Advertisement

ಪ್ರಚಾರಕ್ಕೆ ಬಿಜೆಪಿಯಿಂದ 4 ವಾಹನ, ಕೇಸರಿ, ಹಸುರು ಬಣ್ಣ !

12:13 AM Apr 02, 2024 | Team Udayavani |

ಬೆಂಗಳೂರು: ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ನಡೆಸಲು ಅಣಿಯಾಗುತ್ತಿರುವ ಬಿಜೆಪಿ, ಪ್ರಚಾರಕ್ಕಾಗಿ 4 ವಾಹನಗಳಿಗೆ ಚಾಲನೆ ನೀಡಿದೆಯಲ್ಲದೆ, ಪ್ರಧಾನಿ ಮೋದಿ ಅವರ ಪ್ರಚಾರಕ್ಕಾಗಿ ಪ್ರತ್ಯೇಕ ಗುಂಡು ನಿರೋಧಕ ವಾಹನವನ್ನು ಸಜ್ಜುಗೊಳಿಸಿದೆ.

Advertisement

ವಾಹನಗಳ ಒಳಗೆ ಸಭೆ ನಡೆಸಬಹುದಾದ ಕಿರು ಕೊಠಡಿ ಇದ್ದು, ಇದು ಹವಾ ನಿಯಂತ್ರಿತವಾಗಿರಲಿದೆ. ಸೋಫಾ, ಟೀಪಾಯಿ ಹಾಗೂ ವಿಶ್ರಾಂತಿಗೂ ವ್ಯವಸ್ಥೆ ಇರಲಿದೆ. ಸಿಸಿ ಕೆಮರಾ ಕೂಡ ಅಳವಡಿಕೆ ಮಾಡಲಾಗಿದೆ. ಇದಲ್ಲದೆ, ತೆರೆದ ವೇದಿಕೆ ಮೇಲೆ ನಿಂತು ಅಭ್ಯರ್ಥಿಗಳ ಪರ ಪ್ರಚಾರ ನಡೆಸಲೂ ವ್ಯವಸ್ಥೆ ಇದ್ದು, ಪ್ರತಿ ವಾಹನದ ಮೇಲೂ ನಾಲ್ಕು ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ.

ಪ್ರತಿ ಬಾರಿ ಕೇಸರಿಮಯವಾಗಿರುತ್ತಿದ್ದ ಬಿಜೆಪಿ ಪ್ರಚಾರದ ವಾಹನಗಳು ಈ ಬಾರಿ ಜೆಡಿಎಸ್‌ ಜತೆಗಿನ ಮೈತ್ರಿಯಿಂದಾಗಿ ಎರಡೂ ಪಕ್ಷದ ಬಣ್ಣ ಮತ್ತು ಚಿಹ್ನೆಗಳನ್ನು ಹೊತ್ತು ನಿಂತಿವೆ. ವಾಹನದ ಸುತ್ತಲೂ ಮೇಲ್ಭಾಗದಲ್ಲಿ ಕೇಸರಿ ಹಾಗೂ ಕೆಳಭಾಗದಲ್ಲಿ ಹಸುರು ಬಣ್ಣ ಹೊಂದಿದ್ದು, ತೆನೆ ಹೊತ್ತ ಮಹಿಳೆ ಹಾಗೂ ಕಮಲದ ಚಿಹ್ನೆಯಿಂದ ಕೂಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂಗಳಾದ ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಸಹಿತ ಉಭಯ ಪಕ್ಷಗಳ ನಾಯಕರ ಭಾವಚಿತ್ರಗಳಿದ್ದು “ಈ ಬಾರಿ 400 ಮೀರಿ’ ಎನ್ನುವ ಘೋಷವಾಕ್ಯವನ್ನೂ ಮುದ್ರಿಸಲಾಗಿದೆ.

ಸೋಮವಾರ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದ ಬಳಿಕ ಪ್ರಚಾರ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್‌.ಮುನಿರಾಜು, ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೆ ಒಂದರಂತೆ ಒಟ್ಟು ನಾಲ್ಕು ಪ್ರಚಾರ ವಾಹನಗಳಿಗೆ ಚಾಲನೆ ನೀಡಲಾಗಿದೆ. ಆಯಾ ವಿಭಾಗದ ವ್ಯಾಪ್ತಿಯಲ್ಲಿ ಬರುವ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ನಡೆಯಲಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಕೇಶವಪ್ರಸಾದ್‌, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್‌.ಹರೀಶ್‌, ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ, ಮುಖಂಡ ಲೋಕೇಶ್‌ ಅಂಬೆಕಲ್ಲು ಮುಂತಾದವರಿದ್ದರು.

Advertisement

ಪ್ರಧಾನಿ ಮೋದಿಗಾಗಿ ಗುಂಡು ನಿರೋಧಕ ವಾಹನ
ಈಗಾಗಲೇ ಕಲಬುರಗಿ ಮತ್ತು ಶಿವಮೊಗ್ಗದಲ್ಲಿ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕನಿಷ್ಠ 4 ಬಾರಿ ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಅವರಿಗಾಗಿ ಪ್ರತ್ಯೇಕವಾದ ಗುಂಡುನಿರೋಧಕ ವಾಹನವನ್ನು ಸಜ್ಜುಗೊಳಿಸಲಾಗಿದೆ. ಇಡೀ ವಾಹನದ ತುಂಬಾ ಪ್ರಧಾನಿ ಮೋದಿ ಅವರ ಭಾವಚಿತ್ರವೇ ಇರಲಿದ್ದು, ಒಳಗೆ ಹವಾನಿಯಂತ್ರಿತ ಸಣ್ಣ ಕೊಠಡಿಗೆ ವ್ಯವಸ್ಥೆ ಇರಲಿದೆ. ತೆರೆದ ವೇದಿಕೆ ಮೇಲೆ ನಿಂತು ಭಾಷಣ ಮಾಡಲು, ಮತದಾರರತ್ತ ಕೈಬೀಸಿ ನಿಲ್ಲಲು ಅನುಕೂಲಗಳಿದ್ದು, ಅಲ್ಲಿಯೇ ಭಾಷಣ ಮಾಡುವುದಿದ್ದರೆ ಧ್ವನಿವರ್ಧಕದ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ವಾಹನ ಸಂಪೂರ್ಣ ಕೇಸರಿಮಯವಾಗಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next