Advertisement
ಶನಿವಾರ ಬೆಳಗ್ಗೆ 10.40ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮಿತ್ ಶಾ, ಸುಮಾರು 58 ಗಂಟೆಯ ರಾಜ್ಯ ಪ್ರವಾಸ ದಲ್ಲಿ ಸುಮಾರು 46 ಗಂಟೆ ಅವಧಿಯನ್ನು ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಚುನಾವಣಾ ಕಾರ್ಯತಂತ್ರ, ಸಮಾಲೋಚನೆಗೆ ಮೀಸಲಿಟ್ಟಿದ್ದು, ಸೋಮವಾರ ರಾತ್ರಿ 8.30ರ ವಿಮಾನದಲ್ಲಿ ದೆಹಲಿಗೆ ವಾಪಸಾದರು. ಅಮಿತ್‌ಶಾ ದೇಶಾದ್ಯಂತ ಪಕ್ಷ ಸಂಘಟನೆಯ ದೃಷ್ಟಿಯಿಂದ ದೇಶದ ದೊಡ್ಡ ರಾಜ್ಯಗಳಿಗೆ ಮೂರು ದಿನ, ಸಣ್ಣ ರಾಜ್ಯಗಳಿಗೆ ಎರಡು ದಿನ ಹಾಗೂ ಕೇಂದ್ರದಾಳಿತ ಪ್ರದೇಶಕ್ಕೆ ಒಂದು ದಿನದ ಪ್ರವಾಸ ಕೈಗೊಳ್ಳುತಿದ್ದು, ಎಲ್ಲಾ ಪ್ರವಾಸದಲ್ಲೂ ಪಕ್ಷ ಸಂಘಟನೆ ಹಾಗೂ ಪಕ್ಷವನ್ನು ಆ ರಾಜ್ಯದಲ್ಲಿ ಅಧಿಕಾರಕ್ಕೆ ತರುವ ವಿಚಾರ ಹೋರತುಪಡಿಸಿ ಬೇರ್ಯಾವುದರ ಅನಗತ್ಯ ಚರ್ಚೆಗೆ ಅವಕಾಶವೇ ನೀಡಿಲ್ಲ. ಅದೇ ರೀತಿ ರಾಜ್ಯದಲ್ಲೂ ಮೂರು ದಿನದಲ್ಲಿ ಸಭೆ, ಸಮಾರಂಭ, ಚರ್ಚೆ, ಮಾತುಕತೆ ಸೇರಿ ಪಕ್ಷ ಸಂಘಟನೆಗೆ ಪೂರಕವಾಗುವ 25ಕ್ಕೂ ಅಧಿಕ ಕಾರ್ಯಕ್ರಮ ನಡೆಸಿದ್ದಾರೆ. ಕೆಲವು ವಿಚಾರವಾಗಿ ಪಕ್ಷದ ನಾಯಕರನ್ನು ಬೆಂಡೆತ್ತುವ ಜತೆಗೆ ಚುನಾವಣೆಗೆ ಸಿದ್ಧಪಡಿಸುವ ಕೆಲಸ ಮಾಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯನ್ನು ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಪದಾಧಿಕಾರಿಗಳ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವ ಬಗ್ಗೆ ಅಮಿತ್ ಶಾ ಅವರು ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕೆಲವರು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಶಾ ಅವರು ಈ ಯೋಚನೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಪಕ್ಷದ ರಾಜ್ಯ ಘಟಕದಿಂದ ಕೆಲವೊಂದು ವಿವರಣೆಗಳನ್ನು ಕೇಳಿದ್ದಾರೆ. ಅಲ್ಲದೆ, ಬದಲಾವಣೆ ಮಾಡುವುದಾದರೆ ಹೊಸದಾಗಿ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ. ಶಾ ಅವರು ದೆಹಲಿಗೆ ತೆರಳಿದ ಬಳಿಕ ಬದಲಾವಣೆ ಕುರಿತಂತೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.