ಮುಂಬಯಿ: ಯಕ್ಷಗಾನದಲ್ಲಿ ಪಾರಿಭಾಷಿಕ ಶಬ್ಧವನ್ನು ಬಳಸಿದರೆ, ಅದು ಅಭಾಸವಾಗುತ್ತದೆ. ಪ್ರಸಂಗದ ಸಂಪೂರ್ಣ ಅಧ್ಯಯನ, ವ್ಯಾಖ್ಯಾನಿಸುವ ರೀತಿ, ಎದುರಾಳಿಯ ಮಾತಿನ ಚಾಟಿಗೆ ಸಮರ್ಪಕವಾದ ಪ್ರತ್ಯುತ್ತರ, ಚೆಂಡೆಯ ಬಡಿತಕ್ಕೆ ಕುಣಿಯುವ ಚಾಕಚಕ್ಯತೆ ಅತ್ಯಂತ ಪ್ರಾಮುಖ್ಯವೆನಿಸುತ್ತದೆ. ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಯಕ್ಷಗಾನ ಬಯಲಾಟದಲ್ಲಿ ಏಕಾಗ್ರತೆ ಅತ್ಯಗತ್ಯವಾಗಿದೆ ಎಂದು ಥಾಣೆ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ಪೊಲ್ಯ ಉಮೇಶ್ ಶೆಟ್ಟಿ ಅವರು ಅಭಿಪ್ರಾಯಿಸಿದರು.
ನ. 19ರಂದು ಮೀರಾರೋಡ್ ಪೂರ್ವದ ಮೀರಾಗಾಂವ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಯಕ್ಷವೈಭವ ಮಕ್ಕಳ ಮೇಳಮುಂಬಯಿ ಇದರ 5ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು,ಅಳಿವಿಲ್ಲದ ಬದಲಾವಣೆಯೊಂದಿಗೆ ಜನರನ್ನುಆಕರ್ಷಿಸುವ ವಿಶೇಷತೆ ಯಕ್ಷಗಾನದಲ್ಲಿದೆ. ಬ್ರಹ್ಮಾಂಡವನ್ನೇ ಸೃಷ್ಟಿಸಿ, ಮೂರು ಲೋಕಗಳ
ಪರಿಚಯದೊಂದಿಗೆ ಆಧ್ಯಾತ್ಮಿಕ ಚಿಂತನೆ, ಧಾರ್ಮಿಕತೆಯನ್ನು ಬೋಧಿಸುವ ತಾಣ ರಂಗಸ್ಥಳವಾಗಿದೆ. ವಿವಿಧ ಕಲಾ ಪ್ರಕಾರಗಳೊಂದಿಗೆ ಯುವ ಪೀಳಿಗೆ ಭಾಗಿಯಾಗುವುದರಿಂದ ಸಂಸ್ಕೃತಿ, ಸಂಪ್ರದಾಯಗಳು ಶಾಶ್ವತವಾಗಿ ನೆಲೆಯೂರಲು ಸಾಧ್ಯವಾಗುತ್ತದೆ ಎಂದರು.
ಮಹಾರಾಷ್ಟ್ರ ಕನ್ನಡಿಗ ಕಲಾವಿದರ ಪರಿಷತ್ತುವಿನ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ, ಮೀರಾ-ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಾಂತಿಂಜ ಜನಾರ್ದನ್ ಭಟ್, ಯತಿರಾಜ ಉಪಾಧ್ಯಾಯ, ಮುಂಬಯಿ ಮಾನವ ಸೇವಾ ಸಂಘದ ಅಧ್ಯಕ್ಷ ಡಾ| ಹರೀಶ್ ಶೆಟ್ಟಿ, ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷೆ ಗೀತಾ ಬಿ. ಶೆಟ್ಟಿ, ಕಲಾಪೋಷಕರಾದ ಪುರುಷೋತ್ತಮ ಶೆಟ್ಟಿ, ಶೇಖರ್ ಪೂಜಾರಿ, ಡಾ| ಕಸ್ತೂರಿ ನಾಯಕ್ ಕಾರವಾರ, ಪಂಜದಗುತ್ತು ಸಂಪತ್ ಶೆಟ್ಟಿ, ಅರುಣೋದಯ ರೈ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಯಕ್ಷಗಾನದ ಗುರು, ಭಾಗವತ ಎಳ್ಳಾರೆ ಶಂಕರ ನಾಯಕ್ ಹಾಗೂ ಸಾಂತಿಂಜ ಜನಾರ್ದನ ಭಟ್ ದಂಪತಿಗಳೊಂದಿಗೆ ಗುರುವಂದನೆ ಸಲ್ಲಿಸಿ, ಗುರು ವಂದನೆಯೊಂದಿಗೆ ಯಕ್ಷ ವೈಭವದ ಕಲಾವಿದರು ಗೌರವಿಸಿದರು. ಯಕ್ಷ ವೈಭವ ಮಕ್ಕಳ ಮೇಳದ ಸ್ಥಾಪಕ ಯಕ್ಷಗಾನ ಗುರು ಭಾಗವತ ಎಳ್ಳಾರೆ ಶಂಕರ್ ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಲೇಖಕ ಅರುಣ್ ಶೆಟ್ಟಿ ಎರ್ಮಾಳ್ ಮತ್ತು ವೈ. ಟಿ. ಶೆಟ್ಟಿ ಹೆಜ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದ ಜಿ. ಕೆ. ಕೆಂಚನಕೆರೆ, ಯಕ್ಷಗಾನ ಕಲಾವಿದ ರಮೇಶ್ ಭಿರ್ತಿ, ಚೆಂಡೆ ವಾದಕ ಭಾಸ್ಕರ ಆಚಾರ್ಯ, ದೇವಲ್ಕುಂದ ಭಾಸ್ಕರ ಶೆಟ್ಟಿ, ರಂಗಕಲಾವಿದೆ ಪ್ರತಿಮಾ ಬಂಗೇರ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯೊಂದಿಗೆ ಸಮ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷವೈಭವ ಮಕ್ಕಳ ಮೇಳ ಮುಂಬಯಿ ಇದರ ಕಲಾವಿದರಿಂದ ಭಾಗವತ ಎಳ್ಳಾರೆ ಶಂಕರ ನಾಯ್ಕ ನಿರ್ದೇಶನದಲ್ಲಿ ಶಶಿಪ್ರಭಾ ಪರಿಣಯ ಬಯಲಾಟ ಪ್ರದರ್ಶನಗೊಂಡಿತು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.