ಹೊಸದಿಲ್ಲಿ : ಮುಂದಿನ ಸೋಮವಾರ ಮೇ 6ರಂದು ನಡೆಯುವ ಐದನೇ ಹಂತದ 2019ರ ಲೋಕಸಭಾ ಚುನಾವಣೆಯು 674 ಅಭ್ಯರ್ಥಿಗಳ ಭವಿಷ್ಯವನ್ನು ತೀರ್ಮಾನಿಸಲಿದೆ.
ಐದನೇ ಹಂತದಲ್ಲಿ ಕಣದಲ್ಲಿರುವ 674 ಅಭ್ಯರ್ಥಿಗಳ ಪೈಕಿ 184 ಮಂದಿ ಕರೋಡ್‌ಪತಿಗಳಿರುವುದು ವಿಶೇಷವಾಗಿದೆ. ಹಾಗೆಯೇ ಕಣದಲ್ಲಿರುವವರ ಪೈಕಿ 384 ಮಂದಿ ಪದವೀಧರ ಅಭ್ಯರ್ಥಿಗಳಾಗಿದ್ದಾರೆ.
ಹಿಂದೆ ಬಾಲಿವುಡ್ ನಟನಾಗಿದ್ದು ರಾಜಕಾರಣಿಯಾಗಿ ಪರಿವರ್ತಿರಾಗಿರುವ ಶತ್ರುಘ್ನ ಸಿನ್ಹಾ ಅವರ ಪುತ್ನಿ ಪೂನಂ ಸಿನ್ಹಾ ಅವರು ಅತ್ಯಂತ ಸಿರಿವಂತ ಅಭ್ಯರ್ಥಿಯಾಗಿದ್ದಾರೆ.
ಅಂದ ಹಾಗೆ ಪೂನಂ ಅವರು ಕಣದಲ್ಲಿರುವ 79 ಮಹಿಳಾ ಅಭ್ಯರ್ಥಿಗಳ ಪೈಕಿ ಓರ್ವರಾಗಿದ್ದಾರೆ. ಪೂನಂ ಸಿನ್ಹಾ ಅವರು 193 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಗಳ ಒಡತಿಯಾಗಿದ್ದಾರೆ. ಈಕೆ ಎಸ್‌ಪಿ ಅಭ್ಯರ್ಥಿಯಾಗಿ ಲಕ್ನೋ ಕ್ಷೇತ್ರದಿಂದ ಗೃಹ ಸಚಿವ ರಾಜನಾಥ್ ಸಿಂಗ್ ಎದುರು ಸ್ಪರ್ಧಿಸುತ್ತಿದ್ದಾರೆ.
ಪೂನಂ ಬಳಿಕದ ಎರಡನೇ ಅತ್ಯಂತ ಸಿರಿವಂತ ಅಭ್ಯರ್ಥಿ ಎಂದರೆ ಪ್ರಗತಿಶೀಲ ಸಮಾಜವಾದಿ ಪಕ್ಷದ (ಲೋಹಿಯಾ) ದ ಸೀತಾಪುರ ಕ್ಷೇತ್ರದ ಅಭ್ಯರ್ಥಿ ಇವರ ಅನಂತರ ಬಿಜೆಪಿಯ ಜಯಂತ್ ಸಿನ್ಹಾ ಅವರು 77 ಕೋಟಿ ರೂ. ಆಸ್ತಿಪಾಸ್ತಿಯ ಒಡೆಯರಾಗಿ ಹಜಾರೀಬಾಗ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಐದನೇ ಹಂತದ ಚುನಾವಣೆಯು ಆರು ರಾಜ್ಯಗಳಲ್ಲಿನ 50 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ. ಭದ್ರತಾ ಕಾರಣಗಳಿಗಾಗಿ ಮೂರು ಹಂತದ ಮತದಾನವನ್ನು ಕಾಣುತ್ತಿರುವ ದೇಶದ ಏಕೈಕ ಏಕ-ಕ್ಷೇತ್ರವಾಗಿರುವ ಜಮ್ಮು ಕಾಶ್ಮೀರದ ಅನಂತನಾಗ್ ನಲ್ಲೂ ಮತದಾನ ನಡೆಯಲಿದೆ.