Advertisement

ನಗರದಲ್ಲಿ 2 ದಿನ ನಿಷೇಧಾಜ್ಞೆ: ಉಲ್ಲಂಘಿಸಿದರೆ ಜೈಲು, ಎಚ್ಚರಿಕೆ

12:36 PM Sep 06, 2017 | Team Udayavani |

ಮೈಸೂರು: ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಬೈಕ್‌ರ್ಯಾಲಿಗೆ ಅನುಮತಿ ನಿರಾಕರಿಸಲಾಗಿದ್ದು, ಇದರ ನಡುವೆಯೂ ಬೈಕ್‌ರ್ಯಾಲಿ ನಡೆಸಲು ಮುಂದಾದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್‌ ಎಚ್ಚರಿಸಿದರು.

Advertisement

ಸೆ.6ರಂದು ಮಂಗಳೂರು ಚಲೋ ಹಿನ್ನೆಲೆಯಲ್ಲಿ ಬೈಕ್‌ರ್ಯಾಲಿ ನಡೆಸಲು ಅನುಮತಿ ಕೋರಿ ಯುವಮೋರ್ಚಾ ವತಿಯಿಂದ ಮನವಿ ಸಲ್ಲಿಸಲಾಗಿತ್ತು. ಆದರೆ, ರ್ಯಾಲಿ ವೇಳೆ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಕಾರಣ ಕೇಳಿ ಬಿಜೆಪಿ ಯುವಮೋರ್ಚಾಗೆ ಷೋಕಾಸ್‌ ನೋಟಿಸ್‌ ನೀಡಲಾಗಿತ್ತು. ಆದರೆ, ನೋಟಿಸ್‌ಗೆ ಯುವಮೋರ್ಚಾ ವತಿಯಿಂದ ಸಮಂಜಸ ಉತ್ತರ ನೀಡದ ಕಾರಣ, ಸಾರ್ವಜನಿಕ ಹಿತದೃಷ್ಟಿಯಿಂದ ಬೈಕ್‌ರ್ಯಾಲಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2 ದಿನ ನಿಷೇಧಾಜ್ಞೆ
ಬೈಕ್‌ರ್ಯಾಲಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವುದಾಗಿ ಬಿಜೆಪಿ ಯುವಮೋರ್ಚಾ ತಿಳಿಸಿರುವುದರಿಂದ ವಾಹನ ಸಂಚಾರ ಸೇರಿದಂತೆ ಸಾರ್ವಜನಿಕರ ದೈನಂದಿನ ಜೀವನಕ್ಕೆ ಸಾಕಷ್ಟು ತೊಂದರೆ ಆಗಲಿದೆ. ಅಲ್ಲದೆ ರ್ಯಾಲಿಯು ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿ ಸಾಗುವುದರಿಂದ ಮಾರ್ಗಮಧ್ಯೆ ಕೋಮು ಸಂಘರ್ಷ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಬೈಕ್‌ರ್ಯಾಲಿಗೆ ಅನುಮತಿ ನಿರಾಕರಿಸಲಾಗಿದೆ.

ಜತೆಗೆ ಮುನ್ನಚ್ಚರಿಕೆಯಾಗಿ ಸೆ.6ರಂದು ಬೆಳಗ್ಗೆ 8 ರಿಂದ ಸೆ.8ರಂದು ಬೆಳಗ್ಗೆ 8ಗಂಟೆವರೆಗೆ ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹೀಗಾಗಿ ಎರಡೂ ದಿನದಂದು ನಗರ ವ್ಯಾಪ್ತಿಯ ಪ್ರದೇಶಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಹೊರತುಪಡಿಸಿ, ಯಾವುದೇ ರ್ಯಾಲಿ, ಪ್ರತಿಭಟನೆ, ಧರಣಿ ನಡೆಸುವಂತಿಲ್ಲ ಎಂದು ಹೇಳಿದರು.

ಕಟ್ಟುನಿಟ್ಟಿನ ಕ್ರಮ
ನಿಷೇಧಾಜ್ಞೆ ನಡುವೆಯೂ ಬೈಕ್‌ರ್ಯಾಲಿ ನಡೆಸಲು ಮುಂದಾದಲ್ಲಿ ಅದನ್ನು ನಿಯಂತ್ರಿಸುವ ಶಕ್ತಿ ನಗರ ಪೊಲೀಸರಿಗಿದ್ದು, ಮೂರು ಸಾವಿರ ಪೊಲೀಸ್‌ ಸಿಬ್ಬಂದಿ ಸಾಮರ್ಥಯವಿರುವ ತಮಗೆ 1 ಸಾವಿರ ಬೈಕ್‌ ಸವಾರರನ್ನ ತಡೆಯುವುದು ದೊಡ್ಡ ವಿಷಯವಲ್ಲ. ಇದರ ಹೊರತಾಗಿಯೂ ನಿಷೇಧಾಜ್ಞೆ ಉಲ್ಲಂಘಿಸಿ ಬೈಕ್‌ರ್ಯಾಲಿ ನಡೆಸಿದ್ದೇ ಆದಲ್ಲಿ ಅಂತವರುಗಳ ವಿರುದ್ಧ ರೌಡಿಶೀಟ್‌ ತೆರೆಯಲಾಗುವುದು, ರ್ಯಾಲಿಯಲ್ಲಿ ಭಾಗಿಯಾಗುವ ಕ್ರಿಮಿನಲ್‌ ಪ್ರಕರಣದಡಿಯಲ್ಲಿ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗುವುದು.

Advertisement

ಜತೆಗೆ ರ್ಯಾಲಿಯಲ್ಲಿ ಬಾಗವಹಿಸುವವರನ್ನು ಬಂಧಿಸಿ ಜೈಲಿಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 12 ಸಾರಿಗೆ ಬಸ್‌ಗಳನ್ನು ಕಾದಿರಿಸಲಾಗಿದೆ. ಬಿಜೆಪಿಯ ಬೈಕ್‌ರ್ಯಾಲಿಗೆ ಅನುಮತಿ ನೀಡಬಾರದೆಂದು ಗೃಹ ಇಲಾಖೆಯಿಂದ ಯಾವುದೇ ಸೂಚನೆ ಬಂದಿಲ್ಲ ಎಂದರು. ಉಪ ಪೊಲೀಸ್‌ ಆಯುಕ್ತರಾದ ವಿಷ್ಣುವರ್ಧನ್‌, ವಿಕ್ರಂ ಆಮಟೆ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next