Advertisement

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

07:51 PM Dec 29, 2024 | Team Udayavani |

ದಾವಣಗೆರೆ: ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣ ಬಹಳ ಬೆಳಸದೆ ಮುಗಿಸೋಣ ಅಂದಿದ್ದೆ. ಈಗ ರವಿ 7 ಪುಟದ ದೂರು, ಸಚಿವೆ ಹೆಬ್ಬಾಳ್ಕರ್ ಸಹ ದೂರು ಕೊಟ್ಟಿದ್ದು, ಎರಡನ್ನೂ ಪೊಲೀಸರಿಗೆ ಕಳಿಸಿ, ವರದಿ ಬಂದ ನಂತರ ನಮ್ಮದೇ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಷತ್ತಿನಲ್ಲಿ ನಡೆದ ಪ್ರಕರಣದ ಬಗ್ಗೆ ನನ್ನ ಪಾತ್ರದ ಬಗ್ಗೆ ಮಾತ್ರ ಹೇಳುತ್ತೇನೆ. ಸರಕಾರ ಹೇಳುವುದರ ಬಗ್ಗೆ ನಾನು ಹೇಳಲ್ಲ ಎಂದರು. ಪರಿಷತ್ತಿನ ಪ್ರಕರಣವನ್ನು ಸರಕಾರ ಸಿಬಿಐ ಕೊಡುತ್ತದೆಯೋ, ಮತ್ತೊಂದಕ್ಕೆ ಕೊಡುತ್ತದೆಯೋ ಅದು ನನಗೆ ಸಂಬಂಧಿಸದ ವಿಷಯ. ಡಿ.19ರಿಂದ ನಾನು ಇಡೀ ಪ್ರಕರಣವನ್ನು ಅಭ್ಯಾಸ ಮಾಡಿ, ದಾಖಲೆಗಳನ್ನು ನೋಡಿ, ಒಂದು ತೀರ್ಮಾನ ಕೊಟ್ಟೆ. ನನ್ನ ತೀರ್ಮಾನದ ನಂತರ ನಾನು ಬೇರೆ ಏನೂ ಹೇಳುವಂತಿಲ್ಲ ಎಂದು ತಿಳಿಸಿದರು.

ಕೆಲವರು ಈಗ ಏನೇನೋ ಹೇಳುತ್ತಿದ್ದಾರೆ. ಟಿವಿಯಲ್ಲಿ ಬಂದಿದೆ, ರವಿ ಬದಿದ್ದು ಅಂತಾರೆ. ಟಿವಿ ಅಂದ್ರೆ ಕೌನ್ಸಿಲ್ ಟಿವಿ, ಕೌನ್ಸಿಲ್ ಸಿಸಿ ಕ್ಯಾಮೆರಾ, ಕೌನ್ಸಿಲ್ ಆಡಿಯೋಗಳೆಲ್ಲಾ ನಮಗೆ ಅಧಿಕೃತ. ಬೇರೆಯವರದ್ದು ಬಂದಿದ್ದರೆ ಅದನ್ನೂ ಕೊಡಲಿ. ಯಾರಾದರೂ ಅಂತಹ ಆಡಿಯೋ, ವೀಡಿಯೋಗಳನ್ನು ಕೊಟ್ಟರೆ ಅದನ್ನೂ ಪರಿಶೀಲನೆಗೆ ಎಫ್‌ಎಸ್‌ಎಲ್ ಗೆ ಕಳಿಸುವುದಾಗಿ ಹೇಳಿದ್ದೇನೆ ಎಂದು ತಿಳಿಸಿದರು.

ಯಾರೋ ಒಬ್ಬರು ಹೇಳಿದ್ದು, ಟಿವಿಯವರಿಗೆ ಸಭಾಪತಿಗಳೇ ಅವಕಾಶ ನೀಡಿದ್ದಾರೆ. ಈಗ ಅದೇ ಟಿವಿಯವರು ಹೇಳಿದ್ದು ತಪ್ಪಾ ಅಂತಾ ಪ್ರಶ್ನಿಸುತ್ತಿದ್ದಾರೆ. ಟಿವಿಯವರು ಹೇಳಿದ್ದನ್ನೂ ಪರಿಶೀಲಿಸಬೇಕಾಗುತ್ತದೆ. ಹಾಗಾಗಿಯೇ ಇದನ್ನೆಲ್ಲಾ ಬಹಳ ಸಲ ಬೆಳಸದೆ ಮುಗಿಸೋಣ ಅಂತಾನೂ ಹೇಳಿದ್ದೇನೆ. ಹಾಗೆಂದು ಅಂತಹವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ನಾನು ಅಡ್ಡಿ ಬರುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next