Advertisement

ಉದ್ಯೋಗ ಖಾತರಿಗೆ 1,800 ಕೋಟಿ ರೂ.

11:08 PM Feb 17, 2023 | Team Udayavani |

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತರಿ ನೀಡುತ್ತಿರುವ “ನರೇಗಾ’ ಯೋಜನೆಯ ಮೂಲಕ 2023- 24ನೇ ಸಾಲಿನಲ್ಲಿ 1,800 ಕೋಟಿ ರೂ. ವೆಚ್ಚದಲ್ಲಿ 88 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಲು ಸರಕಾರ ನಿರ್ಧರಿಸಿದೆ.

Advertisement

ಇದಕ್ಕಾಗಿ ಪ್ರತೀ ಗ್ರಾ.ಪಂ.ಗೆ ಪ್ರಸಕ್ತ ಸಾಲಿನಲ್ಲಿ 22ರಿಂದ 60 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಿದ್ದು, ಒಂದು ಬಾರಿಯ ವಿಶೇಷ ಅನುದಾನವಾಗಿ 780 ಕೋಟಿ ರೂ. ನೀಡಲಿದೆ. ನರೇಗಾ ಜತೆ ಸಂಯೋಜಿಸಿ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ 25 ಕಿ.ಮೀ.ನಂತೆ 5,000 ಕಿಮೀ ರಸ್ತೆ ಅಭಿವೃದ್ಧಿಪಡಿಸುವುದಕ್ಕೆ 300 ಕೋಟಿ ರೂ. ಹಾಗೂ ನರೇಗಾ ಹಾಗೂ ಸ್ವತ್ಛ ಭಾರತ ಯೋಜನೆ ಮೂಲಕ ಗ್ರಾಮೀಣ ಭಾಗದಲ್ಲಿ ಚರಂಡಿ ವ್ಯವಸ್ಥೆ ಉತ್ತಮಪಡಿಸಲು 4,190 ಕೋಟಿ ರೂ. ನೀಡಿದೆ. ಇದರೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ, ಗ್ರಾಮ ನೈರ್ಮಲ್ಯ ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ.

ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ, 330 ಗ್ರಾ.ಪಂ.ಗಳಲ್ಲಿ ಹೊಸ ಗ್ರಂಥಾಲಯ, ವಿಶೇಷ ಚೇತನ ಮಕ್ಕಳಿಗಾಗಿ ರಾಜ್ಯದ 1,000 ಗ್ರಾಮೀಣ ಗ್ರಂಥಾಲಯಗಳ ಉನ್ನತಿಗೆ ಮುಂದಾಗಿದೆ. 2,000 ಪಂಚಾಯತ್‌ ಕೆರೆ ಪುನರುಜ್ಜೀವನಕ್ಕೆ 200 ಕೋಟಿ ರೂ. ನೀಡಿರುವ ಸರಕಾರ ಪ್ರತೀ ಜಿಲ್ಲೆಯಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಆಹಾರ ಮಂದಿರ ಸ್ಥಾಪನೆ ಮಾಡಲಿದೆ.

ವಿದ್ಯುತ್‌ ಪ್ರಸರಣ ನಿಗಮಕ್ಕೆ
3 ಸಾವಿರ ಕೋಟಿ
ರಾಜ್ಯದಲ್ಲಿ 50 ಹೊಸ ಉಪಕೇಂದ್ರಗಳು, 1060 ಸರ್ಕ್ನೂಟ್‌ ಕಿ.ಮೀ. ಪ್ರಸರಣ ಮಾರ್ಗ, 100 ಉಪಕೇಂದ್ರಗಳ ಸಾಮರ್ಥ್ಯ ಉನ್ನತೀಕರಣ ಸೇರಿದಂತೆ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮಕ್ಕೆ 3,000 ಕೋಟಿ ರೂ. ನೀಡಲಾಗಿದೆ. ಶರಾವತಿ ಪಂಪ್‌ ಸ್ಟೋರೇಜ್‌ ಪವರ್‌ ಪ್ಲಾಂಟ್‌ ಯೋಜನೆ ಯನ್ನು ಕೇಂದ್ರ ಸರಕಾರದ ಸಹಯೋಗ ದೊಂದಿಗೆ 7,394 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕರ್ನಾಟಕ ವಿದ್ಯುತ್‌ ನಿಗಮದ ಮೂಲಕ ಅನುಷ್ಠಾನ ಮಾಡಲಿದೆ. ಇದರ ಜತೆಗೆ 1,000 ಮೆಗಾ ವ್ಯಾಟ್‌ ಹೊಸ ಪಂಪ್ಡ್ ಸ್ಟೋರೇಜ್‌ ಪಿಪಿಪಿ ಮಾದರಿಯಲ್ಲಿ ಸ್ಥಾಪಿಸ ಲಿದೆ. ರಾಜ್ಯದ ಎಸ್ಕಾಂಗಳಿಗೆ 13,743 ಕೋಟಿ ರೂ. ಅನುದಾನ ಬಿಡುಗಡೆಗೆ ನಿರ್ಧರಿಸಿದೆ.

1 ಟ್ರಿಲಿಯನ್‌ ಡಾಲರ್‌
ಕರ್ನಾಟಕದ ಜಿಡಿಪಿಯನ್ನು ಒಂದು ಟ್ರಿಲಿಯನ್‌ ಡಾಲರ್‌ ಹಣಕಾಸು ವ್ಯವಸ್ಥೆಯನ್ನಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯನ್ನು ಸಿಎಂ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾದ ಯೋಜನೆ ರೂಪಿಸಲು ಉನ್ನತಮಟ್ಟದ ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿ ಸುಧಾರಣ ಕ್ರಮ ಕೈಗೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಕರ್ನಾಟಕ ರಾಜ್ಯ ಪರಿವರ್ತನ ಸಂಸ್ಥೆಯ ಮೂಲಕ ಬಿಗ್‌ ಡೇಟಾ ಲೇಕ್‌ ಯೋಜನೆಯನ್ನು ಪ್ರಾರಂಭಿಸಲಿದೆ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ಪ್ರಸಕ್ತ ಸಾಲಿನಲ್ಲಿ 185 ನಗರ ಮತ್ತು ಪಟ್ಟಣಗಳಲ್ಲಿ 7.21 ಲಕ್ಷ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಿದೆ. ಪೌರ ಆಸರೆ ಯೋಜನೆ ಯಡಿ 5,000 ವಸತಿರಹಿತ ಪೌರ ನೌಕರರಿಗೆ ಮನೆ ನಿರ್ಮಾಣ, ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ 3,395 ಕೋಟಿ ರೂ.ವೆಚ್ಚದಲ್ಲಿ 143 ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next