ಪ್ರತೀ ವರ್ಷ ರಾಯರ ಆರಾಧನೆಗೆ ಮಠಕ್ಕೆ ಹೋಗಿ ಪೂಜೆ ಸಲ್ಲಿಸುವುದು ಅಭ್ಯಾಸವೇ ಆಗಿತ್ತು. ಈ ವರ್ಷ ನಾನು ಐರ್ಲೆಂಡ್‌ನಲ್ಲಿ ಇರುವ ಕಾರಣ ರಾಯರ ದರ್ಶನ ಸಿಗೋದಿಲ್ಲ ಎಂದು ಅಂದುಕೊಳ್ಳುವಷ್ಟರಲ್ಲಿ ರಾಯರೇ ಐರ್ಲೆಂಡ್‌ಗೆ ಬಂದಿದ್ದಾರೆ. ಅದೊಂದು ಕ್ಷಣ ರಾಯರ ಪವಾಡವೇ ಅನಿಸಿತು. ಇದಕ್ಕೆಲ್ಲ ಕಾರಣ ಜಿಬಿ ಮತ್ತು ಎಸ್‌ಆರ್‌ಎಸ್‌ಬಿ (ಗ್ರೇಟ್ ಬ್ರಿಟನ್ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ, ಸ್ಲೋಕ್, ಯುಕೆ) ಸಂಘದ ಶ್ರೀಹರಿ, ಪ್ರಹ್ಲಾದ್, ಗೋಪಿ ಆಚಾರ್ಯ, ಗುರುರಾಜ ಹಾಗೂ ಲಿಮೆರಿಕ್‌ನ ಪವನ್ ಗುರುರಾಜ ರಾವ್, ಕೃಷ್ಣ ಮೂರ್ತಿ, ಮೋಹನ್ ಕುಮಾರ್, ಸಚಿನ್ ಕದಡಿ ಇವರಿಗೆ ಅನಂತಾನಂತ ಧನ್ಯವಾದಗಳು.
ಐರ್ಲೆಂಡ್‌ನಲ್ಲಿ ಮೊದಲ ಬಾರಿಗೆ ಶ್ರೀ ಗುರುರಾಘವೇಂದ್ರ ಸ್ವಾಮಿಗಳ 353ನೇ ಆರಾಧನೆ ಆ.31ರಂದು ವಿಜೃಂಭಣೆಯಿಂದ ನೆರ ವೇರಿತು. ಐರ್ಲೆಂಡ್‌ನ ಲಿಮೆರಿಕ್ ನಗರದಲ್ಲಿರುವ ಅಹೆನ್ ಜಿಎಎ ಕ್ಲಬ್‌ನ ಕಮ್ಯೂನಿಟಿ ಹಾಲ್‌ನಲ್ಲಿ ನಡೆದ ಈ ಪವಿತ್ರ ಉತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ತಮ್ಮ ಭಕ್ತಿ ಹಾಗೂ ನಂಬಿಕೆ ತೋರಿಸಿದರು.
ಜಿಬಿ ಮತ್ತು ಎಸ್‌ಆರ್‌ಎಸ್‌ಬಿ ಸಂಘ ಟನೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಪೂರ್ಣಬೋಧ ಶ್ರೀ ರಾಘವೇಂದ್ರ ಸ್ತೋತ್ರ, ಕನಕಾಭಿಷೇಕ, ಪಂಚಾಮೃತ ಅಭಿಷೇಕ, ಪಲ್ಲಕ್ಕಿ ಉತ್ಸವ, ರಾಯರ ಪ್ರಸಾದ ವಿತರಣೆ ಹಾಗೂ ಹಲವಾರು ದೇವತಾ ಕಾರ್ಯಗಳು ಜರಗಿದವು. ಬೃಂದಾವನದ ಅಲಂಕಾರ ನೋಡಲು ಎರಡು ಕಣ್ಣು ಸಾಲದಂತಾಗಿತ್ತು.
