Advertisement

5 ತಿಂಗಳಲ್ಲಿ 63.91ಲಕ್ಷ ರೂ. ದಂಡ ಸಂಗ್ರಹ

12:42 AM Jan 26, 2020 | Team Udayavani |

ಬೆಂಗಳೂರು: ಸ್ವಚ್ಛ ನಗರ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆಯಲು ಬಿಬಿಎಂಪಿ ಸ್ವಚ್ಛ ಸರ್ವೆಕ್ಷಣ್‌ ಅಭಿಯಾನ ಮಾಡುತ್ತಿದ್ದರೆ ಅದಕ್ಕೆ ಪೂರಕವಾಗಿ ಸಾರ್ವಜನಿಕರ ಸ್ಪಂದನೆ ಸಿಗುತ್ತಿಲ್ಲ. ಸಾಕಷ್ಟು ಜಾಗೃತಿಯ ನಂತರವೂ ರಸ್ತೆಗೆ ಕಸ ಎಸೆಯುವುದು, ಮನೆಗಳಲ್ಲಿ ಸಂಗ್ರಹವಾಗುವ ಹಸಿ ಹಾಗೂ ಒಣ ಕಸ ಬೇರ್ಪಡಿಸದೆ ಮಿಶ್ರ ಕಸ ನೀಡುವುದು ನಿಂತಿಲ್ಲ.

Advertisement

ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ಹಾಕಲು ಮಾರ್ಷಲ್‌ಗ‌ಳನ್ನು ನೇಮಿಸಿದ್ದರೂ ಪ್ರಯೋಜನವಾಗಿಲ್ಲ. ಐದು ತಿಂಗಳಲ್ಲಿ ರಸ್ತೆ ಬದಿ ಕಸ ಹಾಕುವವರಿಂದ 63.91 ಲಕ್ಷ ರೂ. ದಂಡ ವಸೂಲಾಗಿರುವುದೇ ಇದಕ್ಕೆ ಸಾಕ್ಷಿ. ಜಾಹೀರಾತು, ಬೀದಿ ನಾಟಕ, ಜಾಗೃತಿ ಜಾಥಾ ಸೇರಿದಂತೆ ವಿವಿಧ ಅಭಿಯಾನ ಮೂಲಕ ಜಾಗೃತಿ ಮೂಡಿಸಿ 2019 ಸೆಪ್ಟೆಂಬರ್‌ನಲ್ಲಿ 198 ವಾರ್ಡ್‌ಗಳಿಗೆ 230ಕ್ಕೂ ಅಧಿಕ ಮಾರ್ಷಲ್‌ಗ‌ಳನ್ನು ನೇಮಿಸಲಾಗಿತ್ತು.

ಮಾರ್ಷಲ್‌ಗ‌ಳು ಬ್ಲಾಕ್‌ಸ್ಪಾಟ್‌ ತಡೆಗಟ್ಟಲು ಹಾಗೂ ಸಮರ್ಪಕ ಕಸ ವಿಲೇವಾರಿಗೆ ವಾರ್ಡ್‌ಗಳಲ್ಲಿ ಸಂಚರಿಸಿ ದಂಡ ಹಾಕಲು ಆರಂಭಿಸಿದ್ದು, ಪ್ರತಿ ತಿಂಗಳು ಸಾವಿರಾರು ಜನರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸುತ್ತಿ ದ್ದಾರೆ. ಈ ಮೊದಲು ನಗರದಲ್ಲಿ ಸುಮಾರು 1350 ಬ್ಲಾಕ್‌ಸ್ಪಾಟ್‌ಗಳಿದ್ದು, ಮಾರ್ಷಲ್‌ಗ‌ಳು ದಂಡ ವಿಧಿಸುವುದರಿಂದಾಗಿ ಆರು ತಿಂಗಳಲ್ಲಿ 550ಕ್ಕೂ ಅಧಿಕ ಬ್ಲಾಕ್‌ಸ್ಪಾಟ್‌ಗಳು ಕಡಿಮೆಯಾಗಿವೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಪಾಲಿಕೆಯ ಉದ್ದೇಶ ಸಾಕಾರವಾಗಿಲ್ಲ.

ಎಲೆಕ್ಟ್ರಾನಿಕ್‌ ಯಂತ್ರ ವಿತರಣೆ: ಐದು ತಿಂಗಳಿಂದ ಮಾರ್ಷಲ್‌ಗ‌ಳು ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಿ ಚಲನ್‌ ನೀಡುತ್ತಿದ್ದರು. ಇದೀಗ ಅವರಿಗೆ ದಂಡ ವಸೂಲು ಮಾಡಲು ಎಲೆಕ್ಟ್ರಾನಿಕ್‌ ಯಂತ್ರ ವಿತರಣೆ ಮಾಡಲು ಪಾಲಿಕೆ ಮುಂದಾಗಿದೆ. ಫೆಬ್ರವರಿಯಲ್ಲಿ ಎಲ್ಲ ಮಾರ್ಷಲ್‌ಗ‌ಳ ಕೈಗೆ ಈ ಯಂತ್ರ ಸೇರಲಿದೆ. ಜತೆಗೆ, 198 ವಾರ್ಡ್‌ಗಳಲ್ಲಿ ಶೇ. 20ಕ್ಕೂ ಅಧಿಕ ವಾರ್ಡ್‌ಗಳ ವ್ಯಾಪ್ತಿ ದೊಡ್ಡದಿದ್ದು, ಒಬ್ಬರೇ ಮಾರ್ಷಲ್‌ ವಾರ್ಡ್‌ ಪೂರ್ತಿ ಸಂಚರಿಸುವುದು ತೊಂದರೆಯಾಗುವುದರಿಂದ ಹೆಚ್ಚುವರಿ 50ಕ್ಕೂ ಅಧಿಕ ಮಾರ್ಷಲ್‌ಗ‌ಳ ನೇಮಕದ ಬಗ್ಗೆ ಪ್ರಸ್ತಾಪವಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಷಲ್‌ಗ‌ಳು ದಾಖಲಿಸಿದ ಪ್ರಕರಣ, ಸಂಗ್ರಹಿಸಿರುವ ದಂಡ?
ತಿಂಗಳು ಪ್ರಕರಣ ಸಂಗ್ರಹ
ಸೆಪ್ಟೆಂಬರ್‌ 1959 14,33,495
ಅಕ್ಟೋಬರ್‌ 2370 12,13,110
ನವೆಂಬರ್‌ 2887 13,91,195
ಡಿಸೆಂಬರ್‌ 813 10,52,260
ಜನವರಿ(22) 1278 13,01,640
ಒಟ್ಟು 9,307 63,91,700

Advertisement

ಕಸ ರಸ್ತೆಗೆ ಎಸೆಯದಂತೆ, ಕಸ ವಿಂಗಡಿಸುವ ಬಗ್ಗೆ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ, ಬ್ಲಾಕ್‌ಸ್ಪಾರ್ಟ್‌ಗಳು ನಿರ್ಮಾಣವಾಗುತ್ತಿದ್ದು, ನಿಯಮ ಉಲ್ಲಂಘಿಸಿ ಕಸ ರಸ್ತೆ ಬದಿ ಹಾಕಿದರೆ ದಂಡ ವಿಧಿಸಲು ಆರಂಭಿಸಲಾಗಿದೆ.
-ರಂದೀಪ್‌, ವಿಶೇಷ ಆಯುಕ್ತ (ಘನತ್ಯಾಜ್ಯ)

* ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next