Advertisement

ಶೇ.60 ಪಠ್ಯಪುಸ್ತಕ ಪೂರೈಕೆ; ವಿದ್ಯಾರ್ಥಿಗಳ ಪರದಾಟ

06:01 PM Jun 08, 2022 | Team Udayavani |

ದೇವದುರ್ಗ: ಪಟ್ಟಣ ಸೇರಿ ತಾಲೂಕಿನಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಪಠ್ಯ ಪುಸ್ತಕ ವಿತರಣಾ ಕಾರ್ಯ ನಡೆದಿದೆ. ಈಗಾಗಲೇ ಶೇ.60ರಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿವೆ. ಇನ್ನುಳಿದ ಪುಸ್ತಕಗಳು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಂತ ಹಂತವಾಗಿ ಪೂರೈಸಲಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

Advertisement

25 ಕ್ಲಸ್ಟರ್‌ಗಳು ಇದ್ದು, 317 ಪ್ರಾಥಮಿಕ ಹಾಗೂ 33 ಪ್ರೌಢಶಾಲೆ ಸೇರಿ ಒಟ್ಟು 350 ಶಾಲೆಗಳಿವೆ. ಈಗಾಗಲೇ 25 ಕ್ಲಸ್ಟರ್‌ ಶಾಲೆಗಳ ವ್ಯಾಪ್ತಿಯ ಬಹುತೇಕ ಶಾಲೆಗಳಿಗೆ ಪುಸ್ತಕ ಸರಬರಾಜು ಮಾಡಲಾಗಿದೆ. ಕೆಲ ಶಾಲೆಗಳ ಮುಖ್ಯ ಶಿಕ್ಷಕರು ಪುಸ್ತಕ ತೆಗೆದುಕೊಂಡು ಹೋಗುತ್ತೇವೆಂದು ಪುಸ್ತಕ ಪೂರೈಸುವ ಅಧಿಕಾರಿಗಳಿಗೆ ಹೇಳಿದ್ದಾರೆ ಎನ್ನಲಾಗುತ್ತಿದೆ.

ಈ ವರ್ಷ ಹೊಸದಾಗಿ ಕಲಿಕಾ ಚೇತರಿಕೆ ಆಳಿ ಎಂಬ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿನೂತನ ಕಲಿಕೆ ನೀಡುವ ಉದ್ದೇಶದಿಂದ ಬಹುತೇಕ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ತರಬೇತಿ ಪಡೆದಿರುವ ಶಾಲಾ ಶಿಕ್ಷಕರಿಗೆ ಕಲಿಕಾ ಚೇತರಿಕೆ ಆಳಿ ಪುಸ್ತಕ ರೂಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪೂರೈಕೆ ಮಾಡದೇ ವಿಳಂಬ ಮಾಡಿದೆ. ತರಬೇತಿ ಪಡೆದಿರುವ ನೂರಾರು ಶಿಕ್ಷಕರು ಇದೀಗ ಗೊಂದಲದ ಜಪಕ್ಕೆ ಕಾರಣವಾಗಿದೆ.

ಪುಸ್ತಕ ಪೂರೈಕೆ ವಿಳಂಬ

ಕೋವಿಡ್‌ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ತರಗತಿಗಳು ನಡೆದಿಲ್ಲ. ಪ್ರಕರಣ ತಗ್ಗಿದ್ದರಿಂದ ಶಾಲೆಗಳು ಆರಂಭಗೊಂಡಿವೆ. ಆದರೀಗ ಪುಸ್ತಕ ಪೂರೈಕೆಯಲ್ಲಿ ವಿಳಂಬವಾದ್ದರಿಂದ ಮಕ್ಕಳಿಗೆ ಹಂಚಿಕೆ ಮಾಡುವಲ್ಲಿ ಮುಖ್ಯಶಿಕ್ಷಕರಿಗೆ ಸಮಸ್ಯೆ ತಂದಿದೆ. ಒಂದನೇ ತರಗತಿ ಕನ್ನಡ, ಗಣಿತ, ಎರಡನೇ ತರಗತಿ ಕನ್ನಡ, ಗಣಿತ, ಮೂರನೇ, ನಾಲ್ಕನೇ, ಐದನೇ ತರಗತಿ ಇಂಗ್ಲಿಷ್‌ ಪುಸ್ತಕ ಇಲ್ಲ. ಏಳನೇ, ಎಂಟನೇ, ಒಂಭತ್ತನೇ, ಹತ್ತನೇ ತರಗತಿ ಕನ್ನಡ, ಸಮಾಜ ಪುಸ್ತಕಗಳು ಪೂರೈಕೆ ಆಗಿಲ್ಲ.

