Advertisement

12 ವರ್ಷಗಳ ಬಳಿಕ 45 ಡಿಗ್ರಿ ಸೆ. ಸಂಭವ

12:24 PM Apr 16, 2017 | Team Udayavani |

ರಾಯಚೂರು: ಹನ್ನೆರಡು ವರ್ಷಗಳ ಬಳಿಕ ಮತ್ತೆ 45 ಡಿಗ್ರಿ ಸೆಲ್ಸಿಯಸ್‌ ಬಿಸಿಲಿನತ್ತ ದಾಪುಗಾಲು ಹಾಕಿರುವ ಹೈದರಾಬಾದ್‌ ಕರ್ನಾಟಕ ಭಾಗದ ಜಿಲ್ಲೆಗಳಲ್ಲೀಗ 43 ಡಿಗ್ರಿ ಬಿಸಿಲು.ಸೂರ್ಯನ ಉಷ್ಣಾಂಶದ ಜತೆಗೆ ಬಿಸಿಗಾಳಿ ಹೆಚ್ಚುತ್ತಿದ್ದು, ಎರಡು ತಿಂಗಳು ಕಳೆಯುವುದು ಈ ಭಾಗದ ಜನರಿಗೆ ಅಕ್ಷರಶಃ ಅಗ್ನಿಪರೀಕ್ಷೆಯಾಗಿದೆ.

Advertisement

ಬೆಳಗ್ಗೆ 10 ಗಂಟೆಗೆಲ್ಲ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ಸಂಜೆ ಆರು ಗಂಟೆಯಾದರೂ ಕಡಿಮೆಯಾಗುತ್ತಿಲ್ಲ. ಏಪ್ರಿಲ್‌ನಲ್ಲೇ ಈ ಪ್ರಮಾಣದಲ್ಲಿರುವ ಬಿಸಿಲು ಮೇ ವೇಳೆಗೆ ಮತ್ತಷ್ಟು ಭಯಂಕರವಾಗುವ ಸಾಧ್ಯತೆಯಿದೆ. ಹವಾಮಾನ ಕೇಂದ್ರದ ಸೂಚನೆಯಂತೆ ಕಳೆದ ಬಾರಿಗಿಂತ ಒಂದು ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಹೆಚ್ಚಲಿದೆ. ಕಳೆದ ವರ್ಷ ಮೇ ತಿಂಗಳಲ್ಲಿ 44 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಈ ಬಾರಿ 45 ಡಿಗ್ರಿ ತಲುಪುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. 

ಹಿಂದೆಯೂ ದಾಖಲಾಗಿತ್ತು: 2000 ಹಾಗೂ 2003ರ ಮೇ ತಿಂಗಳಲ್ಲಿ 45 ಡಿಗ್ರಿ ಸೆಲ್ಸಿಯಸ್‌ ಬಿಸಿಲು ದಾಖಲಾಗಿತ್ತು. ಉಳಿದ ವರ್ಷಗಳಲ್ಲಿ 42ರ ಗಡಿ ಮೀರಿದ ಬಿಸಿಲು ದಾಖಲಾಗಿದ್ದರೂ 45 ಡಿಗ್ರಿ ತಲುಪಿರಲಿಲ್ಲ. ಆದರೆ, ಉತ್ತರ ಭಾರತದಿಂದ ಬರುತ್ತಿರುವ ಉಷ್ಣ ಗಾಳಿ ಪ್ರಮಾಣ ಹೆಚ್ಚಾಗಿದ್ದರಿಂದ
ವಾತಾವರಣ ಕಾವೇರುತ್ತಿದೆ. ಈಗಾಗಲೇ ತೆಲಂಗಾಣ, ಆಂಧ್ರದ ವಿವಿಧೆಡೆ 43ರ ಗಡಿ ದಾಟಿದೆ. ಇನ್ನು ಕರ್ನಾಟಕದ ಸರದಿ ಎನ್ನುತ್ತಾರೆ ಹವಾಮಾನ ತಜ್ಞರು. ಕೊಪ್ಪಳ, ಗದಗ ಜಿಲ್ಲೆಯಲ್ಲಿ ಶನಿವಾರ ಉಷ್ಣಾಂಶದಿಂದ ಬಾಲಕ ಮತ್ತು ರೈತ ಮೃತಪಟ್ಟಿದ್ದಾರೆ. ದೇಹದಲ್ಲಿ ನಿರ್ಜಲೀಕರಣದಿಂದ ತಲೆ ಸುತ್ತು
ಬರುವುದು, ವಾಂತಿ, ಭೇದಿಯಂಥ ಸಮಸ್ಯೆಗಳು ಕಾಡುತ್ತಿವೆ. ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಹೆಚ್ಚು ಮಂದಿ ಇದೇ ಸಮಸ್ಯೆಗೆ ತುತ್ತಾದವರಿದ್ದಾರೆ. ಮಕ್ಕಳಲ್ಲಿ ಹೆಚ್ಚು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಮಧ್ಯಾಹ್ನ 12ರಿಂದ ಸಂಜೆ ನಾಲ್ಕು ಗಂಟೆವರೆಗೆ ಸೂರ್ಯನ ಅತಿ ನೇರಳೆ ಕಿರಣಗಳು
ಹೆಚ್ಚಾಗಿರುವುದರಿಂದ ಆ ಹೊತ್ತಲ್ಲಿ ಕೆಲಸ ಮಾಡುವುದು, ಓಡಾಡುವುದು ಅಪಾಯ ಕಾರಿ. ಅದು ಜೀವಕ್ಕೆ ಅಪಾಯ ತರುವ ಸಾಧ್ಯತೆ ಉಂಟು ಎನ್ನುತ್ತಾರೆ ವೈದ್ಯರು.

