ವಿಜಯಪುರ: ದ್ರಾಕ್ಷಿಯ ಕಣಜ, ಲಿಂಬೆ ನಾಡು ಎಂದೆಲ್ಲ ಕರೆಸಿಕೊಳ್ಳುವ ವಿಜಯಪುರ ಜಿಲ್ಲೆಯಲ್ಲಿ ಗುರುವಾರ ಸಂಜೆಯಿಂದ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಸರಾಸರಿ 20.23 ಮಿ.ಮೀ. ಮಳೆ ದಾಖಲಾಗಿದೆ. ಇದರೊಂದಿಗೆ ಟ್ಯಾಂಕರ್ ಮೂಲಕ ತೋಟಗಾರಿಕೆ ಬೆಳೆ ಉಳಿಸಿಕೊಳ್ಳುವ ದುಸ್ಥಿತಿ ಎದುರಿಸುತ್ತಿದ್ದ ರೈತರು ಸಂತಸಗೊಂಡಿದ್ದಾರೆ. ಮತ್ತೊಂದೆಡೆ 40 ಡಿ.ಸೆ. ಗಡಿ ದಾಟಿದ್ದ ಬಿಸಿಲಿನ ಧಗೆಯಿಂದ ಬಸವಳಿದಿದ್ದ ಜನರಿಗೆ ತಂಪೆರೆದ ಮಳೆ ನೆಮ್ಮದಿ ಕರುಣಿಸಿದೆ.
ಮುದ್ದೇಬಿಹಾಳ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 34.2 ಮಿ.ಮೀ. ಮಳೆ ಸುರಿದರೆ, ತಿಕೋಟಾ ತಾಲೂಕಿನಲ್ಲಿ 3.6 ಮಿ.ಮೀ. ಮಳೆ ಸುರಿದಿದೆ. ಇದೇ ತಾಲೂಕಿನ ನಾಲತವಾಡ ಭಾಗದಲ್ಲಿ 40.4 ಮಿ.ಮೀ. ಮಳೆಯಾಗಿದ್ದು, ವಿಜಯಪುರ ನಗರದಲ್ಲಿ 19.2ಮಿ.ಮೀ. ಮಳೆ ದಾಖಲಾಗಿದೆ.
ವಿಜಯಪುರ ತಾಲೂಕಿನಲ್ಲಿ ಸರಾಸರಿ 21.02 ಮಿ.ಮೀ., ಬಬಲೇಶ್ವರ ತಾಲೂಕಿನಲ್ಲಿ ಸರಾಸರಿ 20.8 ಮಿ.ಮೀ., ತಿಕೋಟಾ ತಾಲೂಕಿನಲ್ಲಿ 3.6 ಮಿ.ಮೀ., ಬಸವನಬಾಗೇವಾಡಿ ತಾಲೂಕಿನಲ್ಲಿ 27.3 ಮಿ.ಮೀ., ನಿಡಗುಂದಿ ತಾಲೂಕಿನಲ್ಲಿ 34 ಮಿ.ಮೀ., ಕೊಲ್ಹಾರ ತಾಲೂಕಿನಲ್ಲಿ 28 ಮಿ.ಮೀ., ತಾಳಿಕೋಟೆ ತಾಲೂಕಿನಲ್ಲಿ 13.60 ಮಿ.ಮೀ., ಇಂಡಿ ತಾಲೂಕಿನಲ್ಲಿ 21.80 ಮಿ.ಮೀ., ಚಡಚಣ ತಾಲೂಕಿನಲ್ಲಿ 15.65 ಮಿ.ಮೀ., ಸಿಂದಗಿ ತಾಲೂಕಿನಲ್ಲಿ 12.50 ಮಿ.ಮೀ., ದೇವರಹಿಪ್ಪರಗಿ ತಾಲೂಕಿನಲ್ಲಿ 10.63 ಮೀ.ಮೀ., ಮಳೆ ಸುರಿದಿದೆ.
ಪ್ರಾಣಿ ಹಾನಿ
ಗುರುವಾರ ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಸಿಡಿಲಿಗೆ ಮಹಾದೇವ ಯಮನಪ್ಪ ಜೇರಟಗಿ ಎಂಬ ರೈತರಿಗೆ ಸೇರಿದ ಒಂದು ಹಸು, ನಾಲತವಾಡ ಗ್ರಾಮದ ಬಳಿಯ ಚವನಭಾವಿ ಗ್ರಾಮದಲ್ಲಿ ಮಲ್ಲಪ್ಪ ನಂದಪ್ಪ ಗುರಿಕಾರ ಅವರಿಗೆ ಸೇರಿದ ಆರು ಮೇಕೆಗಳು ಬಲಿಯಾಗಿವೆ ಎಂದು ಜಿಲ್ಲಾಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.