Advertisement

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭವಾಗಿ ತಿಂಗಳು ಕಳೆಯುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳಿಗೆ ಪೂರೈಕೆ ಮಾಡಬೇಕಾದಂತಹ ಪಠ್ಯಪುಸ್ತಕಗಳು ವಿಳಂಬವಾಗಿದೆ. ಈಗಾಗಲೇ ಶೇ.60ಪಠ್ಯ ಪುಸ್ತಕಗಳು ಪೂರೈಸಲಾಗಿದೆ. ಒಂದೊಂದು ತರಗತಿಯಲ್ಲಿ ಒಂದೊಂದು ಪುಸ್ತಕಗಳು ಕೊರತೆ ಕಾಡುತ್ತಿದೆ. ವಾರದಲ್ಲಿ ಎಲ್ಲ ಪುಸ್ತಕಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಪುಸ್ತಕ ಪೂರೈಕೆ ನೋಡಲ್‌ ಅಧಿಕಾರಿ ಜಗದೇಶ ತಿಳಿಸಿದ್ದಾರೆ.

ಸಮವಸ್ತ್ರ ಇಲ್ಲ: ಕೋವಿಡ್‌ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಸರಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಕೆ ಮಾಡಿಲ್ಲ. ಆದರೀಗ ಶಾಲೆಗಳು ಆರಂಭವಾಗಿ ತರಗತಿಗಳು ನಡೆಯುತ್ತಿವೆ. ಪುಸ್ತುಕ ವಿಳಂಬ ಜತೆ ಸಮವಸ್ತ್ರ ಮಾತೇ ಕೇಳಿ ಬರುತ್ತಿಲ್ಲ. ಸಮವಸ್ತ್ರ ಆಸೆಯಲ್ಲಿರುವ ನೂರಾರು ಮಕ್ಕಳಿಗೆ ನಿರಾಸೆ ಮೂಡಿಸಿದೆ. ನೀಲಿ ಬಣ್ಣ ಸಮವಸ್ತ್ರ ನಂತರ ಬಣ್ಣದ ಸಮವಸ್ತ್ರ ನೀಡುವ ಪದ್ಧತಿ ಸರಕಾರಿ ಶಾಲೆಯಲ್ಲಿದೆ.

ಮನೆ-ಮನೆ ಅಲೆದಾಟ

ಶಾಲೆಯಿಂದ ಹೊರಗುಳಿದ ಮಕ್ಕಳು, ಹೊಸದಾಗಿ ಪ್ರವೇಶ ಪಡೆಯುವಂತಹ ಮಕ್ಕಳನ್ನು ಸರಕಾರಿ ಶಾಲೆಗೆ ಪ್ರವೇಶ ಪಡೆಯಲು ಪಟ್ಟಣ ಸೇರಿ ತಾಲೂಕಿನಾದ್ಯಂತ ಶಾಲಾ ಶಿಕ್ಷಕರು ಮಕ್ಕಳ ಪ್ರವೇಶಕ್ಕೆ ಮನೆ-ಮನೆಗೆ ಅಲೆಯುತ್ತಿದ್ದಾರೆ. ದಾಖಲಾತಿ ಹೆಚ್ಚಳಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರ ದುಂಬಾಲು ಬಿದ್ದಿದ್ದಾರೆ. ಅಲೆದು ಹೈರಾಣಾದರೂ ನಿಗದಿತ ಮಕ್ಕಳು ಪ್ರವೇಶ ಪಡೆಯಲು ಶಿಕ್ಷಕರು ಹರಸಾಹಸ ಪಡುತ್ತಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಪೂರೈಸುವ ಪಠ್ಯಪುಸ್ತಕಗಳು. ಈಗಾಗಲೇ ಶೇ.60 ಪೂರೈಸಲಾಗಿದೆ. ವಾರದಲ್ಲಿ ಕೊರತೆ ಪುಸ್ತಕಗಳು ಸರಬರಾಜು ಮಾಡಲಾಗುತ್ತಿದೆ. –ಆರ್‌.ಇಂದಿರಾ, ಬಿಇಒ

ಕೋವಿಡ್‌ ನಂತರ ಸರಕಾರಿ ಶಾಲೆಗಳು ಆರಂಭಗೊಂಡಿವೆ. ಆದರೀಗ ಕೆಲ ಶಾಲಾ ತರಗತಿಗಳಿಗೆ ಪಠ್ಯಪುಸ್ತಕಗಳು ಪೂರೈಕೆ ವಿಳಂಬವಾಗಿದೆ. ಸಮವಸ್ತ್ರ ಆದಷ್ಟು ಬೇಗ ಸರಬರಾಜು ಮಾಡಬೇಕು. -ಮಹಾಲಿಂಗ ದೊಡ್ಡಮನಿ, ಎಸ್‌ಎಫ್‌ಐ ಕಾರ್ಯದರ್ಶಿ

-ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next