Advertisement

Naxal Encounter: ದಕ್ಷಿಣ ಭಾರತದಲ್ಲಿ ಇನ್ನುಳಿದಿರುವುದು ಎಂಟೇ ಮಂದಿ ನಕ್ಸಲರು!

03:32 AM Nov 21, 2024 | Team Udayavani |

ಉಡುಪಿ: ನಕ್ಸಲ್‌ ನಾಯಕ ವಿಕ್ರಂ ಗೌಡ ಸಾವಿನ ಬಳಿಕ ಈಗ ದಕ್ಷಿಣ ಭಾರತದಲ್ಲಿ ಉಳಿದಿರುವುದು ಎಂಟು ಮಂದಿ ನಕ್ಸಲರು ಮಾತ್ರ, ಅವರಲ್ಲಿ ಏಳು ಜನ ಈಗ ಉಡುಪಿ-ಚಿಕ್ಕಮಗಳೂರು ಜಿಲ್ಲೆಯಲ್ಲೇ ಇದ್ದಾರೆ ಎಂದು ಹೇಳುತ್ತವೆ ಮೂಲಗಳು.

Advertisement

ಕೇರಳದ ನಕ್ಸಲ್‌ ನಾಯಕ ಸಂಜೊಯ್‌ ದೀಪಕ್‌, ಮೊಹಿಯುದ್ದೀನ್‌ ಸೇರಿ ಬಹುತೇಕರ ಬಂಧನವಾಗಿದೆ. ಅಲ್ಲಿ ಉಳಿದಿರುವುದು ಸಂತೋಷ್‌ ಮಾತ್ರ. ರಾಷ್ಟ್ರ ಮಟ್ಟದ ನಕ್ಸಲ್‌ ನಾಯಕರೊಂದಿಗೆ ಸಂಜೊಯ್‌ ದೀಪಕ್‌ ಸಂಪರ್ಕ ಹೊಂದಿದ್ದ. ಇವರ ಬಂಧನದ ಬಳಿಕ ಎಲ್ಲವೂ ಕಡಿತಗೊಂಡಿತು. ವಯೋಸಹಜ ಅನಾರೋಗ್ಯವೂ ಉಳಿದವರನ್ನು ಕಾಡುತ್ತಿದೆ.

ಕೇರಳದಲ್ಲಿ ಮುಂದುವರಿಯಲು ಯಾವುದೇ ಅವಕಾಶ ಇಲ್ಲದ್ದರಿಂದ 8 ಜನರ ತಂಡ ಕರ್ನಾಟಕದತ್ತ ಹೊರಟಿತು. ತಂಡದಲ್ಲಿ ಮುಂಡಗಾರು ಲತಾ, ಜಯಣ್ಣ (ಜಾನ್‌), ವನಜಾಕ್ಷಿ, ಸುಂದರಿ, ದಿಶಾ (ಕೇರಳ), ಕೋಟೆವುಂಡ ರವಿ, ರಮೇಶ್‌ (ತಮಿಳುನಾಡು), ವಿಕ್ರಂ ಗೌಡ ಸೇರಿ ಎಂಟು ಜನ ಇದ್ದರು. ಸಂತೋಷ್‌ ಎಲ್ಲಿದ್ದಾನೆ ಎಂಬ ಮಾಹಿತಿ ಇಲ್ಲ ಎಂದು ಮೂಲಗಳು ತಿಳಿಸಿವೆ.

ಮುಂಡಗಾರು ಲತಾ ನಾಯಕತ್ವ ವಹಿಸುವಳೇ?
ಎಂಟು ಜನ ಮಾರ್ಚ್‌ನಲ್ಲಿ ಕೊಡಗು, ದ.ಕ. ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದರು. ಎಂಟರಲ್ಲಿ ಈಗ ವಿಕ್ರಂ ಗೌಡ ಹತ್ಯೆಯಾಗಿದೆ. ಉಳಿದವರು ಇದೇ ತಂಡದಲ್ಲಿ ಇದ್ದರು. ಕಡೆಗುಂದಿಯಲ್ಲಿ ಮುಂಡಗಾರು ಲತಾ ಮತ್ತು ಜಯಣ್ಣ ಮಾತ್ರ ಕಾಣಿಸಿಕೊಂಡಿದ್ದು, ಉಳಿದವರೂ ಸುತ್ತಮುತ್ತಲ ಕಾಡಿನಲ್ಲೇ ಇರಬಹುದು ಎಂಬ ಅನುಮಾನ ಇದೆ.

ಉಳಿದ ನಕ್ಸಲರ ಪೈಕಿ ಮುಂಡಗಾರು ಲತಾ ಪ್ರಭಾವಿ ನಕ್ಸಲ್‌ ನಾಯಕಿಯಾಗಿದ್ದು ಅನಾರೋಗ್ಯ ಪೀಡಿತೆಯಾಗಿದ್ದಾಳೆ. 50 ವಯಸ್ಸಿನ ಆಸುಪಾಸಿನಲ್ಲಿರುವ ಈಕೆಯೇ ಮುಂದಿನ ನಾಯಕಿಯಾಗಿ ನಕ್ಸಲ್‌ ತಂಡದ ನೇತೃತ್ವ ವಹಿಸುವ ಸಾಧ್ಯತೆಗಳಿವೆ.

Advertisement

ಸಿಕ್ಕಿಬೀಳುವರೋ, ಶರಣಾಗತಿಯಾಗುವರೋ?
ಹತನಾದ ವಿಕ್ರಂ ಗೌಡ ಮಾತ್ರ ಶರಣಾಗತಿಗೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದ. ಇನ್ನುಳಿದಂತೆ ಇತರ ನಕ್ಸಲ್‌ ಸದಸ್ಯರು ಶರಣಾಗತಿ ಬಯಸಿದ್ದರು ಎನ್ನುವ ಮಾತು ಕೇಳಿಬರುತಿದ್ದು, ಪರಾರಿಯಾದ ಎಲ್ಲ ನಕ್ಸಲರು ಸದ್ಯದಲ್ಲೇ ಸಿಕ್ಕಿಬೀಳುವ ಸಾಧ್ಯತೆ ಅಥವಾ ತಾವಾಗಿಯೇ ಶರಣಾಗುವ ಸಂಭವವೇ ಹೆಚ್ಚು.

Advertisement

Udayavani is now on Telegram. Click here to join our channel and stay updated with the latest news.

Next