ರಾಯ್‌ಪುರ್/ಹೊಸದಿಲ್ಲಿ: ವಿಧಾನಸಭಾ ಚುನಾವಣೆಗೆ ಸಿದ್ಧವಾಗಿರುವ ಛತ್ತೀಸ್‌ಗಢದಲ್ಲಿ 62 ಮಂದಿ ಕಟ್ಟಾ ನಕ್ಸಲರು ಭದ್ರತಾ ಪಡೆಗಳಿಗೆ ಮಂಗಳವಾರ ಶರಣಾದರು. ಈ ವಿದ್ಯಮಾನವನ್ನು ಒಂದು “ಬಹುದೊಡ್ಡ ಸಾಧನೆ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಬಣ್ಣಿಸಿದ್ದಾರೆ.
ನಾರಾಯಣ್‌ಪುರ್ ಜಿಲ್ಲೆಯಲ್ಲಿ ಶರಣಾದ 62 ನಕ್ಸಲರ ಪೈಕಿ 55 ಮಂದಿ ತಮ್ಮ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳೊಂದಿಗೆ ಶರಣಾದರು ಎಂದು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್(ಬಸ್ತರ್) ವಿವೇಕಾನಂದ್ ಸಿನ್ಹ ಅವರು ಸುದ್ದಿಗಾರರಿಗೆ ತಿಳಿಸಿದರು. “ನಕ್ಸಲರು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶರಣಾಗಿರುವುದು ಖಂಡಿತ ಒಂದು ಗುಣಾತ್ಮಕ ಬೆಳವಣಿಗೆಯಾಗಿದೆ ಮತ್ತು ಇದು ಮಾವೋವಾದಿ ನಕ್ಸಲರ ಮೇಲೆ ಮಾನಸಿಕ ಪರಿಣಾಮ ಬೀರಲಿದೆ’ ಎಂದವರು ಹೇಳಿದರು.
ಶರಣಾಗಿರುವ ನಕ್ಸಲರು ಕೆಳಹಂತದ ಬಂಡುಗಾರರಾಗಿದ್ದು ತಾವು ಮಾವೋವಾದಿಗಳ ಟೊಳ್ಳು ಸಿದ್ಧಾಂತ ಹಾಗೂ ಹಿಂಸಾಚಾರದಿಂದ ಭ್ರಮನಿರಸನಗೊಂಡಿರುವುದಾಗಿ ತಿಳಿಸಿದರು. ಅವರು ಕಳೆದ 8-9 ವರ್ಷಗಳಿಂದ ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ವಿವಿಧ ಉಪಗುಂಪುಗಳಿಗೆ ಕೆಲಸ ಮಾಡುತ್ತಿದ್ದರೆಂದು ಪೊಲೀಸ್ ಅಧೀಕ್ಷಕ ಜಿತೇಂದ್ರ ಶುಕ್ಲ ಹೇಳಿದರು.
ಇದೇ ಸಮಯ ಸರಕಾರ ಮಂಡಿಸಿರುವ ಶರಣಾ ಗತಿ ಮತ್ತು ಪುನರ್ವಸತಿ ನೀತಿ ನಕ್ಸಲರನ್ನು ಹಿಂಸಾ ಮಾರ್ಗವನ್ನು ತ್ಯಜಿಸುವಂತೆ ಪ್ರೇರೇಪಿಸುತ್ತಿದೆ. ಈ ಬಹುದೊಡ್ಡ ಸಾಧನೆಗಾಗಿ ತಾನು ರಾಜ್ಯದ ಮುಖ್ಯಮಂತ್ರಿ ರಮಣ್ ಸಿಂಗ್, ಡಿಜಿಪಿ ಹಾಗೂ ಪೊಲೀಸ್ ಪಡೆಯನ್ನು ಅಭಿನಂದಿಸುತ್ತೇನೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ನ. 12ರಂದು ರಾಜ್ಯ ವಿಧಾನಸಭೆಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ 18 ಕ್ಷೇತ್ರಗಳ ಪೈಕಿ ಹೆಚ್ಚಿನವು ಬಸ್ತರ್ ವಲಯದಲ್ಲಿ ಬರುತ್ತವೆ.