Advertisement

Siddaramaiah ಮಂತ್ರಾಲಯ ಪ್ರವಾಸ ರದ್ದು: ಮೈಸೂರು ಬಂದ್‌ ವಾಪಸ್‌

12:49 AM Aug 19, 2024 | Team Udayavani |

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬೆನ್ನಲ್ಲೇ ರಾಜಕೀಯ ಬೆಳವಣಿಗೆಗಳು ಬಿರುಸುಗೊಂಡಿದ್ದು ಇದರ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂತ್ರಾಲಯ ಪ್ರವಾಸ ದಿಢೀರ್‌ ರದ್ದಾಗಿದೆ. ಸಿದ್ದರಾಮಯ್ಯನವರು ಸೋಮವಾರ ಬಳ್ಳಾರಿ ಜಿಲ್ಲೆ ಹಾಗೂ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯಲ್ಲಿರುವ ಮಂತ್ರಾಲಯಕ್ಕೆ ಪ್ರವಾಸ ಕೈಗೊಂಡಿದ್ದರು. ಅಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿ ಭಾಗವಹಿಸಲು ಉದ್ದೇಶಿಸಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಪ್ರವಾಸ ರದ್ದುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿಯ ವಿಶೇಷ ಕರ್ತವ್ಯಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಶನಿವಾರ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ ಅನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿಎಂ ಈ ಪ್ರವಾಸ ರದ್ದುಗೊಳಿಸಿದ್ದಾರೆ.

Advertisement

ಮೈಸೂರು ಬಂದ್‌ ವಾಪಸ್‌
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ನಡೆ ಖಂಡಿಸಿ ಆ. 19ರ ಸೋಮವಾರದಂದು ಹಮ್ಮಿಕೊಂಡಿದ್ದ ಮೈಸೂರು ಬಂದ್‌ ಕರೆಯನ್ನು ವಾಪಸ್‌ ಪಡೆಯಲಾಗಿದೆ.

ಬಂದ್‌ ಮಾಡುವುದರಿಂದ ಶಾಲಾ ಕಾಲೇಜು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗುವುದರಿಂದ ಬಂದ್‌ ಮಾಡದಂತೆ ಖುದ್ದು ಸಿದ್ದರಾಮಯ್ಯ ಅವರೇ ಸಲಹೆ ನೀಡಿದ್ದಾರೆ. ಆದ್ದರಿಂದ ಬಂದ್‌ ಕರೆ ವಾಪಸ್‌ ಪಡೆಯಲಾಗಿದೆ. ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಹಾಗೂ ಶೋಷಿತ ಸಮುದಾಯದ ಮುಖಂಡ ಬಿ. ಸುಬ್ರಹ್ಮಣ್ಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬಂದ್‌ ವಿಚಾರವಾಗಿ ನಡೆಸಿದ ಸಭೆಗೆ ಆಗಮಿಸಿ ಸಲಹೆ-ಸೂಚನೆ ನೀಡಿದ ಹಾಗೂ ಸಹಕರಿಸಿದ ಶೋಷಿತ ಸಮುದಾಯದ ಮುಖಂಡರುಗಳು ಮತ್ತು ಅಹಿಂದ ಮುಖಂಡರು ಹಾಗೂ ಸಿದ್ದರಾಮಯ್ಯ ಅವರು ಧನ್ಯವಾದ ಅರ್ಪಿಸಿದ್ದಾರೆ.

ಸಿದ್ದರಾಮಯ್ಯ ನಿಷ್ಕಳಂಕ: ಸಲೀಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಷ್ಕಳಂಕ ಹಾಗೂ ಪ್ರಾಮಾಣಿಕ ರಾಜಕಾರಣಿ. ಅವರ ವಿರುದ್ಧ ರಾಜ್ಯಪಾಲರು ಪ್ರಾಷಿಕ್ಯೂಷನ್‌ಗೆ ಅನುಮತಿ ನೀಡಿರುವುದು ರಾಜಕೀಯ ಪ್ರೇರಿತವಾಗಿದೆ. ಇದನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬೀದಿಗಿಳಿಯಲಿದ್ದಾರೆ ಎಂದು ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಪಕ್ಷ ಹಾಗೂ ಸರಕಾರ ಸಿದ್ದರಾಮಯ್ಯ ಅವರ ಜತೆಗಿದೆ. ಬಿಜೆಪಿ ಹಾಗೂ ಕೇಂದ್ರ ಸರಕಾರದ ಷಡ್ಯಂತ್ರಕ್ಕೆ ನಾವು ಬಗ್ಗುವುದಿಲ್ಲ, ಜಗ್ಗುವುದಿಲ್ಲ. ಬಿಜೆಪಿ ಅವಧಿಯ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವ ಮೂಲಕ ಅವರನ್ನು ಬೆತ್ತಲೆ ಮಾಡುತ್ತೇವೆ ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next