ಬೆಂಗಳೂರು: ಪ್ರಸಕ್ತ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಐಚ್ಛಿಕಗಳನ್ನು (ಆಪ್ಷನ್) ದಾಖಲಿಸಲು ಅವಕಾಶ ಪಡೆದ ಮೊದಲ ದಿನವೇ 30 ಸಾವಿರ ಅಭ್ಯರ್ಥಿಗಳು ತಮ್ಮ ಆದ್ಯತೆಯ ಕೋರ್ಸ್‌ಗಳಿಗೆ ಐದು ಲಕ್ಷ ಆಪ್ಷನ್‌ಗಳನ್ನು ದಾಖಲಿಸಿದ್ದಾರೆ.
ಭಾನುವಾರ ಬೆಳಗ್ಗೆ 7ರಿಂದ ಆಪ್ಷನ್ ದಾಖಲಿಸಲು ಕೆಇಎ ಅವಕಾಶ ನೀಡಿತ್ತು. ಮೊದಲ ಎರಡು ಗಂಟೆ ಸರ್ವರ್ ನಿಧಾನವಿದ್ದ ಕಾರಣ ಸಮಸ್ಯೆಯಾಗಿತ್ತು. ನಂತರ ಸಮಸ್ಯೆ ಪರಿಹರಿಸಿದ ಬಳಿಕ ಅಭ್ಯರ್ಥಿಗಳು ತಮ್ಮ ಇಚ್ಛೆಯನುಸಾರ ಕೋರ್ಸ್‌ಗಳನ್ನು ದಾಖಲಿಸುವ ಕೆಲಸವನ್ನು ಸರಾಗವಾಗಿ ಮಾಡಿದ್ದಾರೆಂದು ಕೆಇಎಯ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯ ತಿಳಿಸಿದ್ದಾರೆ.
ಐದು ಲಕ್ಷ ಆಪ್ಷನ್ ಎಂಟ್ರಿಗಳಲ್ಲಿ ಮೂರು ಲಕ್ಷ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಸಂಬಂಧಿಸಿದ ಎಂಟ್ರಿಗಳೇ ಇವೆ. ವೈದ್ಯಕೀಯ ಕೋರ್ಸ್‌ಗೆ ಸಂಬಂಧಿಸಿದಂತೆ 1.25 ಲಕ್ಷ ಎಂಟ್ರಿಗಳು ಇವೆ. ಉಳಿದ 75 ಸಾವಿರ ಆಪ್ಷನ್ ಎಂಟ್ರಿಗಳು ಕೃಷಿ, ಪಶುವೈದ್ಯಕೀಯ ಸೇರಿದಂತೆ ಇತರ ಕೋರ್ಸ್‌ಗಳಿಗೆ ಸಂಬಂಧಿಸಿದ್ದಾಗಿವೆ ಎಂದು ಅವರು ವಿವರಿಸಿದ್ದಾರೆ.
ಅಣಕು ಫಲಿತಾಂಶ ಬಂದ ನಂತರ ಅಂದರೆ ಆ.11ರಿಂದ 14ರ ಬೆಳಿಗ್ಗೆ 11ರವರೆಗೂ ತಮ್ಮ ಆಪ್ಷನ್ ಗಳನ್ನು ಬದಲಿಸಲು ಅವಕಾಶ ಇರುತ್ತದೆ. ಇದೇ 16ರಂದು ಸಂಜೆ 6ಗಂಟೆಗೆ ಮೊದಲ ಸುತ್ತಿನ ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ರಮ್ಯಾ ಅವರು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಕೋರ್ಸ್‌ಗಳಿಗೆ ಏಕಕಾಲದಲ್ಲಿ ಆದ್ಯತೆಯನುಸಾರ ಆಪ್ಷನ್ ಎಂಟ್ರಿ ಮಾಡಲು ಅವಕಾಶ ನೀಡಲಾಗಿದೆ. ಇದರಿಂದ ಸಮಯ ಉಳಿತಾಯವಾಗುತ್ತಿದ್ದು, ಎಲ್ಲವೂ ಒಮ್ಮೆಗೇ ಮುಗಿಯಲಿದೆ ಎಂದು ಎಸ್. ರಮ್ಯ ಹೇಳಿದರು.
ಆಪ್ಷನ್ ಎಂಟ್ರಿಗೆ ಇದೇ 9ರವರೆಗೆ ಅವಕಾಶ ಇದ್ದು, 10ರಂದು ಅಣಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಸಾಧ್ಯವಾದಷ್ಟು 9ರ ಮೊದಲೇ ತಮ್ಮ ಇಚ್ಛೆಯನುಸಾರ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಯಾವ ರೀತಿ ಆಪ್ಷನ್ ಎಂಟ್ರಿ ಮಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ವಿಡಿಯೊ ತುಣುಕು ವೆಬ್‌ಸೈಟ್‌ನಲ್ಲಿದ್ದು ಅದನ್ನು ನೋಡಿಕೊಂಡು ಆಪ್ಷನ್ ಎಂಟ್ರಿ ಮಾಡಬೇಕು. ಅಲ್ಲದೆ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಹೀಗೆ ಪ್ರತ್ಯೇಕ ಗುಂಪುಗಳನ್ನೂ ಮಾಡಿದ್ದು, ಅಲ್ಲಿ ಹೋಗಿ ಕ್ಲಿಕ್ ಮಾಡಿದರೆ ತಮ್ಮ ಇಚ್ಛೆಯ ಕೋರ್ಸ್ ಆಯ್ಕೆಗೂ ಸುಲಭವಾಗಲಿದೆ ಎಂದು ಅವರು ಎಸ್. ರಮ್ಯ ವಿವರಿಸಿದ್ದಾರೆ.