Advertisement

ಎಸೆಸೆಲ್ಸಿ ಪರೀಕ್ಷೆಗೆ  28,968 ವಿದ್ಯಾರ್ಥಿಗಳು

12:54 PM Jan 31, 2018 | Team Udayavani |

ಮಂಗಳೂರು: ಮಾ. 23ರಿಂದ ನಡೆಯುವ 2017-18ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ದ. ಕನ್ನಡ ಜಿಲ್ಲೆಯಿಂದ ಒಟ್ಟು 28,968 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿ ದ್ದಾರೆ. ಇದರ ಜತೆಗೆ ಖಾಸಗಿಯಾಗಿ ಬರೆಯುವ ಮತ್ತು ಪುನ ರಾವರ್ತಿತ 1,218 ಮಂದಿಯೂ ಪರೀಕ್ಷೆಗೆ ಹಾಜರಾಗಲಿದ್ದಾರೆ.

Advertisement

ಎಸೆಸೆಲ್ಸಿ ಪರೀಕ್ಷೆ ಮಾ. 23ರಂದು ಆರಂಭಗೊಂಡು ಎ. 6ರಂದು ಕೊನೆಗೊಳ್ಳಲಿದೆ. ಜಿಲ್ಲೆಯಲ್ಲಿ ಈಗಾಗಲೇ ಎಸೆಸೆಲ್ಸಿ
ಪರೀಕ್ಷೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಒಟ್ಟು 94 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಕೇಂದ್ರಕ್ಕೆ ತಲಾ ಓರ್ವ ಪರೀಕ್ಷಾ ಮುಖ್ಯ ಅಧೀಕ್ಷಕರು, 350ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಕೇಂದ್ರಕ್ಕೆ ಓರ್ವ ಉಪಮುಖ್ಯ ಅಧೀಕ್ಷಕರು ಇರುತ್ತಾರೆ. ಜತೆಗೆ ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಲಾಗುತ್ತದೆ. ಇದಲ್ಲದೆ ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆ ಅಭಿರಕ್ಷಕರನ್ನು ಜಿಲ್ಲಾ ಹಂತದಲ್ಲಿ ನೇಮಕ ಮಾಡಲಾಗುತ್ತದೆ.

ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕೆಮರಾಗಳನ್ನು ಅಳವಡಿಸಲು ಈಗಾಗಲೇ ಶಿಕ್ಷಣ ಇಲಾಖೆ ಸೂಚಿಸಿದೆ. ಗರಿಷ್ಠ ಫಲಿತಾಂಶಕ್ಕೆ ಕ್ರಮ ಜಿಲ್ಲೆಯಲ್ಲಿ ಗರಿಷ್ಠ ಫಲಿತಾಂಶಕ್ಕೆ ಶಿಕ್ಷಣ ಇಲಾಖೆ ಕ್ರಮಗಳನ್ನು ಕೈಗೊಂಡಿದೆ. ಕಲಿಕೆಯಲ್ಲಿ ಹಿಂದುಳಿದಿರುವ  ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಹೆಚ್ಚುವರಿಯಾಗಿ ಬೋಧನೆಗಳನ್ನು  ಆಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. 

ಜಿಲ್ಲೆಯ ಸಾಧನೆ 
2010-11ರ ಎಸೆಸೆಲ್ಸಿ ಫಲಿತಾಂಶದಲ್ಲಿ 21ನೇ ಸ್ಥಾನದಲ್ಲಿದ್ದ ದ.ಕ. ಜಿಲ್ಲೆ 2011-12ರಲ್ಲಿ 7ನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಶೈಕ್ಷಣಿಕ ಗುಣಮಟ್ಟದಲ್ಲಿ ಹೊಸ ನಿರೀಕ್ಷೆಯನ್ನು ಮೂಡಿಸಿತ್ತು. ಆದರೆ 12-13ರಲ್ಲಿ ಮತ್ತೆ 26ಕ್ಕೆ ಇಳಿದಿತ್ತು. 2014-15 ರಲ್ಲಿ ಫಲಿತಾಂಶದಲ್ಲಿ ಭಾರೀ ಸುಧಾರಣೆ ಕಂಡು ರಾಜ್ಯದಲ್ಲಿ 8ನೇ ಸ್ಥಾನವನ್ನು ಗಳಿಸಿತು. ಈ ಅವಧಿಯಲ್ಲಿ ರಾಜ್ಯದ ಶೇಕಡಾವಾರು ಉತ್ತೀರ್ಣತೆ ಶೇ. 84.85 ಆದರೆ ಜಿಲ್ಲಾವಾರು ಶೇಕಡಾವಾರು ಉತ್ತೀರ್ಣತೆ ಶೇ. 89.35 ಆಗಿತ್ತು. 2015-16ನೇ ಸಾಲಿನಲ್ಲಿ ಫಲಿತಾಂಶದಲ್ಲಿ ಇನ್ನಷ್ಟು ಸಾಧನೆ ದಾಖಲಿಸಿ ರಾಜ್ಯದಲ್ಲಿ 3ನೇ ಸ್ಥಾನವನ್ನು ಗಳಿಸಿತು. ಈ ಅವಧಿಯಲ್ಲೂ ರಾಜ್ಯದ ಉತ್ತೀರ್ಣತೆ ಪ್ರಮಾಣ ಶೇ.79.16 ಆಗಿದ್ದರೆ ಜಿಲ್ಲೆಯ ಫಲಿತಾಂಶ ಶೇ.88.12 ಆಗಿತ್ತು. 2016-17 ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಸೆಸೆಲ್ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ತನ್ನ ಮೊದಲಿನ ಸಾಧನೆಯತ್ತ ಮರಳಿ ರಾಜ್ಯದಲ್ಲಿ 2ನೇ ಸ್ಥಾನವನ್ನು ಪಡೆದುಕೊಂಡಿತು. ಈ ಸಾಲಿನಲ್ಲೂ ಇದೇ ರೀತಿಯ ಉನ್ನತ ಸಾಧನೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ದ. ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವಿಶೇಷ ನಿಗಾ ವಹಿಸಿ ಕಾರ್ಯೋನ್ಮುಖವಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಉತ್ತೀರ್ಣ ಸಾಧನೆಯ ಗುರಿ ಇರಿಸಿಕೊಳ್ಳಲಾಗಿದೆ. ಕಲಿಕೆಯಲ್ಲಿ ವಿಷಯವಾರು ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ಬೋಧನೆ ವ್ಯವಸ್ಥೆ ಮಾಡಲಾಗಿದೆ. 
 ಶಿವರಾಮಯ್ಯ ದ.ಕ. ಡಿಡಿಪಿಐ

Advertisement
Advertisement

Udayavani is now on Telegram. Click here to join our channel and stay updated with the latest news.

Next