ಶ್ರೀನಿವಾಸಪುರ: ಸಾಲ ಕೊಟ್ಟವರು ಮನೆ ಬಳಿ ಬಂದು ಬಡ್ಡಿ ಕೇಳಬಾರದು. ಎಲ್ಲಾ ಕುಟುಂಬಗಳು ಗೌರವದಿಂದ ಬದುಕಬೇಕು ಎಂಬ ಕಾರಣಕ್ಕೆ ಕುಟುಂಬದ ಕಣ್ಣಾಗಿರುವ ಮಹಿಳೆಯರಿಗೆ ಸ್ತ್ರೀ ಶಕ್ತಿ ಸಂಘಗಳಿಗೆ ಡಿಸಿಸಿ ಬ್ಯಾಂಕು ಸಾಲ ಕೊಡುತ್ತಿದೆ. ಆದರೆ ಒಳ್ಳೆಯ ವಿಷಯದಲ್ಲಿ ಉಳುಮೆ ಮಾಡುವವನಿಗೆ ನರಿ ತೋರಿಸುವ ಮಂದಿ ಹೆಚ್ಚಾಗಿದ್ದಾರೆ. ಹೀಗಾಗಿ ತಾಯಂದಿರುವ ಅಂತಹವರ ಮಾತು ಕೇಳದೇ ಬ್ಯಾಂಕಿಗೆ ಪ್ರಾಮಾಣಿಕವಾಗಿ ಸಾಲ ಮರುಪಾವತಿಸಬೇಕು ಎಂದು ಶಾಸಕ ಕೆ.ಆರ್. ರಮೇಶ್‌ಕುಮಾರ್ ಕಿವಿಮಾತು ಹೇಳಿದರು.
ತಾಲೂಕಿನ ಮಣಿಗಾನಹಳ್ಳಿ ಗ್ರಾಮದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್ ಮತ್ತು ಮಣಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದಿಂದ ಏರ್ಪಡಿಸಿದ್ದ ಸ್ತ್ರೀ ಶಕ್ತಿ ಸಂಘಗಳ 400 ಮಹಿಳೆಯರಿಗೆ 2 ಕೋಟಿ ರೂ., ಹಾಗೂ 144 ರೈತರಿಗೆ 1.27 ಕೋಟಿ ರೂ.ಗಳನ್ನು ಶೂನ್ಯ ಬಡ್ಡಿಯಲ್ಲಿ ವಿತರಿಸಿ ಮಾತನಾಡಿದರು.
ಮಹಿಳೆಯರು ಸ್ವಾವಲಂಬಿ ಬದಕು ನಡೆಸಲು ಅವಶ್ಯವಿರುವ ಸಾಲ ಡಿಸಿಸಿ ಬ್ಯಾಂಕ್ ನೀಡುತ್ತಿದೆ. ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಗೆ ಶೂನ್ಯ ಬಡಿಯಲ್ಲಿ 50 ಸಾವಿರ ಸಾಲ ನೀಡಲಾಗುತ್ತಿದೆ. ಮುಂದೆ 1 ಲಕ್ಷ ರೂ.ಗಳಿಗೆ ವಿಸ್ತರಿಸುವ ಯೋಜನೆಯಿದೆ. ಹಬ್ಬ ಹರಿದಿನಗಳು ದೇವಸ್ಥಾನದ ಕಾರ್ಯಕ್ರಮಗಳಿದ್ದರೆ, ಮಹಿಳೆಯರು ಎಲ್ಲೋ ಒಂದೆಡೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಬದಲಾದ ಪರಿಸ್ಥಿಯಲ್ಲಿ ಇಂತಹ ಸಭೆಗಳಿಗೆ ಬಂದಿರುವುದು ಸಂತಸದ ಸಂಗತಿ. ಮನೆಯಲ್ಲಿ ಗಂಡ ಹೆಂಡತಿ ತಾರತಮ್ಯವಿಲ್ಲದೇ ಸಾಮರಸ್ಯದಲ್ಲಿ ದುಡಿಮೆ ಮಾಡಿ, ಅರ್ಥಿಕವಾಗಿ ಅಭಿವೃದ್ಧಿ ಹೊಂದಿ ಮನೆ ಮಕ್ಕಳು ಸಂಸಾರ ಎಂದು ತಿಳಿದು ನಡೆಯಬೇಕಾಗಿದೆ ಎಂದರು.
ಗಂಡ ಪರಾಕ್ರಮಿಯಾದರೂ ಹೆರಿಗೆ ನೋವು ತಾಯಿಗೆ ಮಾತ್ರ ಗೊತ್ತು. ಅದೇ ರೀತಿ ಬ್ಯಾಂಕ್ ತಾಯಿ ಇದ್ದಂತೆ. ಈಗ ಬ್ಯಾಂಕ್‌ನ ಆಡಳಿತ ವ್ಯವಸ್ಥೆ ಸುಧಾರಿಸಿದೆ. ಈ ಭಾಗದಲ್ಲಿ ವಿಶೇಷ ಒತ್ತು ನೀಡಿ ಸಾಲ ಒದಗಿಸಲಾಗುತ್ತಿದೆ. ಕೆಲವು ಕಡೆ ನಮಗೆ ಸಾಲ ಸಿಕ್ಕಿಲ್ಲವೆಂದು ಮೊಬೈಲ್‌ನಲ್ಲಿ ಕೇಳುತ್ತಾರೆಯೆಂದರೆ ನನ್ನ ಮೇಲೆ ನಂಬಿಕೆಯಿಂದ ಕೇಳುತ್ತಾರೆ. ಆದ್ದರಿಂದ ಆ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬ್ಯಾಂಕು ಸಾಲ ನೀಡಿದರೆ, ಅಷ್ಟೇ ನಿಯತ್ತಾಗಿ ಸಾಲ ಮರುಪಾವತಿ ಮಾಡುತ್ತಾರೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಹೇಳಿದರು.
