Advertisement

“ಉಡುಪಿ ಜಿಲ್ಲೆಯಲ್ಲಿ 300 ಮಂದಿ ನೆರೆ ಸಂತ್ರಸ್ತರ ರಕ್ಷಣೆ ‘

09:51 PM Sep 23, 2020 | Team Udayavani |

ಕಾಪು: ಭಾರೀ ಮಳೆ ಯಿಂದಾಗಿ ಹಾನಿಗೊಳಗಾಗಿರುವ ಕಾಪು ಲೈಟ್‌ಹೌಸ್‌ ಸುತ್ತಲಿನ ಪ್ರದೇಶಕ್ಕೆ ಎನ್‌ಡಿಆರ್‌ಆಫ್‌ 10 ಬೆಟಾಲಿಯನ್‌ ಪಡೆ ಬುಧವಾರ ಸಂಜೆ ಭೇಟಿ ನೀಡಿದ್ದು, ಮಳೆ ಹಾನಿಯನ್ನು ಪರಿಶೀಲಿಸಿತು. ಎನ್‌ಡಿಆರ್‌ಎಫ್‌ನ ಟೀಮ್‌ ಕಮಾಂಡರ್‌ ಗೋಪಾಲ್‌ ಲಾಲ್‌ ಮೀನಾ ಮಾತನಾಡಿ, ಮಳೆ ಮತ್ತು ಪ್ರವಾಹ ದಿಂದಾಗಿ ಉಡುಪಿ ಜಿಲ್ಲೆಯಲ್ಲಿ ಭಾರೀ ಹಾನಿಯುಂಟಾಗಿದೆ. ಕರಾವಳಿ ಪ್ರದೇಶವನ್ನೇ ಹೊಂದಿರುವ ಉಡುಪಿ ಜಿಲ್ಲೆ ಯುದ್ದಕ್ಕೂ ಚಾಚಿರುವ ಬೀಚ್‌ ಪ್ರದೇಶದ ಜನರು ಮುಂದಿನ ದಿನಗಳಲ್ಲಿ ಎಚ್ಚರ ವಹಿಸಬೇಕಾದ ಅಗತ್ಯತೆಯಿದೆ. ಕಾಪು ಲೈಟ್‌ ಹೌಸ್‌ ಪರಿಸರದಲ್ಲಿ ಉಂಟಾಗಿ ರುವ ಹಾನಿ ಬಗ್ಗೆ ಇಲ್ಲಿಗೆ ಸಂಬಂಧಪಟ್ಟ ಇಲಾಖೆಗಳೇ ಭೇಟಿ ನೀಡಿ, ಹಾನಿ ಪರಿಶೀಲನೆ ನಡೆಸಿ ದುರಸ್ತಿಗೆ ಬೇಕಾದ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.

Advertisement

300ಕ್ಕೂ ಅಧಿಕ ಮಂದಿಯ ರಕ್ಷಣೆ
ಉಡುಪಿ ಜಿಲ್ಲೆಯ ಪೆರಂಪಳ್ಳಿ, ಪಾಸ್‌ಕುದ್ರು, ಕಲ್ಯಾಣಪುರ, ಬ್ರಹ್ಮಾವರ, ಉಪ್ಪೂರು, ಶಿವಳ್ಳಿ, ಆರೂರು, ಹಿರಿಯಡಕ ಮತ್ತು ಕಾಪು ಸೇರಿದಂತೆ ವಿವಿಧೆಡೆ ಯಶಸೀ ಕಾರ್ಯಾಚರಣೆ ನಡೆಸಲಾಗಿದ್ದು, 300ಕ್ಕೂ ಅಧಿಕ ಮಂದಿಯನ್ನು ಪ್ರವಾಹ ಕಾಲದಲ್ಲಿ ರಕ್ಷಿಸಲಾಗಿದೆ. ಪಾಸ್‌ ಕುದ್ರು, ಆರೂರು ಮತ್ತು ಕಲ್ಯಾಣಪುರ ಪರಿಸರದಲ್ಲಿ ಭಾರೀ ಅಪಾಯದ ಸ್ಥಿತಿಯ ನಡುವೆಯೂ 70 ಮಂದಿಯನ್ನು ರಕ್ಷಿಸಲಾಗಿದೆ. ಜನರೊಂದಿಗೆ ಜಾನುವಾರುಗಳನ್ನೂ ರಕ್ಷಿಸಲಾಗಿದ್ದು ನಮ್ಮೊಂದಿಗೆ ಸ್ಥಳೀಯರೂ ಸೇರಿದಂತೆ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಅಗ್ನಿಶಾಮಕದಳ, ಗೃಹರಕ್ಷಕದಳ ಮತ್ತು ಜನಪ್ರತಿನಿಧಿಗಳ ತಂಡ ಸಂಪೂರ್ಣವಾಗಿ ಸಹಕಾರ ನೀಡಿದೆ ಎಂದರು.

