Advertisement

ಸಂಕ್ರಾಂತಿಯೊಳಗೆ ಅಣ್ಣಿಗೇರಿಗೆ 24×7 ನೀರು: ಮುನೇನಕೊಪ್ಪ

12:01 PM Nov 01, 2022 | Team Udayavani |

ಹುಬ್ಬಳ್ಳಿ: ಕೆರೆ ನಿರ್ಮಾಣದಿಂದ ಕಳೆದ ಮೂರ್‍ನಾಲ್ಕು ದಶಕಗಳಿಂದ ಅಣ್ಣಿಗೇರಿ ಜನರು ಅನುಭವಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದ್ದು, ಸಂಕ್ರಾಂತಿಯೊಳಗೆ ಪಟ್ಟಣದ ಜನತೆಗೆ ನಿರಂತರ ಕುಡಿಯುವ ನೀರು ಸರಬರಾಜು ಆಗಲಿದೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

Advertisement

ಸೋಮವಾರ ಅಣ್ಣಿಗೇರಿ ತಾಲೂಕಿನ ಬಸಾಪುರ ಬಳಿ 34.88 ಕೋಟಿ ರೂ. ವೆಚ್ಚದಲ್ಲಿ ಅಣ್ಣಿಗೇರಿ ಪಟ್ಟಣಕ್ಕೆ 24×7 ನಿರಂತರ ಕುಡಿಯುವ ನೀರು ಸರಬರಾಜು ಕೆರೆಗೆ ಮಲಪ್ರಭಾ ಕಾಲುವೆ ಮೂಲಕ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೆರೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ನಿರಂತರ ನೀರು ಪೂರೈಕೆಗೆ ಅಗತ್ಯ ಇರುವ ಪೈಪ್‌ಲೈನ್‌ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಸಂಕ್ರಾಂತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಾಮಗಾರಿ ವೇಗ ಕೂಡ ಹಚ್ಚಾಗಿದ್ದು, ಸಂಕ್ರಾಂತಿ ವೇಳೆಗೆ ಕೆರೆಯ ನೀರು ಅಣ್ಣಿಗೇರಿ ಪಟ್ಟಣದ ಜನತೆಗೆ ದೊರೆಯಲಿದ್ದು, ನಂತರ ಅತೀ ಶೀಘ್ರದಲ್ಲಿ ನಿರಂತರ ನೀರು ದೊರೆಯಲಿದೆ ಎಂದರು.

ಆರಂಭದಲ್ಲಿ ಮಲಪ್ರಭಾ ಕಾಲುವೆಯಿಂದ ಪಂಪ್‌ಸೆಟ್‌ಗಳ ಮೂಲಕ ತುಂಬಿಸುವ ಯೋಜನೆ ರೂಪಿಸಲಾಗಿತ್ತು. ಇದು ಅತ್ಯಂತ ಖರ್ಚುದಾಯಕವಾಗಿದ್ದು, ವಿದ್ಯುತ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಮಾಡಿಕೊಳ್ಳಬೇಕಾಗಿತ್ತು. ಇದು ಪುರಸಭೆಗೆ ಹೊರೆಯಾಗುತ್ತಿತ್ತು. ಆದರೆ ಇದೀಗ ನೇರವಾಗಿ ಕಾಲುವೆಯಿಂದ ಕೆರೆಗೆ ನೈಸರ್ಗಿಕವಾಗಿ ನೀರು ತುಂಬಿಸುವ ವ್ಯವಸ್ಥೆ ಯಶಸ್ವಿಯಾಗಿದೆ. ಇದರಿಂದ 45 ದಿನಗಳಲ್ಲಿ ಇಡೀ ಕೆರೆ ಭರ್ತಿಯಾಗಲಿದೆ. ಒಂದು ವೇಳೆ ಪಂಪ್‌ ಸೆಂಟ್‌ಗಳ ಮೂಲಕ ತುಂಬಿಸುವುದಾಗಿದ್ದರೆ 3-4 ತಿಂಗಳು ಬೇಕಾಗಿತ್ತು. ಈ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಚಿಂತನೆಯಿದೆ. ಅಣ್ಣಿಗೇರಿ ಪಟ್ಟಣದಲ್ಲಿ ಕೋರ್ಟ್‌, ನ್ಪೋರ್ಟ್ಸ್ ಪಾರ್ಕ್‌ ಸೇರಿದಂತೆ ವಿವಿಧ ತಾಲೂಕು ಮಟ್ಟದ ಕಚೇರಿ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ ಮಾತನಾಡಿ, ನಿರಂತರ ನೀರು ಹಾಗೂ ಕೆರೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದೀಗ 10 ದಿನಗಳಿಗೊಮ್ಮೆ ನೀರು ದೊರೆಯುತ್ತಿದೆ. ಕಾಮಗಾರಿ ಪೂರ್ಣಗೊಂಡ ನಂತರ ನಿರಂತರ ನೀರು ದೊರೆಯಲಿದೆ. ಒಮ್ಮೆ ಕೆರೆ ತುಂಬಿಸಿದರೆ ಆರು ತಿಂಗಳ ಕಾಲ ನೀರು ಪಡೆಯಬಹುದಾಗಿದೆ ಎಂದರು.

