Advertisement

15ನೇ ವಿಧಾನಸಭೆ : ಎರಡು ಸರಕಾರ; ಮೂವರು ಮುಖ್ಯಮಂತ್ರಿಗಳು

10:38 PM Feb 24, 2023 | Team Udayavani |

ಬೆಂಗಳೂರು: ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ಹಾಗೂ ಬಿಜೆಪಿ ಸರಕಾರದ ಆಡಳಿತಕ್ಕೆ 15ನೇ ವಿಧಾನಸಭೆ ಸಾಕ್ಷಿಯಾಯಿತು.

Advertisement

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದ ಕಾರಣ ಕಾಂಗ್ರೆಸ್‌-ಜೆಡಿಎಸ್‌ ಸರಕಾರ ರಚನೆಯಾದರೂ 14 ತಿಂಗಳಿಗೇ ಆಯುಷ್ಯ ಮುಗಿದು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದು ಇಬ್ಬರು ಮುಖ್ಯಮಂತ್ರಿಗಳಾಗಿ ಒಟ್ಟು ಮೂವರು ಸಿಎಂಗಳನ್ನು ಕಂಡಂತಾಯಿತು.

ಬಿಜೆಪಿ 104, ಕಾಂಗ್ರೆಸ್‌ 78, ಜೆಡಿಎಸ್‌ 37, ಇಬ್ಬರು ಪಕ್ಷೇತರರು ಆಯ್ಕೆಯಾಗಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಸರಕಾರದ ರಚನೆಗೆ ಅವಕಾಶ ದೊರೆಯಿತು. ಸಿಎಂ ಆಗಿ ಯಡಿಯೂರಪ್ಪ ಪ್ರಮಾಣ ಸ್ವೀಕರಿಸಿದರಾದರೂ ನಾಲ್ಕೇ ದಿನಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ದೋಸ್ತಿಯಾಗಿದ್ದರಿಂದ ಯಡಿಯೂರಪ್ಪ ರಾಜೀನಾಮೆ ನೀಡಿ ನಿರ್ಗಮಿಸಬೇಕಾಯಿತು.

ಸಮ್ಮಿಶ್ರ ಸರಕಾರದಲ್ಲಿ ಎಚ್‌. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ ಅವರು ಅಧಿಕಾರ ವಹಿಸಿಕೊಂಡ ದಿನದಿಂದಲೇ ಸರಕಾರ ಬೀಳಿಸುವ ಪ್ರಯತ್ನವೂ ಪ್ರಾರಂಭಗೊಂಡಿತು.

ಮುಂಬಯಿಯಲ್ಲಿ ಹೈಡ್ರಾಮಾ
ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮತ್ತು ಓರ್ವ ಪಕ್ಷೇತರ ಸೇರಿ 17 ಶಾಸಕರನ್ನು ಬಿಜೆಪಿ ಸೆಳೆದು 15 ಮಂದಿ ಮುಂಬಯಿಗೆ ಹಾರಿದರು.

Advertisement

ಇತ್ತ ಸಮ್ಮಿಶ್ರ ಸರಕಾರದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಕೆಲವರು ವಿರುದ್ಧವಾಗಿ ಮತ ಹಾಕಿದರೆ ಮತ್ತೆ ಕೆಲವರು ಗೈರು ಹಾಜರಾದರು. ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಸಮ್ಮಿಶ್ರ ಸರಕಾರವೂ ಪತನಗೊಂಡಿತು.

ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು. ಎರಡು ವರ್ಷಗಳ ಅನಂತರ ಯಡಿಯೂರಪ್ಪ ರಾಜೀನಾಮೆ ನೀಡಿ ಬೊಮ್ಮಾಯಿ ಮುಖ್ಯಮಂತ್ರಿಯಾದರು.
ಸಮ್ಮಿಶ್ರ ಸರಕಾರ ಪತನಕ್ಕೆ ಕಾರಣವಾಗಿದ್ದ 17 ಶಾಸಕರನ್ನು ಸ್ಪೀಕರ್‌ ಅನರ್ಹಗೊಳಿಸಿದರು. ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು. ಅಂತಿಮವಾಗಿ ಇವರ ಅನರ್ಹತೆ ತೆರವಾಗಿ ಮತ್ತೆ ಆಯ್ಕೆ ಬರಲು ಅವಕಾಶ ದೊರೆಯಿತು. ಈ ಅವಧಿಯಲ್ಲಿ ಆಪರೇಷನ್‌ ಕಮಲ ಕಾರ್ಯಾಚರಣೆಗೆ ಒಳಗಾದ 17 ಶಾಸಕರಲ್ಲದೆ ಅಕಾಲಿಕ ಮರಣಕ್ಕೆ ತುತ್ತಾದ ಎಂಟು ಶಾಸಕರ ಕ್ಷೇತ್ರ ಸೇರಿ 23 ಉಪ ಚುನಾವಣೆ ನಡೆದವು.

ಮಸೂದೆ ಅನುಮೋದನೆ
15ನೇ ವಿಧಾನಸಭೆ ಅವಧಿಯಲ್ಲಿ 200ಕ್ಕೂ ಹೆಚ್ಚು ಮಸೂದೆಗಳು ಮಂಡನೆಯಾಗಿದ್ದು, ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ, 79 ಎ, ಬಿ ರದ್ದುಗೊಳಿಸುವ ಭೂ ಕಂದಾಯ ತಿದ್ದುಪಡಿ ಕಾಯ್ದೆ, ಎಸ್‌ಸಿ-ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ಮಸೂದೆ, ಬಿಬಿಎಂಪಿ ತಿದ್ದುಪಡಿ ಮಸೂದೆ ಸೇರಿ ಹಲವು ಮಹತ್ವದ ಮಸೂದೆಗಳು ಮಂಡನೆಯಾಗಿ ಅನುಮೋದನೆಗೊಂಡವು.

ಇಬ್ಬರು ಸ್ಪೀಕರ್‌
ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕಾಂಗ್ರೆಸ್‌ನ ರಮೇಶ್‌ ಕುಮಾರ್‌ ಸ್ಪೀಕರ್‌ ಆಗಿದ್ದರು. ಜೆಡಿಎಸ್‌ನ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಅನಂತರ ಬಿಜೆಪಿಯ ವಿಶ್ವೇಶ್ವರ ಹೆಗಡೆ ಸ್ಪೀಕರ್‌ ಆದರು. ಬಿಜೆಪಿಯ ಚಂದ್ರಶೇಖರ ಮಾಮನಿ ಉಪಸಭಾಧ್ಯಕ್ಷರಾದರು.

8 ಮಂದಿ ನಿಧನ
15ನೇ ವಿಧಾನಸಭೆ ಅವಧಿಯಲ್ಲಿ ಶಿರಾದ ಸತ್ಯನಾರಾಯಣ, ಬಸವಕಲ್ಯಾಣದ ನಾರಾಯಣ ರಾವ್‌, ಜಮಖಂಡಿಯ ಸಿದ್ದು ನ್ಯಾಮಗೌಡ, ಸಿಂದಗಿಯ ಎಂ.ಸಿ. ಮನಗೊಳಿ, ಹುಕ್ಕೇರಿಯ ಉಮೇಶ್‌ ಕತ್ತಿ, ಸವದತ್ತಿಯ ಚಂದ್ರಶೇಖರ ಮಾಮನಿ, ಹಾನಗಲ್‌ನ ಸಿ.ಎಂ. ಉದಾಸಿ, ಕುಂದಗೋಳದ ಎಸ್‌.ಸಿ. ಶಿವಳ್ಳಿ ಸೇರಿ ಎಂಟು ಮಂದಿ ನಿಧನರಾದರು. ಹುಕ್ಕೇರಿ ಹಾಗೂ ಸವದತ್ತಿ ಕ್ಷೇತ್ರಗಳಿಗೆ ಕಡಿಮೆ ಅವಧಿ ಕಾರಣ ಚುನಾವಣೆ ನಡೆಯಲಿಲ್ಲ.

