ಕಲಬುರಗಿ: ಅಕ್ರಮವಾಗಿ ನಿರ್ಮಿಸಿದ್ದ ವಿವಿಧ ಲೇಔಟ್‌ಗಳ ಮೇಲೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ)ದ ಅಧಿಕಾರಿಗಳು ಗುರುವಾರ ಮಿಂಚಿನ ದಾಳಿ ನಡೆಸಿ, ಸುಮಾರು 30 ಎಕರೆ ಪ್ರದೇಶದಲ್ಲಿನ ಲೇಔಟ್‌ಗಳನ್ನು ತೆರವುಗೊಳಿಸಿದ್ದಾರೆ.
ಇಲ್ಲಿನ ಹಾಗರಗಾ ಗ್ರಾಮದ ಸುತ್ತಮುತ್ತಲಿನ ಜಾಗದಲ್ಲಿ ಕುಡಾದಿಂದ ಅನುಮೋದನೆ ಪಡೆಯದೇ ಅನಧಿ ಕೃತವಾಗಿ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಲಾಗಿತ್ತು. ಹೀಗಾಗಿ ಆಯುಕ್ತ ರಾಚಪ್ಪ ನೇತೃತೃದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ವಿವಿಧೆಡೆ ಅಭಿವೃದ್ಧಿಪಡಿಸಿದ್ದ ಅಕ್ರಮ ಲೇಔಟ್ ಗಳನ್ನು ತೆರವುಗೊಳಿಸಿ ಎಚ್ಚರಿಕೆ ಸಂದೇಶ ರವಾನಿಸಿದೆ.
ಮೊಹ್ಮದ್ ಸುಫಿಯಾನ್ ಮತ್ತು ಮೊಹ್ಮದ್ ಆಸೀಫ್ ಎಂಬುವರು ಸರ್ವೇ ನಂ.213ರ ಆರು ಎಕರೆಯಲ್ಲಿ ಬಡಾವಣೆ ನಿರ್ಮಿಸಿ ಕಲ್ಲುಗಳನ್ನು ಅಳಡಿಸಿದ್ದರು. ಅದೇ ರೀತಿ, ಮೊಹ್ಮದ್ ವಾಹೀದ್ ಅಲಿ ಸರ್ವೇ ನಂ.203-204ರ 10 ಎಕರೆಯಲ್ಲಿ ಅಕ್ರಮವಾಗಿ ಬಡಾವಣೆ ಅಭಿವೃದ್ಧಿಪಡಿಸಿದ್ದರು. ರಾಜಶೇಖರಯ್ಯ ಮತ್ತು ಚನ್ನಬಸವಣ್ಣ ಎಂಬುವರು ಸೇರಿ ಸರ್ವೇ ನಂ. 197ರ 5.30 ಎಕರೆ ಪ್ರದೇಶ ಹಾಗೂ ಶೇಕ್ ಇಮ್ರಾನೋದ್ದೀನ್, ಮೊಹ್ಮದ್ ಬೇಗಂ ಹಾಗೂ ಅಮರ ಗೌಳಿ, ಆನಂದ ಗೌಳಿ ಎಂಬುವವರು ಕೂಡಿಕೊಂಡು ಸರ್ವೇ ನಂ.199ರ ಎರಡು ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಮಾಡಿದ್ದ ಬಡಾವಣೆಗಳನ್ನು ತೆರವು ಮಾಡಿ, ಅಭಿವೃದ್ಧಿ ಮಾಡುವ ಪ್ರಾಧಿಕಾರದ ಪೂರ್ವ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಎಲ್ಲ ಭೂ ಮಾಲೀಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಮಾಲಗತ್ತಿ ಗ್ರಾಮದ ರಸ್ತೆಯಿಂದ ಸೇಡಂ ಮುಖ್ಯ ರಸ್ತೆಯವರೆಗೆ 80 ಅಡಿ ರಸ್ತೆ ಪ್ರದೇಶದಲ್ಲಿ ಅನಧಿಕೃತವಾಗಿ ಟಿನ್ ಶೆಡ್ ಅಂಗಡಿಗಳನ್ನು ನಿರ್ಮಿಸಿದವರಿಗೂ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಸ್ವಯಂ ಪ್ರೇರಣೆಯಿಂದ ಅಕ್ರಮ ಶೆಡ್‌ಗಳನ್ನು ತೆರವುಗೊಳಿಸುವಂತೆ ಜಮೀನಿನ ಮಾಲೀಕರ ಎಂ.ಎ.ರೌಫ್ ಗೆ ಅಧಿಕಾರಿಗಳು ಸೂಚಿಸಿದ್ದು, ಇದಕ್ಕೆ ಒಂದು ವಾರದ ಗಡುವು ನೀಡಿ ಬಂದಿದ್ದಾರೆ. ತೆರವು ಕಾರ್ಯದ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಭೂ ಮಾಲೀಕರು ವಾಗ್ವಾದ ನಡೆಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಲು ಯತ್ನಿಸಿದ ಘಟನೆ ಕೂಡ ನಡೆದಿದೆ. ಈ ಕುರಿತು ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಯಾವುದೇ ಜಮೀನುಗಳಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಇಲ್ಲದೇ ಬಡಾವಣೆಗಳನ್ನು ಅಭಿವೃದ್ಧಿ ಮಾಡುವಂತಿಲ್ಲ. ಒಂದು ವೇಳೆ ಪ್ರಾಧಿಕಾರದ ಸೂಚನೆ ಉಲ್ಲಂಘಿಸಿ ಅಭಿವೃದ್ಧಿ ಪಡಿಸಿದರೆ ಕಠಿಣ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತದೆ. ಅದೇ ರೀತಿಯಾಗಿ ಸಾರ್ವಜನಿಕರು ಬಡಾವಣೆಗಳಲ್ಲಿ ನಿವೇಶನ ಖರೀದಿಸುವ ಮೂಲಕ ಪ್ರಾಧಿಕಾರದ ವಿನ್ಯಾಸದ ಅನುಮೋದನೆ ಪಡೆದಿರುವ ಬಗ್ಗೆ ಖಚಿತಪಡಿಸಿಕೊಂಡು ಖರೀದಿ ಮಾಡಬೇಕು.
-ರಾಚಪ್ಪ, ಆಯುಕ್ತ, ಕುಡಾ