Advertisement

20ನೇ ಬೆಂಗಳೂರು ಐಟಿಇ ಡಾಟ್‌ ಬಿಜ್‌ ಸಮ್ಮೇಳನಕ್ಕೆ ಸಿದ್ಧತೆ​​​​​​​

06:30 AM Oct 23, 2017 | Team Udayavani |

ಬೆಂಗಳೂರು: ಹೊಸ ಪರಿಕಲ್ಪನೆ, ನವೀನ ಯೋಚನೆಯ ಆವಿಷ್ಕಾರಗಳ ಲಾಭ ಪಡೆಯುವ ಜತೆಗೆ ಮುಂದಿನ ಹತ್ತು ವರ್ಷಗಳಲ್ಲಿ ಐಟಿ ಸೇರಿ ಹೊಸ ತಂತ್ರಜ್ಞಾನಗಳ ಬೆಳವಣಿಗೆಗೆ ಅನುಸರಿಸಬೇಕಾದ ಮಾರ್ಗೋಪಾಯಗಳ ನೀಲನಕ್ಷೆ ರೂಪಿಸುವ ಉದ್ದೇಶದ “ಬೆಂಗಳೂರು ಐಟಿ ಇ ಡಾಟ್‌ ಬಿಜ್‌’ಗೆ ಭರದ ಸಿದ್ಧತೆ ನಡೆದಿದೆ.

Advertisement

ಬೆಂಗಳೂರು ಐಟಿಇ ಡಾಟ್‌ ಬಿಜ್‌ ಸಮ್ಮೇಳನ 2 ದಶಕ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮ್ಮೇಳನ ನಡೆಸಲು ರಾಜ್ಯ ಐಟಿ-ಬಿಟಿ ಇಲಾಖೆ ಸಜ್ಜಾಗಿದೆ. ಬೆಂಗಳೂರು ಜಗತ್ತಿಗೆ ಪರಿಚಯಿಸುತ್ತಿರುವ ಹೊಸ ಆವಿಷ್ಕಾರದ ಪ್ರಯೋಜನವನ್ನು ಸ್ಥಳೀಯವಾಗಿ ಬಳಸಿಕೊಂಡು ಹೂಡಿಕೆ ಸೆಳೆಯುವ, ಉದ್ಯೋಗ ಸೃಷ್ಟಿ ಆಶಯದೊಂದಿಗೆ ಸಮ್ಮೇಳನ ರೂಪುಗೊಳ್ಳುತ್ತಿದೆ.

ಈಚಿನ ವರ್ಷಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ಹೆಚ್ಚಾಗುತ್ತಿದೆ. ಜಗತ್ತಿನ 500 ಪ್ರತಿಷ್ಠಿತ ಕಂಪನಿಗಳ ಪೈಕಿ 400ಕ್ಕೂ ಹೆಚ್ಚು ಕಂಪನಿಗಳ ಅತಿ ದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಬೆಂಗಳೂರಿನಲ್ಲಿವೆ. ಒರಾಕಲ್‌, ಜಿಇ, ಇಂಟೆಲ್‌ ಸಂಸ್ಥೆಗಳ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ರಾಜ್ಯದಲ್ಲಿವೆ. ಪರಿಣಾಮವಾಗಿ ವಿಶ್ವದ ಸಾಕಷ್ಟು ಅನ್ವೇಷಣೆಗಳು ಬೆಂಗಳೂರಿನಲ್ಲಿ ಸೃಷ್ಟಿಯಾಗುತ್ತಿವೆ. ಬೆಂಗಳೂರು ಸೇರಿ ರಾಜ್ಯದ ಎಂಜಿನಿಯರ್‌ಗಳು, ತಂತ್ರಜ್ಞರಿಂದ ರೂಪುಗೊಳ್ಳುತ್ತಿರುವ ಅನ್ವೇಷಣೆಗಳ ಪ್ರಯೋಜನ ರಾಜ್ಯಕ್ಕೂ ಸಿಗಬೇಕು ಎಂಬ ಉದ್ದೇಶಕ್ಕೆ ಪೂರಕವಾಗಿ ಸಮ್ಮೇಳನ ಆಯೋಜನೆಯಾಗುತ್ತಿದೆ.

ಎಮರ್ಜಿಂಗ್‌ ಟೆಕ್ನಾಲಜಿ ಬಳಕೆಗೆ ಆದ್ಯತೆ: ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ಸೈಬರ್‌ ಸೆಕ್ಯೂರಿಟಿ, ಮಿಷಿನ್‌ ಲರ್ನಿಂಗ್‌, ರೊಬೋಟಿಕ್ಸ್‌, ಏರೋಸ್ಪೇಸ್‌, ನವೋದ್ಯಮ, ಅನಿಮೇಷನ್‌ ಮತ್ತು ಗೇಮಿಂಗ್‌, ಬಿಗ್‌ ಡೇಟಾ ಸೇರಿ ಹೊಸದಾಗಿ ಬೆಳವಣಿಗೆಯಾಗುತ್ತಿರುವ ತಂತ್ರಜ್ಞಾನಗಳತ್ತ ಸಮ್ಮೇಳನ ಕೇಂದ್ರೀಕೃತವಾಗಿದೆ. ಕೌಶಲ್ಯ ಅಭಿವೃದ್ಧಿ, ತರಬೇತಿ, ಆವಿಷ್ಕಾರಗಳಿಗೆ ಅವಕಾಶ ನೀಡುವ ಮೂಲಕ ಅಂತಾರಾಷ್ಟ್ರಿಯ ಸಂಸ್ಥೆಗಳೊಂದಿಗೆ ಒಡಂಬಡಿಕೆಯ ನಿರೀಕ್ಷೆಯಲ್ಲಿದೆ.

