Advertisement

6 ಸಾವಿರ ಸ್ವತ್ತುಗಳ ಹಗರಣದ ವರದಿ ಸಲ್ಲಿಕೆ

12:08 PM Mar 10, 2017 | |

ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ 5 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇ-ಸ್ವತ್ತು ತಂತ್ರಾಂಶದ ಮೂಲಕ 6 ಸಾವಿರ ಆಸ್ತಿಗಳಿಗೆ ನಿಯಮಬಾಹಿರವಾಗಿ ನಮೂನೆ 9 ಹಾಗೂ ನಮೂನೆ 11ಬಿ ವಿತರಿಸಿ ಬಳಿಕ ಅದನ್ನು ರದ್ದುಗೊಳಿಸಿದ ಹಗರಣಕ್ಕೆ ಸಂಬಂಧಿಸಿದ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

Advertisement

ಹಗರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಐಎಎಸ್‌ ಅಧಿಕಾರಿ ಆರ್‌.ಬಿ ಆಗವಾನೆ ನೇತೃತ್ವದ ಸಮಿತಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ತನಿಖಾ ವರದಿ ಸಲ್ಲಿಸಿದೆ. ಅದರಲ್ಲಿ ಬೆಂಗಳೂರು ಉತ್ತರ ತಾಲೂಕಿನ ಅರಕೆರೆ, ಹುರಳಿಚಿಕ್ಕನಹಳ್ಳಿ, ಮಾರೇನಹಳ್ಳಿ, ಬಾಗಲೂರು ಹಾಗೂ ಹೆಸರುಘಟ್ಟ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಪಿಡಿಒ, ಕಾರ್ಯದರ್ಶಿ, ಡಾಟಾ ಎಂಟ್ರಿ ಅಪರೇಟರ್‌ಗಳನ್ನು ಆರೋಪಿತರು ಎಂದು ಹೇಳಲಾಗಿದೆ. ಅವರೆಲ್ಲರ ವಿರುದ್ಧ ಐಪಿಸಿ ಸೆಕ್ಷನ್‌ 120(ಬಿ), 420, 474 ಹಾಗೂ 465 ಕಲಂಗಳಡಿ ದೂರು ದಾಖಲಿಸುವಂತೆ ಶಿಫಾರಸು ಮಾಡಲಾಗಿದೆ.

ಅದೇ ರೀತಿ ಕೆಲವು ಲ್ಯಾಂಡ್‌ ಡೆವೆಲಪರ್ಸ್‌, ಕಂದಾಯ ಇಲಾಖೆ ಉಪನೋಂದ ಣಾಧಿಕಾರಿ, ತಹಶೀಲ್ದಾರ್‌, ರಾಜಸ್ವ ನೀರಿಕ್ಷಕರು, ಗ್ರಾಮ ಲೆಕ್ಕಾಧಿ ಕಾರಿಗಳು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ವಹಿಸಿ ಅನಧಿಕೃತ ಬಡಾವಣೆ ನಿರ್ಮಾ ಣಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣರಾಗಿದ್ದು, ಇವರುಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆಯೂ ಸಮಿತಿ ಶಿಫಾರಸು ಮಾಡಿದೆ. 

ವಿಚಾರಣಾಧಿಕಾರಿ ನೇಮಕ: ತನಿಖಾ ವರದಿಯ ಶಿಫಾರಸುಗಳ ಮೇಲೆ ಸರ್ಕಾರದ ಆದೇಶದಂತೆ ಕ್ರಮದ ನಂತರ ಸಂಬಂಧಿಸಿದವರ ಮೇಲೆ ಹೊರಿಸಲಾದ ಆರೋಪಗಳ ಕುರಿತು ವಿಚಾರಣೆ ನಡೆಸಿ ಸರ್ಕಾರಕ್ಕೆ ವಿಚಾರಣಾ ವರದಿ ಸಲ್ಲಿಸಲು ಕೋಲಾರ ಜಿ.ಪಂ. ಸಿಇಒ ಬಿ.ಬಿ. ಕಾವೇರಿ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ವಿಚಾರಣಾ ಧಿಕಾರಿಗಳಿಗೆ ಸಹಕರಿಸಲು ಕರ್ನಾಟಕ ಸಚಿವಾಲಯದ ನಿವೃತ್ತ ಅಧೀನ ಕಾರ್ಯ ದರ್ಶಿ ಎಸ್‌.ಯು. ಶಿವಪ್ಪ ಅವರನ್ನು ನೇಮಿಸಿ ಗ್ರಾಮೀಣಾಭಿವೃದ್ಧಿ ಇಲಾಖೆ ಮಾ.7ರಂದು ಆದೇಶ ಹೊರಡಿಸಿದೆ.

ಏನಿದು ಹಗರಣ?
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಯೇತರ ಆಸ್ತಿಗಳು, ಗ್ರಾಮಠಾಣಾದಿಂದ ಅನುಮೋದನೆ ಪಡೆದ ನಿವೇಶನ ಮತ್ತು ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ನಿವೇಶನಗಳಿಗೆ ನಮೂನೆ 9 ಮತ್ತು 11ಬಿ ಅಡಿ ಖಾತಾ ಮಾಡಿ ಕೊಡುವ ಅಧಿಕಾರ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಿರುತ್ತದೆ.

