ದೇವದುರ್ಗ: ತಾಲೂಕು ವ್ಯಾಪ್ತಿಯಲ್ಲಿ 193 ಶಿಥಿಲಗೊಂಡ ಶಾಲಾ ಕೊಠಡಿಗಳಿವೆ. ಜಾಲಹಳ್ಳಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಕೊರತೆ ಇದ್ದು, ನೂರು ವರ್ಷ ಪೂರೈಸಿದ ಶಾಲೆ ಇದಾಗಿದ್ದು, ಬಹುತೇಕ ಕೋಣೆಗಳು ಶಿಥಿಲಗೊಂಡಿವೆ.
ಶಿಕ್ಷಕರು ಬಯಲಲ್ಲೇ ಬೋಧಿಸಬೇಕಿದೆ. ಶಾಲೆಯ ಮೇಲ್ಛಾವಣಿ ಉದುರಿ ಬೀಳುತ್ತಿದ್ದು, ಬಳಕೆಗೆ ಯೋಗ್ಯವಿಲ್ಲದ ಹಿನ್ನೆಲೆಯಲ್ಲಿ ಬೀಗ ಜಡಿಯಲಾಗಿದೆ. ಸರಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ಬಯಲಲ್ಲೇ ಪಾಠ ಹೇಳಬೇಕಿದೆ.
ತಾಲೂಕು ವ್ಯಾಪ್ತಿಯಲ್ಲಿ 25 ಕ್ಲಸ್ಟರ್‌ಗಳು ಇದ್ದು, ಒಂದೊಂದು ಕ್ಲಸ್ಟರ್‌ನಲ್ಲಿ ಒಂದೊಂದೇ ಸಮಸ್ಯೆ ಇದೆ. ಕೊಪ್ಪರ ಕ್ಲಸ್ಟರ್ ವ್ಯಾಪ್ತಿಯ ಯಮನಾಳ ಸರಕಾರಿ ಶಾಲೆಯಲ್ಲಿ ಒಂದೇ ಕೋಣೆ ಇದ್ದು, 1ರಿಂದ 5 ತರಗತಿಗಳನ್ನು ನಡೆಸಲಾಗುತ್ತಿದೆ. ಕಮದಾಳ ಶಾಲೆಯಲ್ಲೂ ಇದೇ ಪರಿಸ್ಥಿತಿ ಇದ್ದು, ಮಕ್ಕಳನ್ನು ಕುರಿಗಳಂತೆ ಕೂಡಿ ಹಾಕಿ ಪಾಠ ಹೇಳಲಾಗುತ್ತಿದೆ.
ಕೆ.ಇರಬಗೇರಾ ಕ್ಲಸ್ಟರ್ ವ್ಯಾಪ್ತಿ ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಕುಡಿವ ನೀರು, ಶೌಚಾಲಯ ಸೇರಿದಂತೆ ಸಮಸ್ಯೆ ಶಿಕ್ಷಕರನ್ನು ಕಾಡಲಾರಂಭಿಸಿದೆ. ಕ್ವಾರರೇದೊಡ್ಡಿ, ತುಗ್ಲರೇದೊಡ್ಡಿ, ಎಚ್. ಎನ್.ತಾಂಡಾ, ಮಜ್ಜಿಗೇರದೊಡ್ಡಿ ಸೇರಿ ಇತರೆ ಶಾಲೆಯಲ್ಲಿ ಒಬ್ಬರೇ ಶಿಕ್ಷಕರಿದ್ದು, ಐದು ತರಗತಿಗಳ ಮಕ್ಕಳಿಗೆ ಪಾಠ ಹೇಳಲಾಗುತ್ತಿದೆ.
ಕೊತ್ತಿಗುಡ್ಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರ್‍ನಾಲ್ಕು ಕೊಠಡಿಗಳಿದ್ದು, ಛತ್ತು ಉದರಿ ಕಬ್ಬಿಣದ ರಾಡುಗಳು ಕಾಣುತ್ತಿವೆ. ಒಂದು ಕೋಣೆಗೆ ಬೀಗ ಜಡಿಯಲಾಗಿದೆ. ನೀರಿನ ಅಭಾವ ಹಿನ್ನೆಲೆ ಶೌಚಾಲಯ ಪಾಳು ಕೊಂಪೆಯಾಗಿದೆ.
ತಾಲೂಕಿನಲ್ಲಿ 317 ಪ್ರಾಥಮಿಕ ಹಾಗೂ 33 ಪ್ರೌಢಶಾಲೆ ಸೇರಿ ಒಟ್ಟು 350 ಶಾಲೆಗಳಿವೆ. 591 ಶಾಲೆ ಕೊಠಡಿಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕಿದ್ದು, 193 ಶಾಲೆಗಳು ಸಂಪೂರ್ಣ ನೆಲಸಮಗೊಳಿಸಿ ಮರು ನಿರ್ಮಿಸಬೇಕಿದೆ. 62 ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಬೇಕಿದೆ. ಒಟ್ಟು 810 ಶೌಚಾಲಯಗಳ ಕೊರತೆ ಇದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಕಟ್ಟಡಗಳ ದುರಸ್ತಿ ಮರು ನಿರ್ಮಾಣ, ಕುಡಿವ ನೀರು, ಶೌಚಾಲಯ ಸಮಸ್ಯೆ ಕುರಿತು ಪಟ್ಟಿ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಮೇಲಧಿಕಾರಿಗಳಿಗೆ ನೀಡಲಾಗಿದೆ.
–ಆರ್.ಇಂದಿರಾ, ಕ್ಷೇತ್ರ ಶಿಕ್ಷಣಾಧಿಕಾರಿ
–ನಾಗರಾಜ ತೇಲ್ಕರ್