ಬಾಳೆಎಲೆ ಊಟ ಮಾಡಿ ವರ್ಷವೇ ಆಗಿತ್ತು. ಕಡ್ಲೆಬೇಳೆ ಪಾಯಸ, ಹಯ ಗ್ರೀವ, ರಸಾಯನ, ವಾಂಗೀಬಾತ್, ಹುರಳಿಕಾಯಿ ಪಲ್ಯ, ಕೋಸಂಬರಿ… ಆಹಾ ಈಗಲೂ ನಾಲಿಗೆಗೆ ಮರೆಯಲಾಗದ ರುಚಿ. ಅಡುಗೆ ಮಾಡಿದ ಶ್ರೀಹರಿ, ಸಚಿನ್, ಗುರುರಾಜ್ ಅವರಿಗೆ ನಮೋ ನಮಃ. ಸಭೆಯಲ್ಲಿ ಮಾತನಾಡಿದ ಸಂಘಟಕರು “ಈ ಅಧ್ಯಾತ್ಮಿಕ ಕಾರ್ಯಕ್ರಮದಿಂದ ಕನ್ನಡಿಗರ ಒಂದುಗೂಡಿಸುವ ಸಂದೇಶ ನೀಡಿದ್ದು, ಇದರಿಂದ ಭಕ್ತರಲ್ಲಿ ಹಿಂದೂ ಧರ್ಮದ ಪರಂಪರೆ ಹಾಗೂ ಸಂಸ್ಕೃತಿಯ ಬಗೆಗಿನ ಗೌರವ ಹೆಚ್ಚಾಗಿದೆ’ ಎಂದು ಅಭಿಪ್ರಾಯಪಟ್ಟರು.
ಕನ್ನಡಿಗರ ಹಬ್ಬ, ಉತ್ಸವ, ಆರಾಧನೆಗಳಿಗೆ ಈಗಲೂ ವಿಶೇಷ ಮಹತ್ವವಿದೆ ಎಂಬುದಕ್ಕೆ ಈ ರಾಯರ ಆರಾಧನೆ ನಿಖರವಾಗಿ ಸಾಬೀತಾಗಿದೆ. ಇಂತಹ ಪುಣ್ಯಕಾರ್ಯಗಳು ಐರ್ಲೆಂಡ್‌ನಲ್ಲೂ ನೆರವೇರುಸಿತ್ತುರುವುದು ಒಂದು ವಿಶೇಷವೇ.
ಈ ರಾಯರ ಆರಾಧನೆ ಅಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬವೇ ಆಗಿದ್ದು, ಮುಂದಿನ ವರ್ಷಗಳಲ್ಲೂ ಇದೇ ರೀತಿಯ ಉತ್ಸವವನ್ನು ನಡೆಸಲು ಪ್ರತಿಜ್ಞೆ ಮಾಡಲಾಯಿತು. ಇಂತಹ ಕಾರ್ಯಕ್ರಮಗಳು ಬಾಂಧವ್ಯದ ಭಾವನೆ ಹಾಗೂ ಸಮಾಜವನ್ನು ಮತ್ತಷ್ಟು ಸಶಕ್ತ ಗೊಳಿಸುವಂತೆ ಮಾಡಲಿವೆ ಎಂದು ಭಕ್ತರು ಸಂತೋಷ ವ್ಯಕ್ತಪಡಿಸಿದರು. ನಮ್ಮ ಗೆಲುವಿನೆಡೆಗೆ ನಡೆಸುವ ಧೈರ್ಯ ತುಂಬುವ ಏಕೈಕ ಮಾತು, ಮಂತ್ರ ರಾಯರಿದ್ದಾರೆ. ಹರೇ ಶ್ರೀನಿವಾಸ.
*ಪ್ರೀತಮ್ ಬಾಬು, ಐರ್ಲೆಂಡ್