ಅದೇ ರೀತಿ ತಾವು ತೆಗೆದುಕೊಳ್ಳುವ ಸಾಲ ಸಕಾಲಕ್ಕೆ ಮರುಪಾವತಿ ಮಾಡಿದಲ್ಲಿ ಮತ್ತಷ್ಟು ಸಾಲ ಪಡೆದುಕೊಳ್ಳಲು ಸಾದ್ಯವಾಗುತ್ತದೆ. ತಲಾ 30 ಸಾವಿರ ರೂ. ನೀಡುತ್ತಿದ್ದುದನ್ನು 50 ಸಾವಿರಕ್ಕೆ ಮನವಿ ಮೇರೆಗೆ ಏರಿಸಲು, ಇದಕ್ಕೆ ಶೂನ್ಯ ಬಡ್ಡಿಯಲ್ಲಿ ಸಾಲ ಕೊಡಲು ಸಿದ್ಧರಾಮಯ್ಯ ಒಪ್ಪಿದ್ದರು. ಒಟ್ಟಾರೆ ಪಡೆಯುವ ಸಾಲವನ್ನು ಮಹಿಳೆಯರು ಸದ್ಬಳಕೆ ಮಾಡಿಕೊಂಡು ಬ್ಯಾಂಕು ಗೌರವ ಉಳಿಸುವ ನಿಟ್ಟಿನಲ್ಲಿ ಮರುಪಾವತಿಗೆ ಅಷ್ಟೇ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಸಾಲ ನಮ್ಮ ಬ್ಯಾಂಕಿನಲ್ಲಿ ತೆಗೆದುಕೊಂಡು ಉಳಿತಾಯವನ್ನು ವಾಣಿಜ್ಯ ಬ್ಯಾಂಕುಗಳಲ್ಲಿ ಇಡುತ್ತಿದ್ದಾರೆ. ಸಾಲ ನಮ್ಮಲ್ಲಿ ಉಳಿತಾಯ ಬೇರೆ ಬ್ಯಾಂಕಿನಲ್ಲಿ ದಯವಿಟ್ಟು ಬೇರೆಬೇರೆ ಬ್ಯಾಂಕುಗಳಲ್ಲಿ ಉಳಿತಾಯ ಮಾಡಿರುವ ಹಣವನ್ನು ಡಿಸಿಸಿ ಬ್ಯಾಂಕಿನಲ್ಲಿ ಇಡಬೇಕು. ಹೀಗೆ ಮಾಡಿದರೆ ಎಷ್ಟು ಸಾಲ ಬೇಕು ಅಷ್ಟು ಕೊಡುವುದಾಗಿ ಹೇಳಿದರು. ಸಾಲ ಪ್ರಾಮಾಣಿಕವಾಗಿ ಕಟ್ಟುತ್ತಾ ಬಂದಿದ್ದೀರಿ. ನಾವು ಸಾಲ ಕಟ್ಟಿ ಎಂದು ಹೇಳುವುದಿಲ್ಲ. ಮಹಿಳೆಯರಿಂದ ಬ್ಯಾಂಕು ಉಳಿದಿದೆ. ಕಳಕಳಿಯಿಂದ ಕೆಲಸ ಮಾಡುತ್ತಿದ್ದೇವೆ. ಅದೇ ರೀತಿ ವ್ಯವಹಾರವಾದರೂ ಡಿಸಿಸಿ ಬ್ಯಾಂಕಿನಲ್ಲಿ ಮಾಡುವಂತೆ ಮನವಿ ಮಾಡಿದರು.
ಮಣಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಹಾಗು ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕರಾದ ಎಂ.ವೆಂಕಟರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕೋಚಿಮಲ್ ನಿರ್ದೇಶಕ ಎನ್.ಹನುಮೇಶ್, ಮಾಜಿ ನಿರ್ದೇಶಕ ದ್ವಾರಸಂದ್ರ ಮುನಿವೆಂಕಟಪ್ಪ ಜಿಪಂ ಸದಸ್ಯ ಗೋವಿಂದಸ್ವಾಮಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ವೆಂಕಟರೆಡ್ಡಿ, ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್‌ರೆಡ್ಡಿ, ಕೆ.ಕೆ.ಮಂಜುನಾಥ್, ಕೆ.ವಿ.ವೆಂಕಟರೆಡ್ಡಿ, ಕೋಡಿಪಲ್ಲಿ ಸುಬ್ಟಾರೆಡ್ಡಿ, ಕೊಂಡಸಂದ್ರ ಶಿವಾರೆಡ್ಡಿ, ಕೊಂಡಾಮರಿ ಅಪ್ಪಿರೆಡ್ಡಿ, ಆಲವಾಟ ಮಂಜುನಾಥರೆಡ್ಡಿ, ದ್ವಾರಸಂದ್ರ ನಾರಾಯಣಸ್ವಾಮಿ, ರೋಣೂರು ಚಂದ್ರು, ತೂಪಲ್ಲಿ ಕೃಷ್ಣಾರೆಡ್ಡಿ, ಜೆ.ವಿ.ಕಾಲೋನಿ ವೆಂಕಟೇಶ್, ಶಿವಾರೆಡ್ಡಿ ಇತರರು ಹಾಜರಿದ್ದರು.