Advertisement

3 ವರ್ಷದಲ್ಲಿ 34 ಲಕ್ಷ ಸಂಪರ್ಕ: ಧರ್ಮೇಂದ್ರ

02:41 PM Jun 18, 2017 | |

ಹುಬ್ಬಳ್ಳಿ: ಕರ್ನಾಟಕದಲ್ಲಿ 1955ರಿಂದ 2014ರವರೆಗೆ ಸುಮಾರು 84ಲಕ್ಷ ಅಡುಗೆ ಅನಿಲ ಸಂಪರ್ಕ ಇದ್ದವು. ಇದೀಗ ಅದು 1.10ಕೋಟಿ ಆಗಿದೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 34ಲಕ್ಷ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಹಾಯಕ ಸಚಿವ ಧಮೇಂದ್ರ ಪ್ರಧಾನ್‌ ಹೇಳಿದರು. 

Advertisement

ಪ್ರಧಾನಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಉಜ್ವಲ ಯೋಜನೆ ರಾಜ್ಯದಲ್ಲಿ ಅನುಷ್ಠಾನಕ್ಕೆ ಇಲ್ಲಿನ ನೆಹರು ಮೈದಾನದಲ್ಲಿ ಶನಿವಾರ ನಡೆದ ಬೃಹತ್‌ ಸಮಾವೇಶದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. 

ಉಜ್ವಲ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧಮೇಂದ್ರ ಪ್ರಧಾನ್‌, ದೇಶದಲ್ಲಿ ಕಳೆದ 70 ವರ್ಷಗಳಲ್ಲಿ ಸುಮಾರು 14 ಕೋಟಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಕೇವಲ ಮೂರೇ ವರ್ಷಗಳಲ್ಲಿ ಸುಮಾರು 6.90ಕೋಟಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಸಾಧನೆ ತೋರಿದೆ ಎಂದರು. 

ಕಳೆದೊಂದು ವರ್ಷದಲ್ಲಿ ದೇಶದಲ್ಲಿ ಸುಮಾರು 1.50 ಕೋಟಿ ಅಡುಗೆ ಅನಿಲ ಸಂಪರ್ಕ ಗುರಿ ಹೊಂದಲಾಗಿತ್ತು. ಒಂದು ವರ್ಷ ಒಂದು ತಿಂಗಳಲ್ಲಿ ಸುಮಾರು 2.25 ಕೋಟಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಮೂಲಕ ಗುರಿ ಮೀರಿದ ಸಾಧನೆ ತೋರಲಾಗಿದೆ ಎಂದರು. 

ಕರ್ನಾಟಕದಲ್ಲಿ 2011ರ ಸಾಮಾಜಿಕ ಆರ್ಥಿಕ ಜಾತಿ ಗಣತಿಯಲ್ಲಿ ಸುಮಾರು 36ಲಕ್ಷ ಬಡ ಕುಟುಂಬಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ಸುಮಾರು 5-6ಲಕ್ಷ ಕುಟುಂಬಗಳು ಅಡುಗೆ ಅನಿಲ ಸಂಪರ್ಕ ಹೊಂದಿವೆ. ಉಳಿದ ಅಂದಾಜು 30 ಲಕ್ಷ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಸಂಪರ್ಕ ಕಲ್ಪಿಸಲಾಗುವುದು ಎಂದರು. 

Advertisement

ಭಾರತೀಯ ತೈಲ ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕ ವೈ.ಕೆ.ಗುಪ್ತಾ ಪ್ರಾಸ್ತಾವಿಕ ಮಾತನಾಡಿ, ಇನ್ನು 2-3 ವರ್ಷಗಳಲ್ಲಿ ಕರ್ನಾಟಕದ ಎಲ್ಲ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗುತ್ತದೆ  ಎಂದರು. ಇದೇ ಸಂದರ್ಭದಲ್ಲಿ 30ಕ್ಕೂ ಅಧಿಕ ಫ‌ಲಾನುಭವಿಗಳಿಗೆ ಸಾಂಕೇತಿಕ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಿತರಿಸಲಾಯಿತು. 

ಕೇಂದ್ರ ಸಚಿವರಾದ ಅನಂತಕುಮಾರ, ರಮೇಶ ಜಿಗಜಿಣಗಿ, ರಾಜ್ಯದ ಸಚಿವರಾದ ಯು.ಟಿ.ಖಾದರ್‌, ವಿನಯ ಕುಲಕರ್ಣಿ, ಲೋಕಸಭಾ ಸದಸ್ಯರಾದ ಬಿ.ಎಸ್‌. ಯಡಿಯೂರಪ್ಪ, ಪ್ರಹ್ಲಾದ ಜೋಶಿ, ಸುರೇಶ ಅಂಗಡಿ, ಪಿ.ಸಿ. ಗದ್ದಿಗೌಡರ, ಶಿವಕುಮಾರ ಉದಾಸಿ, ಸಂಗಣ್ಣ ಕರಡಿ, 

-ರಾಜ್ಯಸಭಾ ಸದಸ್ಯ ಡಾ| ಪ್ರಭಾಕರ ಕೋರೆ, ವಿವಿಧ ಜಿಲ್ಲೆಗಳ ವಿಧಾನಸಭೆ ಹಾಗೂ ವಿಧಾನ ಪರಿಷತ್‌ ಹಾಲಿ-ಮಾಜಿ ಸದಸ್ಯರು, ತೈಲ ಕಂಪೆನಿಗಳು ಹಿರಿಯ ಅಧಿಕಾರಿಗಳು ಹಾಜರಿದ್ದರು. ವಿವಿಧ ಜಿಲ್ಲೆಗಳ ಸಾವಿರಾರು ಜನರು ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next