Advertisement

24*7 ನೀರು; ಪಾಲಿಕೆ ವಂತಿಗೆ ಪಾಲು ಸಂದಾಯ

02:42 PM Aug 22, 2022 | Team Udayavani |

ಹುಬ್ಬಳ್ಳಿ: ಅವಳಿನಗರದ ಎಲ್ಲ ವಾರ್ಡ್‌ ಗಳಿಗೆ 24*7 ನೀರು ಪೂರೈಕೆ ಯೋಜನೆ ವಿಸ್ತರಣೆಯ ಮೊತ್ತ 1206.97 ಕೋಟಿ ರೂ.ಗಳಲ್ಲಿ ಮಹಾನಗರ ಪಾಲಿಕೆ ತನ್ನ ವಂತಿಗೆ ರೂಪದಲ್ಲಿ 242.06 ಕೋಟಿ ರೂ. ನೀಡುತ್ತಿದ್ದು, ಈಗಾಗಲೇ 74 ಕೋಟಿ ರೂ. ಸಂದಾಯ ಮಾಡಿದೆ.

Advertisement

ಯೋಜನೆ ಪೂರ್ಣಪ್ರಮಾಣದಲ್ಲಿ ಪೂರ್ಣಗೊಂಡರೆ ಪ್ರಸ್ತುತ ನೀರುಪೂರೈಕೆ- ನಿರ್ವಹಣೆಗೆ ಜಲಮಂಡಳಿಗೆ ನೀಡುವ ಹಣದಲ್ಲಿ ವಾರ್ಷಿಕ ಅಂದಾಜು 15-18 ಕೋಟಿ ರೂ. ಉಳಿತಾಯ ಹಾಗೂ ನೀರು ಸೋರಿಕೆಯಲ್ಲಿ ಗಣನೀಯ ಇಳಿಕೆ ನಿರೀಕ್ಷೆ ಪಾಲಿಕೆಯದ್ದಾಗಿದೆ.

ಯಾರ್ಯಾರ ಪಾಲೆಷ್ಟು?

ಎಲ್‌ ಆ್ಯಂಡ್‌ ಟಿ ಕಂಪೆನಿ 1,206.97 ಕೋಟಿ ರೂ.ಗೆ ಯೋಜನೆ ಗುತ್ತಿಗೆ ಪಡೆದಿದೆ. ಇದರಲ್ಲಿ 931.02 ಕೋಟಿ ರೂ. ಯೋಜನೆ ಅನುಷ್ಠಾನದ ಕಾಮಗಾರಿಗೆ ವೆಚ್ಚವಾದರೆ, 275.95 ಕೋಟಿ ರೂ. ಕಾರ್ಯಾಚರಣೆ ಹಾಗೂ ನಿರ್ವಹಣೆಯ ವೆಚ್ಚಕ್ಕೆಂದು ನಿಗದಿ ಪಡಿಸಲಾಗಿದೆ. 931.02 ಕೋಟಿ ರೂ. ಗಳಲ್ಲಿ ಪ್ರಮುಖ ಪಾಲು ವಿಶ್ವಬ್ಯಾಂಕ್‌ನ ಸಾಲದ ರೂಪದ್ದಾಗಿದೆ. ವಿಶ್ವಬ್ಯಾಂಕ್‌ 623.78 ಕೋಟಿ ರೂ. ನೀಡಿದ್ದು, ಅದರ ಪಾಲು ಶೇ.67 ಆಗಿದೆ. ಮಹಾನಗರ ಪಾಲಿಕೆ ವಂತಿಗೆ 242.06 ಕೋಟಿ ರೂ. ಆಗಿದ್ದು, ಶೇ.27 ಪಾಲು ಹೊಂದಿದೆ. ಅದೇ ರೀತಿ ರಾಜ್ಯ ಸರಕಾರ 65.17 ಕೋಟಿ ರೂ. ವಂತಿಗೆ ನೀಡುತ್ತಿದ್ದು, ಶೇ.6 ಪಾಲು ಹೊಂದಿದೆ.