Advertisement

ಲಡ್ಡು ಮುತ್ಯಾ ಅಜ್ಜನವರು ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಗಂಗಾ ಕರೆಟ್ಟನವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಜಯಲಕ್ಷ್ಮೀ ಜಕರಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಬಾಜಾನ ಮುಲ್ಲಾನವರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಭಿಯಂತ ರವಿಕುಮಾರ, ಬಿಜೆಪಿ ಮುಖಂಡ ಷಣ್ಮುಖಪ್ಪ ಗುರಿಕಾರ, ಮಾಬುಬಿ ನವಲಗುಂದ, ಮಂಜುಳಾ ರೋಣದ ಇನ್ನಿತರರಿದ್ದರು.

ಸರಕಾರ ಕೆರೆ ನಿರ್ಮಾಣ ಯಶಸ್ವಿಯಾಗಿ ನಿರ್ವಹಿಸಿದೆ. ನೀರನ್ನು ಪ್ರತಿಮನೆಗೆ ತಲುಪಿಸುವ ಜವಾಬ್ದಾರಿ ಪುರಸಭೆಯದ್ದಾದರೆ, ಸದ್ವಿನಿಯೋಗ ಹೊಣೆ ಜನರದ್ದಾಗಿದೆ. ಕೆರೆ ನಿರ್ಮಾಣ ನಿಟ್ಟಿನಲ್ಲಿ ಬಸಾಪುರ ಜನತೆಯ ತ್ಯಾಗ ದೊಡ್ಡದು. ಜಿಲ್ಲೆಯಲ್ಲಿ ಎರಡು ಸಕ್ಕರೆ ಕಾರ್ಖಾನೆ, ನವಲಗುಂದ ಕ್ಷೇತ್ರ ವ್ಯಾಪ್ತಿಯಲ್ಲಿ ಎಥೆನಾಲ್‌ ತಯಾರಿಸುವ ಘಟಕ ತರಲಾಗುವುದು. ಈಗಾಗಲೇ ಜಿಲ್ಲೆಗೆ ಜವಳಿ ಪಾರ್ಕ್‌ ಮಂಜೂರಾಗಿದ್ದು, ನೇರವಾಗಿ 5 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಪರೋಕ್ಷವಾಗಿ 25 ಸಾವಿರ ಜನರಿಗೆ ಅನುಕೂಲವಾಗಲಿದೆ.  -ಶಂಕರ ಪಾಟೀಲ ಮುನೇನಕೊಪ್ಪ

ಕಳೆದ 50 ವರ್ಷಗಳಿಂದ ನೀರಿಗಾಗಿ ಸಮಸ್ಯೆ ಹೇಳತೀರದು. ನೀರನ್ನು ಹೆಬಸೂರು ಗ್ರಾಮಕ್ಕೆ ಹೋಗಿ ತರಬೇಕಾಗಿತ್ತು. ಆದರೆ ಇದೀಗ ಈ ಯೋಜನೆಯಿಂದ ಬಹು ವರ್ಷದ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.  -ಅಬ್ದುಲ್‌ಸಾಬ್‌ ನಡಕಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next