ಸ್ವಯಂ ಜಾಗೃತಿ ಅಗತ್ಯ
ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಜನರು ವಿದ್ಯಾವಂತರಾಗಿದ್ದು ಮಳೆಯಿಂದಾಗಿ ಸಂಭವಿಸಬಹುದಾದ ಹಾನಿಗಳ ಬಗ್ಗೆ ಮೊದಲೇ ಎಚ್ಚೆತ್ತು ಕೊಂಡಿರುವುದರ ಪರಿಣಾಮ ಜೀವ ಹಾನಿಯಾಗುವುದು ತಪ್ಪಿದೆ. ನೆರೆಯ ಸಂದರ್ಭದಲ್ಲಿ ಸೊತ್ತು ಹಾನಿಯನ್ನು ತಡೆಯುವುದು ಅಸಾಧ್ಯವಾಗಿದ್ದು ಎನ್‌ಡಿಆರ್‌ಎಫ್‌ ತುಕಡಿಯು ಮಳೆ ಹಾನಿ, ನೆರೆ ಹಾನಿಯ ಸಂದರ್ಭದಲ್ಲಿ ತೊಂದರೆಗೊಳಗಾಗಿರುವ ಜನರನ್ನು ರಕ್ಷಿಸಲು ಹೆಚ್ಚಿನ ಆದ್ಯತೆ ನೀಡುತ್ತಾ ಬರುತ್ತಿದೆ. ಇಂತಹ ಸಂದರ್ಭಗಳಲ್ಲಿ ಜನರೇ ಸ್ವಯಂ ಜಾಗೃತಿ ಮೂಡಿಸಿಕೊಳ್ಳುವುದು ಅತೀ ಅಗತ್ಯವಾಗಿದೆ.

ಉತ್ತರಾ ಮಳೆ ಉಡುಪಿ ಜಿಲ್ಲೆಯಲ್ಲಿ ಭಾರೀ ಹಾನಿಯನ್ನುಂಟು ಮಾಡಿದ್ದು ಎನ್‌ಡಿಆರ್‌ಎಫ್‌ 10ನೇ ಬೆಟಾಲಿಯನ್‌ ಪಡೆ ಉಡುಪಿ ಜಿಲ್ಲೆಯ ವಿವಿಧೆಡೆ ಸಕ್ರಿಯವಾಗಿ ಕಾರ್ಯ ನಿರ್ವಹಿಸಿತ್ತು. ಎನ್‌ಡಿಆರ್‌ಎಫ್‌ನ ಟೀಮ್‌ ಕಮಾಂಡರ್‌ ಗೋಪಾಲ್‌ ಲಾಲ್‌ ಮೀನಾ ನೇತೃತ್ವದ ತಂಡ, ಕಿರಿಯ ಅಧಿಕಾರಿ ಬಬ್ಲೂ ವಿಶ್ವಾಸ್‌ ಸೇರಿದಂತೆ 40 ಮಂದಿಯ ತಂಡ ಸಕ್ರಿಯವಾಗಿ ಕಾರ್ಯಾಚರಿಸಿದ್ದು, ಉಡುಪಿ ಜಿಲ್ಲಾ ಗೃಹರಕ್ಷಕದಳದ ಉಡುಪಿ ಜಿಲ್ಲಾ ಕಮಾಂಡೆಂಟ್‌ ಡಾ| ಪ್ರಶಾಂತ್‌ ಶೆಟ್ಟಿ, ಡೆಪ್ಯುಟಿ ಕಮಾಂಡೆಂಟ್‌ ರಮೇಶ್‌ ಕುಮಾರ್‌ ಅವರ ನೇತೃತ್ವದಲ್ಲಿ 10 ಮಂದಿ ಗೃಹರಕ್ಷಕರು ಅವರೊಂದಿಗೆ ಕೈ ಜೋಡಿಸಿದ್ದರು.

ಕರಾವಳಿಗೆ ಪ್ರತ್ಯೇಕ ಬೆಟಾಲಿಯನ್‌ಗೆ ಪ್ರಸ್ತಾವನೆ
ಇತ್ತೀಚಿನ ವರ್ಷಗಳಲ್ಲಿ ಕರಾವಳಿ ಜಿಲ್ಲೆಯಲ್ಲಿ ನಿರಂತರವಾಗಿ ಪ್ರಾಕೃತಿಕ ವಿಕೋಪದಂತಹ ಘಟನಾವಳಿ ಸಂಭವಿಸುತ್ತಿದ್ದು ಈ ಸಂದರ್ಭದಲ್ಲಿ ತುರ್ತಾಗಿ ಕಾರ್ಯನಿರ್ವಹಿಸಲು ಪ್ರತ್ಯೇಕ ಎನ್‌ಡಿಆರ್‌ಎಫ್‌ ಬೆಟಾಲಿಯನ್‌ ಘಟಕದ ಅಗತ್ಯತೆಯಿದೆ. ಎನ್‌ಡಿಆರ್‌ಎಫ್‌ ಕೇಂದ್ರ ಬೆಟಾಲಿಯನ್‌ನ ಮುಂದೆಯೂ ಈ ಬಗ್ಗೆ ಪ್ರಸ್ತಾವನೆಯಿದ್ದು ಭವಿಷ್ಯದಲ್ಲಿ ಕರಾವಳಿಗೂ ಪ್ರತ್ಯೇಕ ಬೆಟಾಲಿಯನ್‌ ಬರುವ ಸಾಧ್ಯತೆಗಳಿವೆ.
-ಗೋಪಾಲ್‌ ಲಾಲ್‌ ಮೀನಾ, ಟೀಮ್‌ ಕಮಾಂಡರ್‌, ಎನ್‌ಡಿಆರ್‌ಎಫ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next