ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯ ಮೊದಲ ಎರಡು ದಿನಗಳಂದು ಪಟಾಕಿಯಿಂದ ನಗರದಲ್ಲಿ 46 ಮಂದಿಗೆ ಕಣ್ಣಿಗೆ ಹಾನಿ ಹಾಗೂ ಮೂವರಿಗೆ ಸುಟ್ಟ ಗಾಯಗಳಾಗಿವೆ. ಕಣ್ಣಿಗೆ ಹಾನಿಯಾದವರ ಪೈಕಿ ಮೂವರಿಗೆ ತೀವ್ರ ಪ್ರಮಾಣದಲ್ಲಿ ಹಾನಿಯಾಗಿದ್ದು, ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಕಿ 36 ಮಂದಿಗೆ ಚಿಕ್ಕಪುಟ್ಟ ಗಾಯವಾಗಿರುವುದರಿಂದ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ನಗರದ ಮಿಂಟೋ ಕಣ್ಣಿನ ಆಸ್ಪತ್ರೆ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಕಣ್ಣಿನ ಆಸ್ಪತ್ರೆ, ನೇತ್ರಧಾಮ ಆಸ್ಪತ್ರೆಯಲ್ಲಿ ಪಟಾಕಿಯಿಂದ ಹಾನಿಗೊಳಗಾದ ಹೆಚ್ಚಿನವರು ಚಿಕಿತ್ಸೆ ಪಡೆದಿದ್ದಾರೆ. ಇನ್ನು ಕಳೆದ ವರ್ಷ ದೀಪಾವಳಿಯ ಮೊದಲ ಎರಡು ದಿನ 18 ಮಂದಿ ಕಣ್ಣಿಗೆ ಹಾನಿಯಾಗಿತ್ತು. ಈ ಬಾರಿ ಅದರ ಪ್ರಮಾಣ ದುಪ್ಪಟ್ಟಾಗಿದೆ.
ಸೋಮವಾರ ಮಧ್ಯರಾತ್ರಿವರೆಗೂ ಚಾಮರಾಜಪೇಟೆಯ ಮಿಂಟೋ ಆಸ್ಪತ್ರೆಯಲ್ಲಿ 14 ಮಂದಿ ಪಟಾಕಿಯಿಂದ ಹಾನಿಗೊಳಗಾಗಿ ಚಿಕಿತ್ಸೆ ಪಡೆದಿದ್ದಾರೆ. ಅವರಲ್ಲಿ ಚಿಕ್ಕ ಪುಟ್ಟ ಹಾನಿಯಾಗಿದ್ದ 11 ಮಂದಿ ಹೊರರೋಗಿಗಳ ವಿಭಾಗದಲ್ಲಿಯೇ ಅಗತ್ಯ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಇನ್ನು ಹೆಚ್ಚಿನ ಹಾನಿಯಾಗಿದ್ದ ಮೂರು ಮಂದಿಯನ್ನು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ನಿರ್ದೇಶಕಿ ಸುಜಾತ ರಾಥೋಡ್ ತಿಳಿಸಿದ್ದಾರೆ.
ಮಕ್ಕಳಿಗೆ ಹೆಚ್ಚಿನ ಹಾನಿ: ಪಟಾಕಿಯಿಂದ ಹಾನಿಗೊಳಗಾದವರ ಪೈಕಿ ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ಮಿಂಟೋದಲ್ಲಿ ಎಂಟು ಮಂದಿ ಮಕ್ಕಳು, ನಾರಾಯಣದಲ್ಲಿ 13 ಮಂದಿ ಹಾಗೂ ಶಂಕರದಲ್ಲಿ 6 ಹಾಗೂ ನೇತ್ರಾಧಾಮ ಆಸ್ಪತ್ರೆಯಲ್ಲಿ ಒಂದು ಮಗು ಚಿಕಿತ್ಸೆ ಪಡೆದಿದೆ. ಇದರಲ್ಲಿ 5 ವರ್ಷಕ್ಕಿಂತಲೂ ಚಿಕ್ಕ ವಯಸ್ಸಿನ ಐದಾರು ಮಕ್ಕಳಿದ್ದಾರೆ.
