Advertisement

17 ವರ್ಷಗಳ ನಂತರ ಜಾತ್ರೆ

12:26 PM Mar 19, 2017 | Team Udayavani |

ಹುಣಸೂರು: ತಾಲೂಕಿನ ಬನ್ನಿಕುಪ್ಪೆಯಲ್ಲಿ 17 ವರ್ಷಗಳ ನಂತರ ನಡೆದ 8 ಗ್ರಾಮಗಳ ಗ್ರಾಮದೇವತೆ ಬನ್ನಮ್ಮತಾಯಿಯ ಚಿಕ್ಕ ಹಾಗೂ ದೊಡ್ಡ ರಥೋತ್ಸವವು ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಿತು. ಕಳೆದ ನಾಲ್ಕು ದಿನಗಳಿಂದ ಗ್ರಾಮದಲ್ಲಿ ಬನ್ನಮ್ಮತಾಯಿ ಹಾಗೂ ವೀರಭದ್ರೇಶ್ವರಸ್ವಾಮಿ ಜಾತ್ರಾ ಮಹೋತ್ಸವನ್ನು ಏಳು ಗ್ರಾಮಗಳ ಸಹಯೋಗದೊಡನೆ ಆಚರಿಸಿದರು.

Advertisement

ಶನಿವಾರ ಗ್ರಾಮದಲ್ಲಿ ಅಲಂಕೃತ ಚಿಕ್ಕ ರಥದಲ್ಲಿ ಬನ್ನಮ್ಮತಾಯಿಯ ಉತ್ಸವ ಬೆಳಗ್ಗೆ ನೆರವೇರಿಸಲಾಯಿತು. ನಂತರ ವಿವಿಧ ಪೂಜಾ ಕೈಂಕರ್ಯಗಳು, ಮಧ್ಯಾಹ್ನ 3.30ಕ್ಕೆ ಬನ್ನಮ್ಮ ದೇವಸ್ಥಾನದಿಂದ ಉತ್ಸವಮೂರ್ತಿ ಮೆರವಣಿಗೆ ಮೂಲಕ ತಂದು ವಿವಿಧ ಬಣ್ಣಬಣ್ಣದ ಬಟ್ಟೆ-ಬಾವುಟ-ಹೂವಿನಿಂದ ಅಲಂಕರಿಸಿದ್ದ ದೊಡ್ಡ ರಥದಸುತ್ತ ಪ್ರದಕ್ಷಿಣೆ ಹಾಕಿದ ನಂತರ ರಥದಲ್ಲಿ ಕೂರಿಸುತ್ತಿದ್ದಂತೆ ನೆರೆದಿದ್ದ ಭಕ್ತ ಸಮೂಹ ದೇವರಿಗೆ ಜೈಕಾರ ಹಾಕುತ್ತಾ, ರಥಕ್ಕೆ ಹಣ್ಣು ಜವನ ಎಸೆದು ಪುನಿತರಾದರು.

ಮಾದಳ್ಳಿ ಉಕ್ಕಿನ ಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ, ಶಾಸಕ ಮಂಜುನಾಥ್‌, ಜಿಪಂ ಸದಸ್ಯೆ ಡಾ. ಪುಷ್ಪ$ಅಮರ್‌ನಾಥ್‌, ಏಳು ಗ್ರಾಮದ ಯಜ ಮಾನರಾದ ಸಿದ್ದಲಿಂಗಪ್ಪ, ತಾಪಂ ಅಧ್ಯಕ್ಷೆ ಪದ್ಮಮ್ಮ ರಥಕ್ಕೆ  ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥವನ್ನು ಸಂಚರಿಸಿ ನಂತರ ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು.
ರಥೋತ್ಸವವನ್ನು ಕಣ್ಮುಂಬಿಕೊಳ್ಳಲು ಮನೆ ಮೇಲೆ, ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ನೆರೆದಿದ್ದರು.

ಮಾಂಸ ಆಹಾರವಿಲ್ಲ: ಜಾತ್ರಾ ಸಂಬಂಧ ತೇರು ಮುಹೂರ್ತ ನಡೆದ ಮಾ.3ರಿಂದಲೂ ಈ ಎಂಟು ಗ್ರಾಮಗಳಲ್ಲೂ ಮಾಂಸದ ಅಡುಗೆ ಮಾಡುತ್ತಿಲ್ಲ, ಘಾಟಿಗೆ ಸಂಬಂಧಪಟ್ಟ ಒಗ್ಗರಣೆಯೂ ಹಾಕುವಂತಿಲ್ಲ, ಜಾತ್ರೆಗಾಗಿ ಇಡೀ ಗ್ರಾಮವನ್ನೇ ಶೃಂಗರಿಸಿದ್ದರು.

ಜಾತ್ರಾ ಮಹೋತ್ಸವವನ್ನು ಬನ್ನಿಕುಪ್ಪೆ, ತೆಂಕಲಕೊಪ್ಪಲು, ಮರಳಯ್ಯನ ಕೊಪ್ಪಲು, ದೊಡ್ಡೇಗೌಡನ ಕೊಪ್ಪಲು, ಮೂಡಲ ಕೊಪ್ಪಲು, ಕಕಾಡನ ಕೊಪ್ಪಲು, ಮಧುಗಿರಿ ಕೊಪ್ಪಲು ಹಾಗೂ ಜಡಗನಕೊಪ್ಪಲಿನ ಗ್ರಾಮಸ್ಥರು ಸೇರಿ ಜಾತ್ರೆಯನ್ನು ಈ ಬಾರಿಯೂ ಒಂದೊಂದು ಜವಾಬ್ದಾರಿ ಹೊತ್ತು ಎಲ್ಲರೂ ಒಟ್ಟಾಗಿ  17 ವರ್ಷಗಳ ನಂತರ ಆಚರಿಸಿರುವುದೇ ವಿಶೇಷ.

Advertisement

ಡಿವೈಎಸ್‌.ಪಿ.ವಿಕ್ರಂಅಮ್ಟೆ, ವೃತ್ತನಿರೀಕ್ಷಕ ಧರ್ಮೇಂದ್ರ, ಎಸ್‌.ಐ.ಗಳಾದ ನವೀನ್‌ಗೌಡ, ಷಣ್ಮುಗಂ, ಪುಟ್ಟಸ್ವಾಮಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಗ್ರಾಪಂ ಅಧ್ಯಕ್ಷೆ ಚಿಕ್ಕಸುಜಾತ, ತಾಪಂ ಸದಸ್ಯ ಕೆಂಗಯ್ಯ, ಇ.ಒ ಕೃಷ್ಣಕುಮಾರ್‌, ಪಿ.ಡಿ.ಒ. ಸೋಮಯ್ಯ, ತಾಲೂಕು ವೀರಶೈವ ಜನಾಂಗದ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್‌ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಜಾತ್ರೆಯಲ್ಲಿ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ವತಿಯಿಂದ ಶೌಚಾಲಯ ಅರಿವು ಗಮನ ಸೆಳೆದರೆ, ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಹಾಗೂ ಕೃಷಿ ಇಲಾಖೆಯು ಯೋಜನೆಗಳ ಬಗ್ಗೆ ಮಾಹಿತಿ ಪ್ರದರ್ಶನ ಏರ್ಪಡಿಸಿದ್ದರು. ಜಾತ್ರೆಯ ಕೊನೆದಿನವಾದ ಭಾನುವಾರದಂದು ಪಾರುವಟೆ ಉತ್ಸವ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next