ವಾಷಿಂಗ್ಟನ್: ಕೋವಿಡ್ ಸೋಂಕು ಪ್ರಕರಣಗಳು ಏರುತ್ತಿರುವಂತೆಯೇ, ಅಮೆರಿಕದಲ್ಲಿ ಉದ್ಯೋಗ ನಷ್ಟ ಪ್ರಮಾಣ ಏರಿಕೆಯಾಗುತ್ತಿದ್ದು, ಅಲ್ಲಿನ ಸರಕಾರದ ಚಿಂತೆಗೆ ಕಾರಣವಾಗಿದೆ. ಕಳೆದ ವಾರದವರೆಗೆ 14 ಲಕ್ಷದಷ್ಟು ಉದ್ಯೋಗ ನಷ್ಟವಾಗಿದ್ದು ಈ ವಾರ ಇದರ ಪ್ರಮಾಣ 15 ಲಕ್ಷಕ್ಕೇರಿದೆ.
ಲಾಕ್‌ಡೌನ್ ಸಡಿಲಿಕೆಯಾಗಿ ಆರ್ಥಿಕತೆ ಚೇತರಿಕೆಗೆ ಸರಕಾರ ಯತ್ನಿಸುತ್ತಿದ್ದರೂ ಉದ್ಯೋಗ ನಷ್ಟ ಮುಂದುವರಿದಿದೆ.
ಜೂ.20ರ ವೇಳೆಗೆ ನಿರುದ್ಯೋಗ ಭತ್ತೆಗೆ ಅರ್ಜಿ ಹಾಕಿದವರ ಪ್ರಮಾಣ 60 ಸಾವಿರದಷ್ಟು ಕಡಿಮೆಯಾಗಿದ್ದು ಒಟ್ಟು 14 ಲಕ್ಷದಷ್ಟು ಮಂದಿ ಹೊಸದಾಗಿ ಭತ್ತೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು.
ಮೂಲಗಳ ಪ್ರಕಾರ ಮುಂದಿನ ದಿನಗಳಲ್ಲಿ ಸುಮಾರು 47 ಲಕ್ಷ ಉದ್ಯೋಗ ನಷ್ಟವಾಗಬಹುದು ಎಂದು ಹೇಳಲಾಗಿದೆ. ಅಲ್ಲದೇ ಇದು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.
ಓಕ್ಲಹಾಮಾ, ಟೆಕ್ಸಾಸ್, ನ್ಯೂಯಾರ್ಕ್ì, ಲೂಸಿಯಾನಾಗಳಲ್ಲಿ ನಿರುದ್ಯೋಗ ಭತ್ತೆಗೆ ಅತಿ ಹೆಚ್ಚು ಮಂದಿ ಅರ್ಜಿ ಹಾಕಿದ್ದಾಗಿ ಹೇಳಲಾಗಿದೆ. ಕೋವಿಡ್ ಸೋಂಕು ಪ್ರಮಾಣ ಹೆಚ್ಚುತ್ತಿರುವುದರಿಂದ ಲಾಕ್‌ಡೌನ್ ಸಡಿಲಗೊಂಡಿದ್ದರೂ ಅಮೆರಿಕಾದ್ಯಂತ ಆರ್ಥಿಕ ಚಟುವಟಿಕೆಗಳು ನಿಧಾನವಾಗಿವೆ.
ಇದೇ ವೇಳೆ ಅಮೆರಿಕದ ಹಿಂಜರಿತದಿಂಧಾಗಿ ಇಡೀ ವಿಶ್ವದ ಜಿಡಿಪಿ ಶೇ.4.9ರಷ್ಟಕ್ಕೆ ಕುಸಿಯಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಭಿಪ್ರಾಯಪಟ್ಟಿದೆ.