Advertisement

ರಾಯರ ಮಠದ ಮುಖ್ಯದ್ವಾರಕ್ಕೆ 200 ಕೆಜಿ ರಜತ ಹೊದಿಕೆ

10:36 AM Aug 18, 2018 | |

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಗೆ ಪ್ರತಿ ವರ್ಷ ಒಂದಲ್ಲ ಒಂದು ವಿಶೇಷತೆ ಇದ್ದೇ ಇರುತ್ತದೆ. ಈ ಬಾರಿಯೂ ರಾಯರ ಮಠದ ಮುಖ್ಯದ್ವಾರಕ್ಕೆ ಅಂದಾಜು ಒಂದು ಕೋಟಿ ರೂ. ವೆಚ್ಚದಲ್ಲಿ ರಜತದ ಹೊದಿಕೆ ನಿರ್ಮಿಸಲಾಗುತ್ತಿದೆ.

Advertisement

ರಾಜ್ಯದ ಉದ್ಯಮಿಯೊಬ್ಬರು ದೇಣಿಗೆ ನೀಡಿದ್ದು, ಸುಮಾರು 200 ಕೆಜಿ ತೂಕದ ಬೆಳ್ಳಿಯ ಹೊದಿಕೆ ಇದಾಗಿದೆ. ಕಲ್ಲಿನ ಚೌಕಟ್ಟು ಹಾಗೂ ಎರಡು ದ್ವಾರ ಬಾಗಿಲುಗಳಿಗೆ ಸಂಪೂರ್ಣ ಬೆಳ್ಳಿ ಹೊದಿಕೆ ಮಾಡಲಾಗುತ್ತಿದೆ. ಕಳೆದ ಎರಡು ತಿಂಗಳಿನಿಂದಲೇ ಈ ಕಾರ್ಯ ಆರಂಭಗೊಂಡಿದ್ದು, ಬಾಗಿಲುಗಳಿಗೆ ಬೆಳ್ಳಿ ಲೇಪನ ಕಾರ್ಯ ನಡೆದಿದೆ.

ಹಿಂದಿನ ಎರಡೂಮೂರು ವರ್ಷಗಳಲ್ಲಿ ದೊಡ್ಡಮಟ್ಟದ ಕಾರ್ಯಕ್ರಮಗಳು ಹೆಚ್ಚಾಗುತ್ತಿವೆ. ಹಿಂದೆ ರಾಯರಿಗೆ ಚಿನ್ನದ
ಹರಿಯಾಣ, ಚಿನ್ನದ ಗೋಪುರ, ಬೃಂದಾವನ ಸುತ್ತಲೂ ಶಿಲಾಮಂಟಪ, ರತ್ನಖಚಿತ ಹಾರ ಸೇರಿ ವಿವಿಧ ರೀತಿಯ ಸೇವೆಗಳನ್ನು ಭಕ್ತರು ಸಲ್ಲಿಸುತ್ತಿದ್ದಾರೆ. ಈ ಬಾರಿಯೂ ಭಕ್ತರೊಬ್ಬರು ಇಂಥ ಕಾರ್ಯಕ್ಕೆ ಮುಂದಾಗಿದ್ದಾರೆ.

ಹೀಗಿರಲಿದೆ ಹೊದಿಕೆ: ರಾಯರ ಮಠ ಪ್ರವೇಶಿಸುತ್ತಿದ್ದಂತೆ ದೊಡ್ಡ ದ್ವಾರ ಬಾಗಿಲಿದೆ. ಎರಡು ಕಲ್ಲಿನ ಬೃಹತ್‌ ಚೌಕಟ್ಟು, ಅದಕ್ಕೆ ಎರಡು ಬೃಹದಾಕಾರದ ಬಾಗಿಲುಗಳಿವೆ. ಅವುಗಳಿಗೆ ಸಂಪೂರ್ಣ ಬೆಳ್ಳಿ ಹೊದಿಕೆ ಮಾಡಲಾಗುತ್ತಿದೆ. ಎರಡು ಬಾಗಿಲುಗಳಿಗೆ ವಿಷ್ಣುವಿನ ದಶಾವತಾರದ ಚಿತ್ರಗಳನ್ನು ಕೆತ್ತಲಾಗುತ್ತಿದೆ. ಉಳಿದಂತೆ ಹೂ, ಬಳ್ಳಿ, ಸುಂದರ ಕಲಾಕೃತಿಗಳನ್ನು ಕೆತ್ತಲಾಗುತ್ತಿದೆ.

ಹಗಲಿರುಳು ಕೆಲಸ: ಈ ಕಾರ್ಯವನ್ನು ಬೆಂಗಳೂರು ಮೂಲದ ಗುರುದತ್‌ ಹ್ಯಾಂಡ್‌ ಕ್ರಾಫ್ಟ್‌ ಸಂಸ್ಥೆಗೆ ವಹಿಸಲಾಗಿದೆ. ಒಂಭತ್ತು ಜನ ಕಲಾವಿದರು ಸತತ ಎರಡು ತಿಂಗಳಿನಿಂದ ಈ ಕಾರ್ಯ ಮಾಡುತ್ತಿದ್ದಾರೆ. ಶ್ರೀಮಠದಲ್ಲೇ ಬೀಡು ಬಿಟ್ಟಿರುವ ಅವರು, ಹಗಲಿರುಳು ಶ್ರಮಿಸುತ್ತಿದ್ದಾರೆ. ಬಹುತೇಕ ಅಂತಿಮ ಸ್ಪರ್ಶ ನೀಡುತ್ತಿದ್ದು, ಈ ಆರಾಧನೆಗೆ ಮುಕ್ತಗೊಳಿಸುವ ಸಾಧ್ಯತೆಗಳಿವೆ.

Advertisement

„ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next