ಜಾಗತಿಕ ಮಟ್ಟದ ತಜ್ಞರು ಭಾಗಿ: ಇದೇ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ವಿದೇಶಿ ತಜ್ಞರಿಗೆ ಇಲಾಖೆ ಆಹ್ವಾನ ನೀಡುತ್ತಿದೆ. ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಗಿಂತ ಆಯ್ದ ಕ್ಷೇತ್ರದಲ್ಲಿ ಗಳಿಸಿರುವ ಪರಿಣತಿ, ಬೆಳವಣಿಗೆ ಮಾನದಂಡವಾಗಿಟ್ಟುಕೊಂಡು ವಿಷಯ ತಜ್ಞರನ್ನು ಆಯ್ಕೆ ಮಾಡುತ್ತಿದೆ.

Advertisement

ಐಟಿ ಸರ್ವೀಸಸ್‌ ಕ್ಷೇತ್ರದಲ್ಲಿ ಕರ್ನಾಟಕದ ರಫ್ತು ವಹಿವಾಟಿನ ಮೌಲ್ಯ 2 ಲಕ್ಷ ಕೋಟಿ ರೂ. ಮೀರುತ್ತದೆ. ಅಲ್ಲದೇ ಜಗತ್ತಿನ ಅತಿದೊಡ್ಡ ಟೆಕ್ನಾಲಜಿ ಕ್ಲಸ್ಟರ್‌ ಪೈಕಿ 2ನೇ ಸ್ಥಾನ ಪಡೆದಿರುವ ಬೆಂಗಳೂರು ನವೋದ್ಯಮ ಕ್ಷೇತ್ರದಲ್ಲೂ 2ನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲೇ 7,200 ನವೋದ್ಯಮಗಳಿದ್ದರೆ ರಾಜ್ಯಾದ್ಯಂತ ಒಟ್ಟು 9,000ಕ್ಕೂ ಹೆಚ್ಚು ನವೋದ್ಯಮಗಳು ರೂಪುಗೊಂಡಿವೆ. ಈ ಸ್ಟಾರ್ಟ್‌ಅಪ್‌ ಪ್ರಯೋಗಗಳನ್ನು ಯಶಸ್ವಿಗೊಳಿಸುವ ಕಾರ್ಯಕ್ಕೂ ಸಮ್ಮೇಳನ ಬಳಸಿಕೊಳ್ಳಲು ಇಲಾಖೆ ಉದ್ದೇಶಿಸಿದೆ.

ಐಡಿಯೇಟ್‌, ಇನ್ನೋವೇಟ್‌, ಇನ್‌ವೆಂಟ್‌!
ಹೊಸ ಯೋಚನೆ (ಐಡಿಯೇಟ್‌), ನಾವೀನ್ಯತೆ (ಇನ್ನೋವೇಟ್‌) ಹಾಗೂ ಅನ್ವೇಷಣೆ (ಇನ್‌ವೆಂಟ್‌) ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರು ಐಟಿಇ ಡಾಟ್‌ ಬಿಜ್‌ ಸಮ್ಮೇಳನ ಅಣಿಯಾಗುತ್ತಿದೆ. ಬೆಂಗಳೂರು ಅರಮನೆಯಲ್ಲಿ ನ.16ರಿಂದ 18ರವರೆಗೆ ಆಯೋಜನೆಯಾಗಿರುವ ಸಮ್ಮೇಳನ ಇದೇ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ.

ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ನಡೆಸಲಾಗುತ್ತಿದ್ದು, ಆಯಾ ಕ್ಷೇತ್ರದ ಅತ್ಯುನ್ನತ ತಂತ್ರಜ್ಞಾನ ಬಳಕೆಗೆ ಸಂಬಂಧಪಟ್ಟಂತೆ ಅಂತಾರಾಷ್ಟ್ರೀಯ ಒಡಂಬಡಿಕೆಗಳಾಗಲಿವೆ. ಮುಂದಿನ 10 ವರ್ಷದಲ್ಲಿ ಕರ್ನಾಟಕದಲ್ಲಿ ಆವಿಷ್ಕಾರ ಕ್ಷೇತ್ರದ ಪ್ರಗತಿ, ಹೂಡಿಕೆ ವಲಯದಲ್ಲಿ ಗಳಿಸಬೇಕಾದ ಸ್ಥಾನಮಾನವನ್ನು ಗುರುತಿಸಿಕೊಳ್ಳಲು ಸಮ್ಮೇಳನ ನಿರ್ಣಾಯಕವಾಗುವ ನಿರೀಕ್ಷೆ ಇದೆ.
-ಪ್ರಿಯಾಂಕ ಖರ್ಗೆ, ಐಟಿ-ಬಿಟಿ ಸಚಿವ

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next