ಕಾಪಿ ಹೊಡೆಯೋದು ಬರೀ ಎಸ್ಸೆಸ್ಸೆಲ್ಸಿ, ಪಿಯುಸಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಾತ್ರವೇ ಅಲ್ಲ. ನಾವು ಮೆಡಿಕಲ… ವಿದ್ಯಾರ್ಥಿಗಳೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಮುನ್ನಾಭಾಯಿ ಎಂ.ಬಿ.ಬಿ.ಎಸ್ ಸಿನಿಮಾ ನೋಡಿದ್ದೀರಿ ತಾನೇ? ನೋಡಿದ್ದರೆ, ಅದರಲ್ಲಿ ಸಂಜಯ್ ದತ್ ಹೇಗೆ ಕಾಪಿ ಹೊಡೆಯುತ್ತಾರೆ ಎಂಬುದು ತಿಳಿದಿರುತ್ತದೆ. ನಮ್ಮ ಪರಿಸ್ಥಿತಿ ಹೇಗೆಂದರೆ ಎಷ್ಟೋ ಸಲ ಕಾಪಿ ಹೊಡೆದೂ ಪ್ರಯೋಜನವಾಗುವುದಿಲ್ಲ. ಮೆಡಿಕಲ್ ಪಾಸು ಮಾಡುವುದೆಂದರೆ ಅಷ್ಟು ಕಷ್ಟ! ನಿಜಕ್ಕೂ ಅದು ಯುದ್ಧವೇ ಸರಿ.
ಇಷ್ಟು ದಿನ ಕಷ್ಟಪಟ್ಟು, ಓತ್ಲಾ ಹೊಡೆದು ಓದಿ ಉಪಯೋಗವಾಗುತ್ತಿಲ್ಲ ಎಂದೆನಿಸಿ ನಾವೊಂದಷ್ಟು ಮಂದಿ ಸ್ನೇಹಿತರು ಸೇರಿ ಕ್ಯಾಂಟೀನಿನಲ್ಲಿ ದುಂಡು ಮೇಜಿನ ಸಭೆ ನಡೆಸಿದೆವು. ಸಭೆಯಲ್ಲಿ ಒಂದು ಪ್ಲಾನು ರಚನೆಯಾಯ್ತು. ಅದರ ಪ್ರಕಾರ ಎಲ್ಲರೂ ಸಾಮೂಹಿಕವಾಗಿ ಕಾಪಿ ಮಾಡುವುದು ಅಂತಾಯ್ತು. ಒಬಿಜಿ ಅನ್ನೋ ಮಹಾಸಾಗರದಂಥ ಸಬೆjಕ್ಟ್ ಅನ್ನು ಒಂದೇ ದಿನದಲ್ಲಿ ಓದಿ ಮುಗಿಸೋದು ಅಸಾಧ್ಯವಾಗಿತ್ತು. ಹೀಗಾಗಿ 2000 ಪುಟಗಳ ಟೆಕ್ಸ್ಟ್ಬುಕ್ಕನ್ನು ನಾವೈದು ಮಂದಿ ಸ್ನೇಹಿತರು ಭಾಗ ಮಾಡಿಕೊಂಡು ಕಾಪಿ ಚೀಟಿಗಳನ್ನು ಸಿದ್ಧಪಡಿಸುವ ಪುಣ್ಯಕಾರ್ಯದಲ್ಲಿ ಮಗ್ನರಾದೆವು. ಅಂತೂ ಇಂತೂ ಹೇಗೋ ಕಾರ್ಯ ಮುಗಿಯಿತು. ಮರುದಿನ ಪರೀಕ್ಷೆ.
ಮೇಷ್ಟ್ರು ಬಂದ್ರು. ಅವರು ತುಂಬಾ ಸ್ಟ್ರಿಕುr. ಅಯ್ಯೋ ಈ ಆಸಾಮಿ ಬಂದಿದ್ದಾರಲ್ಲ, ಇವತ್ತು ಕಾಪಿ ಹೊಡೆದಂತೆಯೇ ಎಂದುಕೊಂಡು ಪಾಸಾಗುವ ಆಸೆ ಬಿಟ್ಟೆವು. ಹಾಲ್ ಒಳಗೆ ರೋಲ್ ನಂಬರ್ ಪ್ರಕಾರವಾಗಿ ಕುಳಿತೆವು. ಆದರೆ ಮೇಷ್ಟ್ರ ಪ್ಲಾನೇ ಬೇರೆಯಾಗಿತ್ತು. ಅವರು ಅಲ್ಫಾಬೆಟಿಕಲ್ ಆರ್ಡರ್‌ನಲ್ಲಿ ಕೂರುವಂತೆ ಹೇಳಿದರು. ನಮ್ಮ ದುರಾದೃಷ್ಟ ಎಷ್ಟು ಚೆನ್ನಾಗಿತ್ತೆಂದರೆ ನಾವೈದು ಮಂದಿಯ ಹೆಸರುಗಳು “ಎ’ ಇಂದಲೇ ಶುರುವಾಗುತ್ತಿದ್ದಿದ್ದರಿಂದ ಮೊದಲನೇ ಸಾಲಿನಲ್ಲಿ ನಮ್ಮನ್ನು ಕೂರಿಸಿದರು.
ನಾವೆಲ್ಲರೂ ಮುಖ ಮುಖ ನೋಡಿಕೊಂಡೆವು. ಮೊದಲನೇ ಸಾಲಿನಲ್ಲಿ ಕೂತು ಕಾಪಿ ಹೇಗೆ ಹೊಡೆಯುವುದು ಎಂಬುದೇ ದೊಡ್ಡ ಸವಾಲಾಯ್ತು. ಹಾಗೂ ಹೀಗೂ ಅತ್ತಿಂದಿತ್ತ, ಇತ್ತಿಂದತ್ತ ಉತ್ತರಗಳನ್ನು ನೋಡಿಕೊಂಡು ಉತ್ತರಪತ್ರಿಕೆ ತುಂಬಿಸಿದೆವು. ಕಾಪಿ ಹೊಡೆಯುವುದಕ್ಕಿಂತ ಓದುವುದೇ ಎಷ್ಟೋ ಸುಲಭ ಅನ್ನೋದು ಅವತ್ತು ನಾವು ಕಲಿತ ಪಾಠ. ಕಾಪಿ ಹೊಡೆದಿದ್ದು ಅದೇ ಕೊನೆ.
ಅದ್ಯಾವ ಮಾಯೆಯೋ ಏನೋ, ಆ ಪರೀಕ್ಷೆಯಲ್ಲಿ ನಾವು ಪಾಸಂತೂ ಆದ್ವಿ!
– ಚಿನ್ನಿ, ಮೈಸೂರು