Advertisement

ಆದರೆ, ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಭೂಮಾಫಿಯಾ ಜೊತೆಗೆ ಶಾಮೀಲಾಗಿ ಅಧಿಕಾರ ದುರ್ಬಖಕೆ ಮಾಡಿಕೊಂಡು ಕಂದಾಯ, ಕೃಷಿಯೇತರ ಕಂದಾಯ ಜಮೀನು, ಗ್ರಾಮಠಾಣಾದಿಂದ ಅನುಮೋದನೆ ಪಡೆದುಕೊಳ್ಳದ ನಿವೇಶ ಮತ್ತು ಆಸ್ತಿಗಳಿಗೆ ನಮೂನೆ 9 ಮತ್ತು 11ಬಿ ನೀಡಿದ್ದರು.

ಅದರಂತೆ ಕಳೆದ ನಾಲ್ಕೈದು ವರ್ಷಗಳಲ್ಲಿ ಬೆಂಗಳೂರು ಉತ್ತರ ತಾಲೂಕಿನ 5 ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ತಂತ್ರಾಂಶ ಮೂಲಕ 6,510 ಆಸ್ತಿಗಳಿಗೆ ಕಾನೂನುಬಾಹಿರವಾಗಿ ನಮೂನೆ 9 ಮತ್ತು 11ಬಿ ಖಾತೆಗಳನ್ನು ನೀಡಲಾಗಿದೆ. ಇದರಿಂದ 400 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಅಂದಾಜಿಸಲಾಗಿತ್ತು. 5 ಗ್ರಾ.ಪಂ.15 ಮಂದಿಯನ್ನು 2016 ಡಿಸೆಂಬರ್‌ನಲ್ಲಿ ಅಮಾನತುಗೊಳಿಸಲಾಗಿತ್ತು.

ವರದಿಯಲ್ಲೇನಿದೆ?
ಹಗರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಪಿಡಿಒ, ಕಾರ್ಯದರ್ಶಿ, ಸಿಬ್ಬಂದಿಯ ಸಮಾನ ಹೊಣೆಗಾರರಾಗಿದ್ದಾರೆ. ಅದೇ ರೀತಿ ಉಪನೋಂದಣಾಧಿಕಾರಿಗಳು ದಾಖಲೆ ಪರಿಶೀಲಿಸುವುದು ತಮ್ಮ ಜವಾಬ್ದಾರಿ ಅಲ್ಲ. ಪಂಚಾಯಿತಿ ಅಧಿಕಾರಿಯ ಡಿಜಿಟಲ್‌ ಸಹಿ ಪರಿಗಣಿಸಿ ನೋಂದಣಿ ಮಾಡುವುದಾಗಿ ತಿಳಿಸಿದ್ದಾರೆ.

ಲ್ಯಾಂಡ್‌ ಡೆವೆಲಪ್‌ಮೆಂಟ್‌ ನಿಯಮಗಳ ಅವರಿವಿದ್ದರೂ, ಅನಧೀಕೃತ ಬಡಾವಣೆ ನಿರ್ಮಿಸಿದ್ದಾರೆ. ಲ್ಯಾಂಡ್‌ ಡೆವೆಲಪರ್ಸ್‌ ಹಾಗೂ ಉಪ ನೋಂದಣಾಧಿಕಾರಿ ಶಾಮೀಲಾಗಿ ವಂಚನೆ ಮಾಡಿದ್ದಾರೆ. ಹಸಿರು ವಲಯ ಹಾಗೂ ಕೃಷಿ ಭೂಮಿಯಲ್ಲಿ ಕೃಷಿಯೇತರ ಚಟುವಟಿಕೆ ನಡೆದಿರುವುದು ಗಮನಕ್ಕೆ ಬಂದಿದ್ದರೂ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಹೇಳಲಾಗಿದೆ. 

ಅಮಾನತುಗೊಂಡಿದ್ದ ಅಧ್ಯಕ್ಷರು, ಅಧಿಕಾರಿಗಳು
* ಬೆಂಗಳೂರು ಉತ್ತರ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಆರ್‌. ಬಾಬು.
* ಅರಕೆರೆ ಗ್ರಾ.ಪಂ. ಅಧ್ಯಕ್ಷ ಪುಟ್ಟಶಾಮಾಚಾರ್‌, ಪಿಡಿಓ ಶಿವಶಂಕರ್‌, ಕಾರ್ಯದರ್ಶಿ ವೆಂಕಟರಂಗನ್‌, 
* ಡಾಟಾ ಎಂಟ್ರಿ ಆಪರೇಟರ್‌ ಎಂ.ಎನ್‌. ಪ್ರವೀಣ್‌.
* ಹುರಳಿಚಿಕ್ಕನಹಳ್ಳಿ ಗ್ರಾ.ಪಂ: ಅಧ್ಯಕ್ಷೆ ಜಿ.ಮಹಾಲಕ್ಷ್ಮಿ, ಪಿಡಿಓ ಕೋಮಲ, ಕಾರ್ಯದರ್ಶಿ ಗಿರಿಯಪ್ಪ.
* ಮಾರೇನಹಳ್ಳಿ ಗ್ರಾ.ಪಂ: ಅಧ್ಯಕ್ಷೆ ಶೋಭಾ, ಕಾರ್ಯದರ್ಶಿ ರಾಜಶಂಕರ್‌.
* ಬಾಗಲೂರು ಗ್ರಾ.ಪಂ: ಅಧ್ಯಕ್ಷ ಸುಬ್ಬಯ್ಯ, ಕಾರ್ಯದರ್ಶಿ ನರೇಂದ್ರಬಾಬು.
* ಹೆಸರಘಟ್ಟ ಗ್ರಾ.ಪಂ: ಅಧ್ಯಕ್ಷ ಎಸ್‌. ನಾರಾಯಣ, ಎಸ್‌.ಎಸ್‌. ಗಿರೀಶ್‌,  ಕಾರ್ಯದರ್ಶಿ ಗಿರಿಯಪ್ಪ.

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next