ಬೆಂಗಳೂರು: ರಾಜ್ಯದಲ್ಲಿ ನವೋದ್ಯಮಗಳಿಗೆ ಉತ್ತೇಜನ ನೀಡುವ ಮಹತ್ವದ ಕಾರ್ಯಕ್ರಮಗಳಾದ “ಎಲಿವೇಟ್ 2024′ ಹಾಗೂ ಕರ್ನಾಟಕ ವೇಗವರ್ಧಕ ನೆಟ್‌ವರ್ಕ್ (ಕೆಎಎನ್)ಗೆ ಮಂಗಳವಾರ ಚಾಲನೆ ದೊರೆತಿದ್ದು, ಈ ಸಂಬಂಧದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಇದರಡಿ 302 ಸ್ಟಾರ್ಟ್‌ಅಪ್‌ಗೆ ಯಶಸ್ಸಿನ ಹಾದಿಯತ್ತ ಕೊಂಡೊಯ್ಯುವ ಗುರಿಯನ್ನು ಸರಕಾರ ಹೊಂದಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವಿನೂತನ ಆವಿಷ್ಕಾರಗಳನ್ನು ಮಾಡುವ ಸ್ಟಾರ್ಟ್‌ಅಪ್‌ಗ್ಳನ್ನು ಗುರುತಿಸಿ, ಅವುಗಳಿಗೆ 50 ಲಕ್ಷ ರೂ.ವರೆಗೆ ಆರ್ಥಿಕ ನೆರವಿನ ಜತೆಗೆ ಮಾರುಕಟ್ಟೆ ಪ್ರವೇಶ, ಮಾರ್ಗದರ್ಶನ, ಸರಕಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಆಹ್ವಾನಿಸುವ ಟೆಂಡರ್‌ಗಳಲ್ಲಿ ಆದ್ಯತೆ ನೀಡುವಂತಹ ಹಲವು ರೀತಿಯ ಉತ್ತೇಜನ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಇದುವರೆಗೆ 983 ಸ್ಟಾರ್ಟ್‌ಅಪ್‌ಗ್ಳಿಗೆ 224 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಇದರ ಮುಂದುವರಿದ ಭಾಗವಾಗಿ ಮುಂದಿನ ಮೂರು ವರ್ಷ ಆರು ಸಮೂಹಗಳಲ್ಲಿ ಇನ್ನೂ 302 ಸ್ಟಾರ್ಟ್‌ಅಪ್‌ಗ್ಳನ್ನು ಯಶಸ್ಸಿನ ಹಾದಿಯತ್ತ ಕೊಂಡೊಯ್ಯುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಐಟಿ-ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಎಲಿವೇಟ್ 2024, ಹೊಸ ಹೊಸ ಆವಿಷ್ಕಾರಗಳಿಗಾಗಿ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಿ, ಉದ್ಯಮಶೀಲತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿ ಆಯ್ಕೆಯಾದ ಪ್ರತಿ ಸ್ಟಾರ್ಟ್‌ಅಪ್‌ಗೆ 50 ಲಕ್ಷ ರೂ. ವರೆಗೆ ಅನುದಾನ ಒದಗಿಸುತ್ತದೆ. ಜತೆಗೆ ತಜ್ಞರ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಸಾಹಸೋದ್ಯಮ ಬಂಡವಾಳಕ್ಕೆ ಪ್ರವೇಶ ಸೇರಿ ಕರ್ನಾಟಕ ಸ್ಟಾರ್ಟ್‌ಅಪ್ ಅಡಿ ಹಲವಾರು ಪ್ರಯೋಜನಗಳನ್ನು ಒದಗಿಸುವ ಹೆಬ್ಟಾಗಿಲು ಇದಾಗಿದೆ ಎಂದರು. ಡೀಪ್‌ಟೆಕ್, ಎಐ, ಎಂಎಲ್, ರೊಬೊಟಿಕ್ಸ್, ಬ್ಲಾಕ್ ಚೈನ್, 5ಜಿ, ಸ್ಪೇಸ್‌ಟೆಕ್, ಸೈಬರ್ ಸೆಕ್ಯುರಿಟಿ ಮುಂತಾದ ತಂತ್ರಜ್ಞಾನಗಳ ಸ್ಟಾರ್ಟ್‌ಅಪ್‌ಗಳು ELEVATE 2024’ಗಾಗಿ
ಅಧಿಕೃತ ಪೋರ್ಟಲ್: www.missionstartupkarnataka.org ಮೂಲಕ ಅರ್ಜಿ ಸಲ್ಲಿಸಬಹುದು.
ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ನವೆಂಬರ್ 29 ಕೊನೆಯ ದಿನವಾಗಿದೆ. ಆಯ್ಕೆಯಾದ ಸ್ಟಾರ್ಟ್‌ಅಪ್‌ಗ್ಳಿಗೆ 50 ಲಕ್ಷ ರೂ. ವರೆಗೆ ಅನುದಾನ ಸಿಗಲಿದೆ. ಕಳೆದ ಬಾರಿ 105 ಸ್ಟಾರ್ಟ್‌ಅಪ್‌ಗ್ಳು ಆಯ್ಕೆಯಾಗಿದ್ದವು. 11 ಸ್ಟಾರ್ಟ್‌ಅಪ್‌ಗ್ಳು ಸರ್ಕಾರದ ವಿವಿಧ ಯೋಜನೆಗಳಡಿ ಫಲಾನುಭವಿ ಕೂಡ ಆಗಿವೆ ಎಂದು ಮಾಹಿತಿ ನೀಡಿದರು. ಇದುವರೆಗೆ ಆಯ್ಕೆಯಾದ 983 ಸ್ಟಾರ್ಟ್‌ಅಪ್‌ಗ್ಳ ಪೈಕಿ ಶೇ. 32 ನವೋದ್ಯಮಗಳು 1 ಮತ್ತು 2ನೇ ಹಂತದ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಶೇ. 28ರಷ್ಟು ಮಹಿಳೆಯರು ಮುನ್ನಡೆಸುವ ಸ್ಟಾರ್ಟ್‌ಅಪ್‌ಗ್ಳೂ ಇದರಲ್ಲಿವೆ ಎಂದರು.
ಬೆಂಗಳೂರು ಟೆಕ್ ಸಮಿಟ್ ಆ್ಯಪ್ ಬಿಡುಗಡೆ
ನ. 19ರಿಂದ 21ರ ವರೆಗೆ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ್‌ಗೆ ಸಂಬಂಧಿಸಿದಂತೆ ಆ್ಯಪ್ ಅಭಿವೃದ್ಧಿಪಡಿಸಿದ್ದು, ಇದನ್ನು ಸಚಿವ ಪ್ರಿಯಾಂಕ್ ಖರ್ಗೆ ಬಿಡುಗಡೆಗೊಳಿಸಿದರು. ಈ ನೂತನ ಆ್ಯಪ್ ಸಮಿಟ್‌ನ ಸಮಗ್ರ ಮಾಹಿತಿ ಒಳಗೊಂಡಿದೆ. ಭಾಗವಹಿಸಲಿರುವ ಸ್ಟಾರ್ಟ್‌ಅಪ್‌ಗ್ಳು, ಸ್ಪೀಕರ್‌ಗಳು, ಆವಿಷ್ಕಾರಗಳ ವಿವರ ಇದ್ದು, ನೇರವಾಗಿ ಸಂಪರ್ಕ ಸಾಧಿಸಲು ಪೂರಕವಾಗಿದೆ.