ಮಿಂಟೋದಲ್ಲಿ ನಾಗೇಂದ್ರ ಬ್ಲಾಕ್‌ನ ನಿವಾಸಿ ವಿಜಯಕುಮಾರ್ ಅವರ ಎರಡೂವರೆ ವರ್ಷದ ಮಗು ಯುಕ್ತಶ್ರೀ ಹೂ ಕುಂಡ ನೋಡಲು ಹೋಗಿ ಕಿಡಿ ಹಾರಿ ಕಣ್ಣಿಗೆ ಗಾಯವಾಗಿದ್ದು, ಮುಖ ಸಹ ಸುಟ್ಟಿದೆ. ಪಟಾಕಿ ಹಚ್ಚುತ್ತಿದ್ದದ್ದನ್ನು ನೋಡುತ್ತ ನಿಂತಿದ್ದ ಏಳು ವರ್ಷದ ಮದನ್‌ಗೆ ಲಕ್ಷ್ಮೀ ಪಾಕಿ ಸಿಡಿದು ಎಡಗಣ್ಣಿನ ಗಾಯವಾಗಿದೆ. ಹನುಮಂತನಗರ ನಿವಾಸಿ 13 ವರ್ಷದ ಪಿ. ಪುಣ್ಯ ಎಂಬ ಬಾಲಕಿ ಹೂಕುಂಡ ಸರಿಯಾಗಿ ಹೊತ್ತಿಕೊಳ್ಳಲಿಲ್ಲ ಎಂದು ಪುನಃ ಹಚ್ಚಲು ಹೋದಾಗ ಅದು ಸಿಡಿದು ಕಿಡಿ ಕಣ್ಣಿಗೆ ಹಾನಿಯಾಗಿದೆ.
ಯಾರೋ ಹಚ್ಚಿದ ಪಟಾಕಿಯಿಂದ ಹಾನಿ: ಪುಲಕೇಶಿನಗರ ಫರಾನ್(17) ಭಾನುವಾರ ಸಂಜೆ ಮನೆಗೆ ತೆರಳುವ ವೇಳೆ ರಸ್ತೆ ಮಧ್ಯೆ ಯಾರೋ ಕಬ್ಬಿಣದ ಡಬ್ಬದಲ್ಲಿಟ್ಟು ಹಚ್ಚಿದ್ದ ಪಟಾಕಿಯಿಂದ ನೇರವಾಗಿ ಕಣ್ಣಿಗೆ ಸಿಡಿದು ಹಾನಿಯಾಗಿದೆ. ಸದ್ಯ ಲಾಲ್‌ಬಾಗ್ ಬಳಿಯ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
“ಯಾರೋ ಪಟಾಕಿ ಹಚ್ಚಿದ್ದ, ನನ್ನ ಮಗನಿಗೆ ಹಾನಿಯಾಗಿದೆ. ನೇರವಾಗಿ ಪಟಾಕಿ ಇದ್ದಿದ್ದರೆ ಕಾಣುತ್ತಿತ್ತು. ಡಬ್ಬದಲ್ಲಿ ಪಟಾಕಿ ಇಟ್ಟು ಹೊಡೆದ ಪರಿಣಾಮ ಹೀಗಾಗಿದೆ. ರಸ್ತೆಯಲ್ಲಿ ಡಬ್ಬ, ಬಾಟಲಿಯಲ್ಲಿಟ್ಟು ಹೊಡೆಯುವುದು ಮಾಡಬಾರದು. ವೈದ್ಯರು ಆಪರೇಷನ್ ಮಾಡಬೇಕು ಎನ್ನುತ್ತಿದ್ದು, ಹತ್ತಾರು ಸಾವಿರ ಹಣ ಖರ್ಚಾಗುತ್ತದೆ. ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾನೆ’ ಎಂದು ಹನಿಗಣ್ಣಾದರು.
ಅಂಕಿ- ಅಂಶ
ಮಿಂಟೋ ಕಣ್ಣಿನ ಆಸ್ಪತ್ರೆ – 14
ನಾರಾಯಣ ನೇತ್ರಾಲಯ – 15
ಶಂಕರ ಕಣ್ಣಿನ ಆಸ್ಪತ್ರೆ – 10
ಶೇಖರ್ ಆಸ್ಪತ್ರೆ- 5
ನೇತ್ರಧಾಮ ಕಣ್ಣಿನ ಆಸ್ಪತ್ರೆ – 02
ವಿಕ್ಟೋರಿಯಾ ಸುಟ್ಟಗಾಯಗಳ ಕೇಂದ್ರ – 03
ಒಟ್ಟು – 44