ಜಮಖಂಡಿಯಲ್ಲಿ ಸಿದ್ದು ನ್ಯಾಮಗೌಡರ ಪುತ್ರ ಆನಂದ್‌ ನ್ಯಾಮಗೌಡ, ಕುಂದಗೋಳದಲ್ಲಿ ಶಿವಳ್ಳಿ ಪತ್ನಿ ಕುಸುಮಾ ಶಿವಳ್ಳಿ ಆಯ್ಕೆಯಾದರೆ ಹಾನಗಲ್‌ನಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಗೆಲುವು ಸಾಧಿಸಿದರು. ಶಿರಾದಿಂದ ಬಿಜೆಪಿಯ ಡಾ| ರಾಜೇಶ್‌, ಬಸವಕಲ್ಯಾಣದಲ್ಲಿ ಬಿಜೆಪಿಯ ಶರಣು ಸಲಗಾರ, ಸಿಂಧಗಿಯಿಂದ ರಮೇಶ್‌ ಭೂಸನೂರ್‌ ಗೆಲುವು ಸಾಧಿಸಿದರು. ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆದ್ದಿದ್ದ ಎಚ್‌.ಡಿ. ಕುಮಾರಸ್ವಾಮಿ ರಾಮನಗರ ಕ್ಷೇತ್ರ ತೆರವು ಮಾಡಿದ್ದರಿಂದ ಉಪ ಚುನಾವಣೆ ನಡೆದು ಅನಿತಾ ಕುಮಾರಸ್ವಾಮಿ ಆಯ್ಕೆಯಾಗಿದ್ದರು.

ಸಚಿವರಾದದ್ದು 10 ಮಂದಿ
ಸಮ್ಮಿಶ್ರ ಸರಕಾರ ಪತನಕ್ಕೆ ಕಾರಣರಾದ 17 ಶಾಸಕರ ಪೈಕಿ ಚುನಾವಣೆಗೆ ಸ್ಪರ್ಧಿಸಿ ಗೆದ್ದ 10 ಮಂದಿ ಸಚಿವರಾದರು. ಮಹೇಶ್‌ ಕುಮಟಳ್ಳಿ ಗೆದ್ದರೂ ಸಚಿವರಾಗಲಿಲ್ಲ. ಎಚ್‌. ವಿಶ್ವನಾಥ್‌, ಆರ್‌. ಶಂಕರ್‌ ಪರಿಷತ್‌ ಸದಸ್ಯ ರಾದರೂ ಸಚಿವ ಸ್ಥಾನ ಸಿಗಲಿಲ್ಲ. ರಮೇಶ್‌ ಜಾರಕಿ ಹೊಳಿ ಸಿ.ಡಿ. ಪ್ರಕರಣ ದಲ್ಲಿ ರಾಜೀನಾಮೆ ನೀಡ ಬೇಕಾಯಿತು. ಶ್ರೀಮಂತ ಪಾಟೀಲ್‌ ಅವರಿಗೆ ಕೆಲವು ತಿಂಗಳ ವರೆಗೆ ಮಂತ್ರಿ ಆಗುವ ಭಾಗ್ಯ ದೊರಕಿತ್ತು. ಬಿಎಸ್‌ಪಿಯಿಂದ ಗೆದ್ದು ಬೆಂಬಲ ನೀಡಿದ್ದಕ್ಕೆ ಎನ್‌. ಮಹೇಶ್‌ ಸಚಿವರಾಗಿದ್ದರು. ಕೆ.ಎಸ್‌. ಈಶ್ವರಪ್ಪ ಅವರು ಗುತ್ತಿಗೆ ದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ರಾಜೀನಾಮೆ ಕೊಡಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next