ಹಣ ಹೊಂದಿಸಿದ್ದು ಹೇಗೆ?:

Advertisement

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ನಿಟ್ಟಿನಲ್ಲಿ ಸರ್ಕಾರದಿಂದ ಎಸ್‌ಎಫ್‌ಸಿ ಅನುದಾನ ನೀಡಲಾಗುತ್ತಿದೆ. ಇದರಡಿ ನಿಯಮವೊಂದನ್ನು ಮಾಡಲಾಗಿದ್ದು, 2014-2041ರವರೆಗೆ ಬರುವ ಎಸ್‌ಎಫ್‌ಸಿ ಅನ್‌ಟೈಡ್‌ ಅಡಿಯಲ್ಲಿ ಬರುವ ಒಟ್ಟು ಅನುದಾನದಲ್ಲಿ ಶೇ.35 ಹಣವನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಕಡ್ಡಾಯವಾಗಿ ತೆಗೆದಿರಿಸಬೇಕೆಂಬ ನಿಯಮ ಇದೆ. ಅದರಡಿಯಲ್ಲಿಯೇ ಇದೀಗ ಮಹಾನಗರ ಪಾಲಿಕೆ 24*7 ಯೋಜನೆಗೆ ತನ್ನ ವಂತಿಗೆ ನೀಡತೊಡಗಿದೆ. ಈಗಾಗಲೇ ಪಾಲಿಕೆ ತನ್ನ ವಂತಿಗೆ ರೂಪದಲ್ಲಿ 74 ಕೋಟಿ ರೂ. ಪಾವತಿಸಿದೆ. ಅವಳಿನಗರದಲ್ಲಿ 2031ರ ವೇಳೆಗೆ ಒಟ್ಟಾರೆ 2,350 ಕಿ.ಮೀ. ವ್ಯಾಪ್ತಿಯಲ್ಲಿ 24*7 ನೀರು ಪೂರೈಕೆ ಪೈಪ್‌ಲೈನ್‌ ಅಳವಡಿಕೆ ಮಾಡಬೇಕಾಗಿದ್ದು, ಅಂದಾಜು 2,00,934 ಮನೆಗಳಿಗೆ ನೀರು ಪೂರೈಕೆ ಸಂಪರ್ಕದ ಅಂದಾಜು ಮಾಡಲಾಗಿದೆ.

ನೀರು ಸೋರಿಕೆ ತಡೆ

ಪ್ರತಿಯೊಬ್ಬರಿಗೆ 135 ಲೀಟರ್‌ ನೀರು ಎಂಬ ಲೆಕ್ಕಾಚಾರದಲ್ಲಿ ವಾರ್ಷಿಕವಾಗಿ ಎಷ್ಟು ನೀರು ಪೂರೈಕೆ ಎಂದು ಲೆಕ್ಕ ಹಾಕಲಾಗುತ್ತದೆ. ಅವಳಿನಗರದಲ್ಲಿಯೂ 24ಗಿ7 ನೀರು ಪೂರೈಕೆ ಆರಂಭಕ್ಕೆ ಮುನ್ನ ಪ್ರತಿ ವ್ಯಕ್ತಿಗೆ 135 ಲೀಟರ್‌ ಎಂದೇ ಲೆಕ್ಕಾಚಾರ ಹೊಂದಲಾಗಿತ್ತು. ಆದರೆ 24*7 ನೀರು ಪೂರೈಕೆ ಯೋಜನೆ ಜಾರಿ ನಂತರ ಜನರ ನೀರಿನ ಬಳಕೆ ತಲಾವಾರು 113-118 ಲೀಟರ್‌ವರೆಗೆ ಬಂದಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ 24*7 ನೀರು ಪೂರೈಕೆ ಇಲ್ಲದ ವಾರ್ಡ್‌ಗಳಲ್ಲಿ 8 ದಿನಕ್ಕೊಮ್ಮೆ ಇದ್ದ ನೀರು ಪೂರೈಕೆಯನ್ನು ಇದೀಗ 5-6 ದಿನಕ್ಕೆ ತರಲಾಗಿದೆ. ನೀರು ಪೂರೈಕೆಯಲ್ಲಿ ಶೇ.46-54 ನೀರು ಸೋರಿಕೆಯಾಗುತ್ತಿದೆ. 24*7 ಯೋಜನೆಯಲ್ಲಿ ಇದರ ಪ್ರಮಾಣ ಶೇ.12 ಇದೆ. ಎಲ್ಲ ಕಡೆಗೂ 24*7 ನೀರು ಪೂರೈಕೆ ಯೋಜನೆ ಜಾರಿಗೊಂಡರೆ ಸೋರಿಕೆಯಲ್ಲಿ ಶೇ.34-46 ಕಡಿಮೆಯಾಗಲಿದೆ. ಸೋರಿಕೆ ರೂಪದಲ್ಲಿ ಉಳಿಯುವ ನೀರನ್ನು ಇನ್ನಷ್ಟು ಪ್ರದೇಶಕ್ಕೆ ಪೂರೈಕೆ

