ಬೆಂಗಳೂರು: ರಾಜ್ಯದ 6 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಒಟ್ಟು 5 ಜಿಲ್ಲೆಗಳ 4 ನಗರಸಭೆ, 1 ಪುರಸಭೆ, 1 ಪಟ್ಟಣ ಪಂಚಾಯ್ತಿ ಸೇರಿ 6 ನಗರ ಸ್ಥಳೀಯ ಸಂಸ್ಥೆಗಳ 167 ವಾರ್ಡ್‌ಗಳಲ್ಲಿ ಫೆ.9ರಂದು ಚುನಾವಣೆ ನಡೆಯಲಿದೆ. ಆಯಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜ.14ರಿಂದ ಫೆ.11ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.
ಇದೇ ವೇಳೆ ನ್ಯಾಯಾಲಯ ಆದೇಶದಂತೆ ತೆರವುಗೊಂಡಿರುವ ಮೈಸೂರು ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ 18, ಸದಸ್ಯರ ನಿಧನದಿಂದ ತೆರವಾಗಿರುವ ಬೆಳಗಾವಿ ಜಿಲ್ಲೆ ಖಾನಾಪುರ ಪಪಂ ವಾರ್ಡ್ ಸಂಖ್ಯೆ 5, ಹಾವೇರಿ ಜಿಲ್ಲೆ ಹಿರೇಕೆರೂರು ಪಪಂ ವಾರ್ಡ್ ಸಂಖ್ಯೆ 12ರಲ್ಲಿ ಉಪ ಚುನಾವಣೆ ನಡೆಯಲಿದೆ.
ಅಲ್ಲದೇ ರಾಜ್ಯದ 1 ಜಿಪಂ, 11 ತಾಪಂಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೂ ಉಪ ಚುನಾವಣೆ ನಡೆಯಲಿದೆ. ಉಪ ಚುನಾವಣೆ ನಡೆಯಲಿರುವ ಜಿಪಂ, ತಾಪಂ ಕ್ಷೇತ್ರಗಳಲ್ಲಿ ಜ.25ರಿಂದ ಫೆ.11ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ.
ಎಲ್ಲೆಲ್ಲಿ ಚುನಾವಣೆ?: ಬೆಂ.ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರಸಭೆ 31 ವಾರ್ಡ್, ಚಿಕ್ಕಬಳ್ಳಾಪುರ ನಗರಸಭೆ 31, ಮೈಸೂರು ಜಿಲ್ಲೆ ಹುಣಸೂರು ನಗರಸಭೆ 31, ಬಳ್ಳಾರಿ ಜಿಲ್ಲೆ ಸಿರಗುಪ್ಪ ನಗರಸಭೆ 31, ತೆಕ್ಕಲಕೋಟೆ ಪಪಂ 20, ವಿಜಯಪುರ ಜಿಲ್ಲೆ ಸಿಂಧಗಿ ಪುರಸಭೆ 23 ಸೇರಿ ಒಟ್ಟು 167 ವಾರ್ಡ್ ಗಳಲ್ಲಿ ಚುನಾವಣೆ ನಡೆಯಲಿದೆ.
ಚುನಾವಣಾ ವೇಳಾಪಟ್ಟಿ
-ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಧಿಸೂಚನೆ: ಜ.21
-ನಾಮಪತ್ರ ಸಲ್ಲಿಸಲು ಕೊನೇ ದಿನ: ಜ.28
-ನಾಮಪತ್ರ ಪರಿಶೀಲನೆ: ಜ.29
-ಉಮೇದುವಾರಿಕೆ ವಾಪಸ್‌ಗೆ ಕೊನೆ ದಿನ: ಜ.31
-ಮತದಾನ: ಫೆ.9 (ಬೆಳಗ್ಗೆ 7ರಿಂದ ಸಂಜೆ 5)
-ಮರು ಮತದಾನ (ಅವಶ್ಯವಿದ್ದರೆ): ಫೆ.10
-ಮತ ಎಣಿಕೆ: ಫೆ.11 (ಬೆ.8ರಿಂದ ತಾಲೂಕು ಕೇಂದ್ರಗಳಲ್ಲಿ).