ಬುದ್ಧಿವಂತಿಕೆಯಿಂದಾಗಿ, ಈ ಡೀಲ್‌ ಅಮೆರಿಕದ ಒಪ್ಪಿಗೆಯನ್ನು ಪಡೆಯುವುದು ಅಥವಾ ಅಲ್ಲಿ ಈ ಡೀಲ್‌ ಕುದುರಿಸಿಕೊಳ್ಳುವುದು ಕಷ್ಟವಾಗಲಿಲ್ಲ. ಆರಂಭದಲ್ಲೇ ಅಮೆರಿಕ ರಿಯಾಕ್ಟರ್‌ಗಳ ಲೆಕ್ಕಾಚಾರದಲ್ಲಿ ಮೋಸ ಮಾಡುತ್ತಿರಬಹುದು ಎಂಬ ಅನುಮಾನದಿಂದಲೇ ಡಾ. ಸಿಂಗ್‌ ಇಡೀ ಡೀಲ್‌ ಕ್ಯಾನ್ಸಲ್‌ ಮಾಡುವಷ್ಟು ಮುಂದಕ್ಕೆ ಹೋಗಿದ್ದರು. ಈ ಸಂಗತಿಯನ್ನು ರಾತ್ರೋರಾತ್ರಿ ಅರಿತ ಬುಷ್‌, ಆಗಿನ ವಿದೇಶಾಂಗ ಕಾರ್ಯದರ್ಶಿ ರೈಸ್‌ರನ್ನು ಡಾ.ಸಿಂಗ್‌ ಮತ್ತು ಅವರ ನಿಯೋಗ ಉಳಿದು ಕೊಂಡಿದ್ದ ಹೋಟೆಲ್‌ಗೆ ಕಳುಹಿಸಿ, ಡೀಲ್‌ನಿಂದ ಹಿಂದಕ್ಕೆ ಹೋಗಬಾರದು ಎಂದು ಮನವೊಲಿಸಿದ್ದರು. ಬುಷ್‌ ಕಾಲದಲ್ಲೇ ಇದು ಮುಗಿದು ಹೋಗಬೇಕಾಗಿತ್ತಾದರೂ, ಭಾರತದ ಸಂಸತ್‌ನ ಒಪ್ಪಿಗೆ ಪಡೆಯುವಲ್ಲಿ ಆದ ವಿಳಂಬ, ಅಲ್ಲೂ ತಡವಾಗಲು ಕಾರಣವಾಯಿತು. ಅಷ್ಟರಲ್ಲಿ ಅಮೆರಿಕದಲ್ಲಿ ಬುಷ್‌ ಹೋಗಿ ಅವರ ಸ್ಥಾನಕ್ಕೆ ಒಬಾಮ ಬಂದರು.

ಭಾರತದಲ್ಲೇ ಕಷ್ಟ: 
ಈ ಡೀಲ್‌ ಅನ್ನು ಸಂಸತ್‌ನಲ್ಲಿ ಮಂಡಿಸಿ ಒಪ್ಪಿಗೆ ಪಡೆಯುವುದು ಸಿಂಗ್‌ ಅವರಿಗೆ ಸುಲಭದ ಕೆಲಸವಾಗಿರಲಿಲ್ಲ. ಸರ್ಕಾರದ ಒಳಗೇ ಇದ್ದ ಎಡಪಕ್ಷಗಳು ಇದನ್ನು ತೀವ್ರವಾಗಿ ವಿರೋಧಿಸುತ್ತಿದ್ದವು. ಯುಪಿಎ-1ರ ವೇಳೆಯಲ್ಲಿ ಸಂಸತ್‌ನಲ್ಲಿ 60ಕ್ಕೂ ಹೆಚ್ಚು ಸಂಸದರ ಬಲ ಹೊಂದಿದ್ದ ಎಡಪಕ್ಷಗಳು ಸರ್ಕಾರವನ್ನು ಅಲ್ಲಾಡಿಸುವಷ್ಟರ ಮಟ್ಟಿಗೆ ಗಟ್ಟಿಗರಾಗಿದ್ದರು. ಅತ್ತ, ಪ್ರಮುಖ ವಿರೋಧ ಪಕ್ಷ ಬಿಜೆಪಿ, ಡೀಲ್‌ನಲ್ಲಿ ಹೆಚ್ಚು ಷರತ್ತುಗಳಿವೆ ಎಂಬ ಕಾರಣಕ್ಕಾಗಿ ವಿರೋಧಿಸಿತ್ತು. ಈ ಎಲ್ಲಾ ಅಡೆತಡೆಗಳ ನಡುವೆಯೇ ಸಿಂಗ್‌, ಸಂಸತ್ತಿನಲ್ಲಿ ಈ ಒಪ್ಪಂದ ಒಪ್ಪಿಗೆಗಾಗಿ ಮಂಡಿಸಲು ಸಿದ್ಧತೆ ಶುರು ಮಾಡಿದರು. ಅತ್ತ ಎಡಪಕ್ಷಗಳು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದುಬಿಟ್ಟವು. ಇನ್ನೊಂದು ಕಡೆ ಬಿಜೆಪಿಯೂ ಅವಿಶ್ವಾಸ ನಿರ್ಣಯದ ಮೊರೆ ಹೋಗಿಬಿಟ್ಟಿತು.

