Advertisement

ಮೊದಲ ಹಂತದಲ್ಲಿ 500 ಎಲೆಕ್ಟ್ರಿಕ್‌ ಬಸ್‌

12:12 PM Jul 09, 2018 | Team Udayavani |

ಬೆಂಗಳೂರು: ಗುತ್ತಿಗೆ ಆಧಾರದಲ್ಲಿ 1,500 ಬಸ್‌ಗಳನ್ನು ಪಡೆದು ಸಾರಿಗೆ ಸೇವೆ ಕಲ್ಪಿಸಲು ಉದ್ದೇಶಿಸಿದ್ದ ಬಿಎಂಟಿಸಿ, ಆ ಪೈಕಿ ಮೊದಲ ಹಂತದಲ್ಲಿ 500 ಎಲೆಕ್ಟ್ರಿಕ್‌ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ.

Advertisement

ಒಟ್ಟಾರೆ ಮೂರು ಸಾವಿರ ಬಸ್‌ಗಳ ಪೈಕಿ 1,500 ಬಸ್‌ಗಳನ್ನು ಗುತ್ತಿಗೆ ಪಡೆದು ಸೇವೆ ಕಲ್ಪಿಸುವುದಾಗಿ 2017ರ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿತ್ತು. ಅದರಲ್ಲಿ ಈಗ 500 ಎಲೆಕ್ಟ್ರಿಕ್‌ ಬಸ್‌ಗಳನ್ನು ರಸ್ತೆಗಿಳಿಸಲಿದೆ. ಈ ಸಂಬಂಧ ಸಂಸ್ಥೆಯ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಟೆಂಡರ್‌ ಪ್ರಕ್ರಿಯೆ ಕೂಡ ಆರಂಭಗೊಳ್ಳಲಿದೆ.

ಡೀಸೆಲ್‌ ಬಸ್‌ಗಳಿಗಿಂತ ಕಡಿಮೆ ದರದಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ನೀಡಲು ಕಂಪನಿಗಳು ಮುಂದೆಬಂದಿವೆ. ಈಗಿರುವ ಡೀಸೆಲ್‌ ಆಧಾರಿತ ನಾನ್‌ ಎಸಿ ಬಸ್‌ಗಳಿಗೆ ಪ್ರತಿ ಕಿ.ಮೀ ಕಾರ್ಯಾಚರಣೆಗೆ 52 ರೂ. ತಗಲುತ್ತದೆ. ಆದರೆ, ಎಲೆಕ್ಟ್ರಿಕ್‌ ಬಸ್‌ಗಳನ್ನು ಪ್ರತಿ ಕಿ.ಮೀ.ಗೆ ಕೇವಲ 24.03 ರೂ. ವೆಚ್ಚದಲ್ಲಿ ಓಡಿಸಲು ಹೈದರಾಬಾದ್‌ ಮೂಲದ ಗೋಲ್ಡ್‌ಸ್ಟೋನ್‌ ಕಂಪನಿ ಮುಂದೆಬಂದಿದೆ.

ಇದರೊಂದಿಗೆ 6 ರೂ. ಇಂಧನ ಮತ್ತು 8 ರೂ. ನಿರ್ವಾಹಕ/ ಚಾಲಕನ ವೆಚ್ಚ ಸೇರಿ 40 ರೂ. ಆಗುತ್ತದೆ. ಅಂದರೆ, ನೇರವಾಗಿ ಪ್ರತಿ ಕಿ.ಮೀ.ಗೆ 12 ರೂ. ಉಳಿತಾಯ ಆಗಲಿದೆ. ಈ ಹಿನ್ನೆಲೆಯಲ್ಲಿ 12 ಮೀ. ಉದ್ದದ 500 ನಾನ್‌ ಎಸಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ಪಡೆಯಲು ಉದ್ದೇಶಿಸಿದೆ. 

ಬಿಎಂಟಿಸಿ ಬಸ್‌ಗಳು ಸಾಮಾನ್ಯವಾಗಿ ದಿನಕ್ಕೆ 200 ಕಿ.ಮೀ. ಸಂಚರಿಸುತ್ತವೆ. ಒಂದು ವೇಳೆ ಬಸ್‌ಗಳ ಖರೀದಿಗೆ ಕಂಪನಿಗಳಿಗೆ ಸರ್ಕಾರದ ಸಬ್ಸಿಡಿ ಸಿಗದಿದ್ದರೂ, ಎಲ್ಲ ವೆಚ್ಚವನ್ನು ಕಡಿತಗೊಳಿಸಿ ಕಿ.ಮೀ.ಗೆ ಕನಿಷ್ಠ 5 ರೂ. ಉಳಿತಾಯ ಆಗಲಿದೆ.

Advertisement

500 ಬಸ್‌ಗೆ ಲೆಕ್ಕಹಾಕಿದರೂ ನಿತ್ಯ ಈ 500 ಎಲೆಕ್ಟ್ರಿಕ್‌ ಬಸ್‌ಗಳಿಂದ ಕನಿಷ್ಠ 5 ಲಕ್ಷ ರೂ. ಉಳಿತಾಯ ಆಗಲಿದೆ. ಅಲ್ಲದೆ, ಡೀಸೆಲ್‌ ಆಧಾರಿತ ಬಸ್‌ಗಳು ಅಪ್ರಸ್ತುವಾಗಲಿದ್ದು, “ಪರಿಸರ ಸ್ನೇಹಿ’ ಬಸ್‌ಗಳಿಗೆ ಮಾತ್ರ ಭವಿಷ್ಯವಿದೆ. ಈ ಎಲ್ಲ ದೃಷ್ಟಿಯಿಂದ ನಿಗಮವು ಎಲೆಕ್ಟ್ರಿಕ್‌ ಬಸ್‌ಗಳತ್ತ ಮುಖಮಾಡಿದೆ ಎಂದು ಹೆಸರು ಹೇಳಲಿಚ್ಛಿಸದ ಉನ್ನತ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಇನ್ನಷ್ಟು ಕಡಿಮೆ ದರದ ನಿರೀಕ್ಷೆ: ಅಷ್ಟೇ ಅಲ್ಲ, ನೂರಾರು ಬಸ್‌ಗಳಿಗೆ ಟೆಂಡರ್‌ ಕರೆದಾಗ ಈ ದರ ಇನ್ನೂ ಕಡಿಮೆ ಆಗುವ ಸಾಧ್ಯತೆ ಇದೆ. ಹೀಗೆ ಟೆಂಡರ್‌ ಕರೆಯುವಾಗ ಎಸಿ, ನಾನ್‌ ಎಸಿ 9 ಮತ್ತು 12 ಮೀ. ಉದ್ದ ಸೇರಿ ನಾಲ್ಕೂ ಮಾದರಿಯ ಬಸ್‌ಗಳಿಗೆ ಟೆಂಡರ್‌ ಆಹ್ವಾನಿಸಲಾಗುವುದು. ಆಗ ಯಾವುದು ಕಡಿಮೆ ದರದಲ್ಲಿ ದೊರೆಯುವುದೋ ಅದಕ್ಕೆ ಟೆಂಡರ್‌ ನೀಡಲಾಗುವುದು ಎಂದು  ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next