ನಿರ್ವಹಣೆ ವೆಚ್ಚವೂ ಶೇ.50 ಉಳಿತಾಯ

ಅವಳಿನಗರಕ್ಕೆ ನೀರು ಪೂರೈಕೆ ಹಾಗೂ ನಿರ್ವಹಣೆಯನ್ನು ಪಾಲಿಕೆಯೇ ಮಾಡುತ್ತಿತ್ತು. ನೀರು ಪೂರೈಕೆ ಸಮರ್ಪಕವಾಗುತ್ತಿಲ್ಲ. ಪ್ರತ್ಯೇಕ ವ್ಯವಸ್ಥೆ ಬೇಕೆಂಬ ಚಿಂತನೆ ನಿಟ್ಟಿನಲ್ಲಿ ಜಲಮಂಡಳಿಗೆ ಹೊಣೆ ನೀಡಲಾಗಿತ್ತು. ನಿರ್ವಹಣೆ ವೆಚ್ಚ, ವೇತನ ಎಂದೆಲ್ಲ ಪಾಲಿಕೆಯು ಜಲಮಂಡಳಿಗೆ ವಾರ್ಷಿಕ ಅಂದಾಜು 42 ಕೋಟಿ ರೂ. ನೀಡುತ್ತಿದೆ. ಜತೆಗೆ ವಿದ್ಯುತ್‌ ಶುಲ್ಕ ಇತರೆ ವೆಚ್ಚದ ಹೊರೆ, ನೀರಿನ ಕರ ಸಮರ್ಪಕವಾಗಿ ವಸೂಲಿ ಆಗದಿರುವುದು ಪಾಲಿಕೆಗೆ ಹೊರೆಯಾಗಿತ್ತು. ಇದೀಗ ಎಲ್‌ ಆ್ಯಂಡ್‌ ಟಿ ಕಂಪೆನಿ ಅವಳಿನಗರದಲ್ಲಿ ನೀರು ಪೂರೈಕೆ ನಿರ್ವಹಣೆಗಾಗಿ ವಾರ್ಷಿಕ 24 ಕೋಟಿ ರೂ.ಗೆ ಬಿಡ್‌ ಮಾಡಿದೆ. ಅಲ್ಲಿಗೆ ಮಹಾನಗರ ಪಾಲಿಕೆಗೆ ವಾರ್ಷಿಕ ನಿರ್ವಹಣೆ ವೆಚ್ಚದಲ್ಲಿ ಶೇ.50 ಹಣ ಉಳಿತಾಯವಾಗಲಿದೆ.