Advertisement

ನೆರವಿಗೆ ಬಂದ ಕಲಾಂ ಮತ್ತು ಮುಲಾಯಂ:
ಆಗ ನಿಜವಾಗಿ ಸರ್ಕಾರ ಮತ್ತು ಅಣು ಡೀಲ್‌ ಎರಡನ್ನೂ ಉಳಿಸಿದ್ದು ರಾಷ್ಟ್ರಪತಿ ಅಬ್ದುಲ್‌ ಕಲಾಂ ಮತ್ತು ಎಸ್‌ಪಿ ನಾಯಕ ಮುಲಾಯಂ ಸಿಂಗ್‌ ಯಾದವ್‌. ಈ ಡೀಲ್‌ ಬಗ್ಗೆ ಸಹಾನುಭೂತಿ ಹೊಂದಿದ್ದ ಅಬ್ದುಲ… ಕಲಾಂ ಅವರ ವಿಶ್ವಾಸ ಗಳಿಸಿದ್ದ ಡಾ. ಸಿಂಗ್‌, ಅಣು ಒಪ್ಪಂದಕ್ಕಾಗಿ ಅವರ ನೆರವು ಪಡೆದರು. ಅಂದರೆ, ಕಲಾಂ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ಯಾದವ್‌ ಅವರಿಗೆ ಇದ್ದ ಗೌರವದ ಬಗ್ಗೆ ಸಿಂಗ್‌ ಅವರಿಗೆ ಗೊತ್ತಿತ್ತು. ಹೀಗಾಗಿ ಮೊದಲಿಗೆ ಮುಲಾಯಂ ಮತ್ತು ಅಮರ್‌ ಸಿಂಗ್‌ ಬಳಿಗೆ ತಮ್ಮ ಕಡೆ ಯವರನ್ನು ಕಳಿಸಿ ಒಪ್ಪಂದಕ್ಕೆ ಬೆಂಬಲ ನೀಡುವಂತೆ ಕೇಳಿ ಕೊಂಡರು.

ಈ ವೇಳೆಯಲ್ಲೇ ಒಪ್ಪಂದದ ಬಗ್ಗೆ ಕಲಾಂ ಅವರ ಬಳಿಯೇ ಅಭಿಪ್ರಾಯ ಕೇಳಬಹುದು, ನಂತರ ಒಪ್ಪಿಗೆ ನೀಡ ಬಹುದು ಎಂದೂ ಸಿಂಗ್‌ ಹೇಳಿದ್ದರು. ಹೀಗಾಗಿ, ನೇರವಾಗಿ ರಾಷ್ಟ್ರಪತಿ ಭವನಕ್ಕೆ ಹೋದ ಮುಲಾಯಂ ಮತ್ತು ಅಮರ್‌ ಸಿಂಗ್‌, ಕಲಾಂ ಅವರ ಅಭಿಪ್ರಾಯ ಪಡೆದು ಸರ್ಕಾರಕ್ಕೆ ಬೆಂಬಲ ನೀಡಿದ್ದೂ ಅಲ್ಲದೇ, ಒಪ್ಪಂದ ಸಂಸತ್‌ನಲ್ಲಿ ಪಾಸಾಗಲೂ ಕಾರಣೀಭೂತರಾದರು. ಈ ಬಗ್ಗೆ ಡಾ. ಸಿಂಗ್‌ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಈ ಡೀಲ್‌ ಕುರಿತ ಇನ್ನೊಂದು ವಿಚಿತ್ರ ಸಂಗತಿಯೂ ಇದೆ. ಅಣು ಒಪ್ಪಂದದ ಕುರಿತಂತೆ ಮೊಂಡು ಹಠ ಮಾಡಿದ, ಎಡ ಪಕ್ಷಗಳು ನಂತರದಲ್ಲಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳತೊಡಗಿದವು. ಈಗಂತೂ ಅವು ಡಬಲ್‌ ಡಿಜಿಟ್‌ ಸ್ಥಾನಗಳನ್ನೂ ಬರಲೂ ತಿಣುಕಾಡುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next