ಸರ್ಕಾರ ಕೂಡ ಉದ್ಯೋಗ ಖಾತ್ರಿ ಕೂಲಿ ಕೆಲಸದ ಅವಧಿಧಿಯನ್ನು ಶೇ.25ರಷ್ಟು ಕಡಿತಗೊಳಿಸಿದೆ. ಕಡಿಮೆ ಕೆಲಸ ಮಾಡಿದರೂ ಪೂರ್ತಿ ಕೂಲಿ ಹಣ ಪಾವತಿಸಲಾಗುತ್ತಿದೆ. ಇನ್ನು ಬಿಸಿಲಿಗೆ ಬಸವಳಿದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ವಿವಿಧ ಸಂಘ-ಸಂಸ್ಥೆಗಳು ಸಕ್ರಿಯವಾಗಿವೆ. ನಗರದ ಬಹುತೇಕ ಕಡೆ ಕುಡಿಯುವ ನೀರಿನ ಅರವಟ್ಟಿಗೆ ಸ್ಥಾಪಿಸಲಾಗಿದೆ. ರಾಜಸ್ತಾನಿ ಕನ್ನಡಿಗರ ಬಳಗ ನಿತ್ಯ ಮಧ್ಯಾಹ್ನ ಒಂದು ಗಂಟೆ ಕಾಲ ತಂಪು ಪಾನೀಯ ವಿತರಿಸುತ್ತಿದೆ. ಆದರೆ ನದಿ, ಹಳ್ಳ ಕೊಳ್ಳಗಳು ಬತ್ತಿ ಹೋಗಿದ್ದು, ಜಾನುವಾರುಗಳಿಗೆ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಈ ಎರಡು ತಿಂಗಳು ಕಳೆದರೆ ಸಾಕು ಎನ್ನುವಂತಾಗಿದೆ ಜನರ ಮನಸ್ಥಿತಿ.

ಕಳೆದ ವರ್ಷಕ್ಕೆ ಹೋಲಿಸಿದರೆ ಒಂದು ಡಿಗ್ರಿ ಸೆಲ್ಸಿಯಸ್‌ ಬಿಸಿಲು ಹೆಚ್ಚಾಗಿದೆ. ಭಾರತ ಹವಾಮಾನ ಕೇಂದ್ರ ಸೂಚನೆಯನ್ವಯ ಈ ಬಾರಿ ಮೇನಲ್ಲಿ 45 ಡಿಗ್ರಿ ಸೆಲ್ಸಿಯಸ್‌ ಬಿಸಿಲು ದಾಖಲಾದರೂ ಅಚ್ಚರಿಯಿಲ್ಲ. ಬಿಸಿಲಿನಿಂದಾಗುವ ಸಮಸ್ಯೆಗಳ ಬಗ್ಗೆ ಜನ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು.
– ವಿಶ್ವನಾಥ ಬಿರಾದಾರ, ಹವಾಮಾನ ತಜ್ಞ 

Advertisement

ನಿರ್ಜಲೀಕರಣದಿಂದ ರಿಮ್ಸ್‌ಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ದಿನಕ್ಕೆ 2ರಿಂದ 3 ಮಕ್ಕಳನ್ನು ದಾಖಲಿಸಲಾಗುತ್ತಿದೆ. ಅದಕ್ಕೆ ಬೇಕಾದ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಪಾಲಕರು ಮಕ್ಕಳನ್ನು ಹೆಚ್ಚು ಬಿಸಿಲಲ್ಲಿ ಬಿಡದಂತೆ ಎಚ್ಚರ ವಹಿಸಬೇಕು. ಉಳಿದಂತೆ ವಾಂತಿ,
ಭೇದಿ, ತಲೆಸುತ್ತು ಸಮಸ್ಯೆಯಿಂದ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

-ಡಾ| ಕವಿತಾ ಪಾಟೀಲ,ರಿಮ್ಸ್‌ ಪ್ರಭಾರ ನಿರ್ದೇಶಕರು

ಬಿಸಿಲಿನ ಪ್ರಮಾಣ ಹೆಚ್ಚಿರುವ ಕಾರಣ ಸರ್ಕಾರ ಉದ್ಯೋಗ ಖಾತ್ರಿ ಕೆಲಸದ ಅವಧಿಧಿಯನ್ನು ಶೇ.25ರಷ್ಟು ಕಡಿತಗೊಳಿಸಿದೆ. ಕುಡಿವ ನೀರಿನ ಸಮಸ್ಯೆ ಆಗದಂತೆ ಎಚ್ಚೆತ್ತುಕೊಂಡಿದ್ದು, ಅಗತ್ಯ ಬಿದ್ದರೆ ಟ್ಯಾಂಕರ್‌ ಮೂಲಕ ಪೂರೈಸಲಾಗುವುದು. ಬಿಸಿಲಿನಿಂದಾಗುವ ಸಮಸ್ಯೆಗಳಿಗೆ ಅಗತ್ಯ ಚಿಕಿತ್ಸೆ ನೀಡಲು ಎಲ್ಲ ಆಸ್ಪತ್ರೆಗಳಿಗೆ ತಿಳಿಸಲಾಗಿದೆ.
– ಡಾ| ಬಗಾದಿ ಗೌತಮ, ಜಿಲ್ಲಾಧಿಧಿಕಾರಿ

– ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next