ಮತ್ತೂಂದು ಬಿಳಿಯಾನೆಗೆ ಅವಕಾಶ ಬೇಡ

ನೀರು ಪೂರೈಕೆ ನಿರ್ವಹಣೆಯನ್ನು ಪಾಲಿಕೆಯಿಂದ ಜಲಮಂಡಳಿಗೆ ವಹಿಸಿದಾಗಲೂ, ಉದ್ದೇಶ ಸಮರ್ಪಕವಾಗಿ ಸಾಕಾರಗೊಂಡಿಲ್ಲ. ಪಾಲಿಕೆ ಪಾಲಿಗೆ ಜಲಮಂಡಳಿ ಬಿಳಿಯಾನೆಯಾದಂತಾಗಿದೆ ಎಂಬ ಅನಿಸಿಕೆಯನ್ನು ಅನೇಕರು ವ್ಯಕ್ತಪಡಿಸಿದ್ದರು. ಇದೀಗ 7 ವರ್ಷ ಕಾಲ ನೀರು ನಿರ್ವಹಣೆಯನ್ನು ಎಲ್‌ ಆ್ಯಂಡ್‌ ಟಿ ಗೆ ನೀಡಲಾಗಿದ್ದು, ಅದು ಮತ್ತೆ ಬಿಳಿಯಾನೆ ರೂಪ ತಾಳದಂತೆ ಎಚ್ಚರಿಕೆ ವಹಿಸಬೇಕಿದೆ. ಏಳು ವರ್ಷದ ನಂತರ ಎಲ್‌ ಆ್ಯಂಡ್‌ ಟಿ ಕಂಪೆನಿ ನೀರು ನಿರ್ವಹಣೆಯನ್ನು ಪಾಲಿಕೆಗೆ ಹಸ್ತಾತರಿಸಿದಾಗ ನಿರ್ವಹಣೆ ವ್ಯವಸ್ಥೆ ಗೊತ್ತಿರುವ ಅಧಿಕಾರಿಗಳು, ಸಿಬ್ಬಂದಿ ಸಿದ್ಧವಾಗಿರದಿದ್ದರೆ ಪಾಲಿಕೆ ಎಲ್‌ ಆ್ಯಂಡ್‌ ಕಂಪೆನಿಯನ್ನೇ ಮುಂದುವರಿಸುವ ಅನಿವಾರ್ಯತೆಗೆ ಸಿಲುಕಬಹುದು. ಕಂಪೆನಿ ಹೆಚ್ಚಿನ ಹಣದ ಬೇಡಿಕೆ ಸಲ್ಲಿಸಬಹುದು. ಹೀಗಾಗದಂತೆ ಮುಂಜಾಗ್ರತೆ ವಹಿಸಬೇಕಿದೆ.

ಪಾಲಿಕೆಯಿಂದ 242 ಕೋಟಿ ರೂ. ವಂತಿಗೆ ಪಾವತಿ ಸಾಧ್ಯವೇ ಎಂಬ ಶಂಕೆ ಸಹಜ. ಆದರೆ, ಎಸ್‌ಎಫ್‌ಸಿ ಅನುದಾನ ನಿಯಮದಂತೆ ಶೇ.35 ಅನುದಾನ ಕಡ್ಡಾಯ ನೀಡಬೇಕಾಗಿದೆ. ಅನುದಾನ ಬಂದಾಗಲೇ ಈ ಹಣ ನೀರು ಪೂರೈಕೆ ಹೆಡ್‌ಗೆ ಹೋಗುತ್ತದೆ. ಈಗಾಗಲೇ ಪಾಲಿಕೆಯಿಂದ 74 ಕೋಟಿ ರೂ. ಪಡೆದುಕೊಂಡಿದ್ದೇವೆ. ನೀರಿನ ದರ ನಿಗದಿ ವಿಚಾರದಲ್ಲಿ ಯಾರಿಗೂ ಆತಂಕ ಬೇಡ. ದರ ನಿಗದಿ ರಾಜ್ಯ ಸರಕಾರದ ತೀರ್ಮಾನ ಹಾಗೂ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡ ರೀತಿಯಲ್ಲೇ ದರ ನಿಗದಿ ಆಗಲಿದೆ. ಎಲ್‌ ಆ್ಯಂಡ್‌ ಕಂಪೆನಿಗೆ ದರ ನಿಗದಿಯ ಯಾವ ಅಧಿಕಾರ ಇಲ್ಲ. –ಎಂ.ಕೆ. ಮನಗೊಂಡ, ಅಧೀಕ್ಷಕ ಅಭಿಯಂತ, ಕುಸ್ಸೆಂಪ್‌

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next