ತಿರುವನಂತಪುರಂ: ಅದೃಷ್ಟ ಒಮ್ಮೊಮ್ಮೆ ಹೇಗೆ ಖುಲಾಯಿಸುತ್ತದೆ ಎಂಬುದು ಹೇಳಲು ಅಸಾಧ್ಯ. ಅದೇ ರೀತಿ ಕೇರಳದ ಮಲಪ್ಪುರಂನ ಪರಪ್ಪನಂಗಡಿ ಮುನ್ಸಿಪಾಲ್ಟಿಯ 11 ಮಂದಿ ಮಹಿಳಾ ಪೌರ ಕಾರ್ಮಿಕರು ಕೇರಳ ಮಾನ್ಸೂನ್ ಬಂಪರ್ ಲಾಟರಿಯಲ್ಲಿ ಕೋಟ್ಯಧಿಪತಿಗಳಾಗಿದ್ದಾರೆ.
ಇದನ್ನೂ ಓದಿ:No Entry: ಚಿಕ್ಕಮಗಳೂರಿನ ಪ್ರವಾಸಿ ಕೇಂದ್ರಗಳಿಗೆ ವಾರಾಂತ್ಯದಲ್ಲಿ ಪ್ರವೇಶ ನಿರ್ಬಂಧ
ಹೌದು ಸುಮಾರು ಆರೇಳು ತಿಂಗಳ ಹಿಂದೆ ಈ ಮಹಿಳೆಯರು ಲಾಟರಿ ಟಿಕೆಟ್ ಖರೀದಿಸಲು ತಮ್ಮ ಪರ್ಸ್ ನಲ್ಲಿ ಹುಡುಕಾಡಿದಾಗ 25 ರೂಪಾಯಿಯೂ ಇಲ್ಲವಾಗಿತ್ತು. ಕೊನೆಗೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ಈ “ಹರಿತಾ ಕರ್ಮ ಸೇನಾ”ದ 9 ಮಹಿಳೆಯರು ತಲಾ 25 ರೂಪಾಯಿ ಹಾಗೂ ಇಬ್ಬರು ತಲಾ 12.50 ರೂಪಾಯಿಯಂತೆ ಹಣವನ್ನು ಒಟ್ಟುಗೂಡಿಸಿ 250 ರೂಪಾಯಿ ಬೆಲೆಯ ಕೇರಳ ಸರ್ಕಾರದ ಮಾನ್ಸೂನ್ ಲಾಟರಿಯನ್ನು ಖರೀದಿಸಿದ್ದರು.
ಆದರೆ ತಾವು ಖರೀದಿಸಿದ ಲಾಟರಿ ಟಿಕೆಟ್ ಮೂಲಕ ತಾವು ಕೋಟ್ಯಧಿಪತಿಗಳಾಗುತ್ತೇವೆ ಎಂಬ ಕನಸನ್ನೂ ಕೂಡಾ ಕಂಡಿರಲಿಲ್ಲವಾಗಿತ್ತು. ಪೌರ ಕಾರ್ಮಿಕರಾದ ಪಿ.ಪಾರ್ವತಿ, ಕೆ.ಲೀಲಾ, ಎಂಪಿ ರಾಧಾ, ಏಂ ಶೀಜಾ, ಕೆ.ಚಂದ್ರಿಕಾ, ಇ.ಬಿಂದು, ಕಾತ್ಯಾಯಿನಿ, ಕೆ.ಶೋಭಾ, ಸಿ ಬೇಬಿ, ಸಿ ಕುಟ್ಟಿಮಾಲು ಮತ್ತು ಪಿ ಲಕ್ಷ್ಮೀ ಹತ್ತು ಕೋಟಿ ರೂಪಾಯಿಯ ಬಂಪರ್ ಬಹುಮಾನ ಪಡೆದಿದ್ದಾರೆ.
ಬುಧವಾರ ಕೇರಳ ಲಾಟರಿ ಇಲಾಖೆ ಮಾನ್ಸೂನ್ ಲಾಟರಿ ಫಲಿತಾಂಶ ಘೋಷಿಸಿತ್ತು. ಬಂಪರ್ ಬಹುಮಾನ ಈ ಪಾರಿ ಪಾಲಕ್ಕಾಡ್ ಏಜೆನ್ಸಿ ಮಾರಾಟ ಮಾಡಿದ ಟಿಕೆಟ್ ಗೆ ಬಂದಿರುವುದಾಗಿ ಪೌರ ಕಾರ್ಮಿಕಳಾದ ಪಾರ್ವತಿಗೆ ಯಾರೋ ತಿಳಿಸಿದ್ದರಂತೆ. ಈ ಬಾರಿಯೂ ನಮಗೆ ಅದೃಷ್ಟ ಕೈಕೊಟ್ಟಿರುವುದಾಗಿ ತಿಳಿದು ಪಾರ್ವತಿ ಅವರು ಕೆಲಸ ಮುಗಿಸಿ ಮನೆಗೆ ಬಂದಾಗ, ಯಾರೋ ಒಬ್ಬರು ಕರೆ ಮಾಡಿ ನೀವು ಖರೀದಿಸಿದ ಟಿಕೆಟ್ ಗೆ ಬಂಪರ್ ಬಹುಮಾನ ಬಂದಿರುವುದಾಗಿ ತಿಳಿಸಿದ್ದಾರೆಂದು ಮಗ ಹೇಳಿದ್ದ. “ನನಗೆ ನಿಜಕ್ಕೂ ನಂಬಲು ಸಾಧ್ಯವಾಗಿಲ್ಲವಾಗಿತ್ತು. ಕೊನೆಗೂ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದಂತಾಗಿದೆ ಎಂದು ಪಾರ್ವತಿ ಸಂತಸವನ್ನು ಹಂಚಿಕೊಂಡಿದ್ದಾರೆ.
ನಮ್ಮಲ್ಲಿ ಟಿಕೆಟ್ ಖರೀದಿಸುವಷ್ಟು ಹಣ ಇರಲಿಲ್ಲವಾಗಿತ್ತು. ನಾವೆಲ್ಲರೂ ತೀವ್ರ ಹಣಕಾಸಿನ ತೊಂದರೆ ಅನುಭವಿಸುತ್ತಿರುವವರು. ಕೆಲವರು ಪ್ರತಿದಿನ ಮುನ್ಸಿಪಾಲ್ಟಿಗೆ ನಡೆದುಕೊಂಡೇ ಬರುತ್ತಾರೆ. ಯಾಕೆಂದರೆ ಬಸ್ ಟಿಕೆಟ್ ಗೆ ನೀಡುವ ಹಣ ಉಳಿದರೆ ಬೇರೆ ಖರ್ಚಿಗೆ ಸಹಾಯವಾಗುತ್ತದೆ ಎಂಬುದು ಲೆಕ್ಕಾಚಾರ. ಈಗ ನಾವು ಖರೀದಿಸಿದ ಟಿಕೆಟ್ ಗೆ ಬಂಪರ್ ಬಹುಮಾನ ಬಂದಿದ್ದು, ನಮ್ಮ ಆರ್ಥಿಕ ಸಂಕಷ್ಟಕ್ಕೆ ನೆರವು ಸಿಕ್ಕಂತಾಗಿದೆ ಎಂದು ಹಿರಿಯ ಮಹಿಳಾ ಪೌರ ಕಾರ್ಮಿಕರಾದ ರಾಧಾ ತಮ್ಮ ಮನದಾಳವನ್ನು ಹಂಚಿಕೊಂಡಿರುವುದಾಗಿ ವರದಿ ತಿಳಿಸಿದೆ.