Advertisement

11ಮಂದಿ ಅಂತಾರಾಜ್ಯ ದರೋಡೆಕೋರರ ಬಂಧನ

12:53 AM Sep 02, 2019 | Lakshmi GovindaRaj |

ಬೆಂಗಳೂರು: ಸಹೋದರಿ ಹಾಗೂ ಇತರ ಪರಿಚಯಸ್ಥರ ಮನೆಗಳಲ್ಲಿ ಕಳ್ಳತನ ಹಾಗೂ ದರೋಡೆ ಮಾಡುತ್ತಿದ್ದ ಮಹಿಳೆ ಸೇರಿ 11 ಮಂದಿ ರಾಜ್ಯ ಮತ್ತು ಅಂತಾರಾಜ್ಯ ಕಳ್ಳರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಗಿರಿಜಮ್ಮ (47), ರಾಜು ಅಲಿಯಾಸ್‌ ಸ್ಟೀಫ‌ನ್‌ ರಾಜು ಅಲಿಯಾಸ್‌ ಡಿಚ್ಚಿ ರಾಜು (51), ರಘುವರನ್‌ (30), ಸುರೇಶ್‌ (36), ಲಿಂಗರಾಜು(34) ಹಾಗೂ ತಮಿಳುನಾಡಿನ ಸ್ಟೀಫ‌ನ್‌ ರಾಜು (25), ಮಣಿಕಂಠನ್‌ (25), ಸತೀಶ್‌ (20), ರಾಜೇಶ್‌ (21), ಅಬ್ದುಲ್‌ ಸಮ್ಮದ್‌ (29) ಮತ್ತು ಸತೀಶ್‌ ಕುಮಾರ್‌ (24) ಬಂಧಿತರು.

Advertisement

ಅವರಿಂದ ಚಿನ್ನಾಭರಣಗಳು ಮತ್ತು ಬೆಳ್ಳಿ ವಸ್ತುಗಳು ಹಾಗೂ ಒಂದು ಆಟೋ ರಿಕ್ಷಾ, ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಆರೋಪಿಗಳ ವಿರುದ್ಧ ಕೋಣನಕುಂಟೆ, ಕಾಡುಗೋಡಿ, ಮಲ್ಲೇಶ್ವರ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು. ಪ್ರಕರಣದಲ್ಲಿ ಮಾಸ್ಟರ್‌ ಮೈಂಡ್‌ ಆಗಿರುವ ಡಿಚ್ಚಿ ರಾಜು ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕಳ್ಳತನ, ದರೋಡೆ ಪ್ರಕರಣಗಳು ದಾಖಲಾಗಿವೆ.

ಕೆಲ ತಿಂಗಳ ಹಿಂದಷ್ಟೇ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ, ಗಿರಿಜಮ್ಮ ಹೊರತು ಪಡಿಸಿ ಇತರೆ ಆರೋಪಿಗಳನ್ನು ಅಲ್ಲಿಯೇ ಪರಿಚಯ ಮಾಡಿಕೊಂಡಿದ್ದ. ಕೋಣನಕುಂಟೆ ಬಳಿ ಪುತ್ರನ ಜತೆ ವಾಸವಾಗಿದ್ದ ಗಿರಿಜಮ್ಮ, ಚೀಟಿ ವ್ಯವಹಾರದಲ್ಲಿ 10 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಈ ಮಧ್ಯೆ ಕೆಲ ವರ್ಷಗಳ ಹಿಂದೆ ಚೀಟಿ ವ್ಯವಹಾರದಲ್ಲಿಯೇ ಪರಿಚಯವಾದ ಡಿಚ್ಚಿ ರಾಜು, ಗಿರಿಜಮ್ಮನಿಗೆ ಪರಿಚಯಸ್ಥರ ಮನೆಗಳಲ್ಲಿ ಕಳ್ಳತನ ಮಾಡಿ ಸಾಲ ತೀರಿಸುವ ಬಗ್ಗೆ ಸಲಹೆ ನೀಡಿದ್ದ.

ಅಲ್ಲದೆ, ಕೃತ್ಯ ಎಸಗಿದರೆ ಇಂತಿಷ್ಟು ಹಣ ಕೊಡುವುದಾಗಿಯೂ ಆಮಿಷವೊಡ್ಡಿದ್ದ. ಈ ಹಿನ್ನೆಲೆಯಲ್ಲಿ ಗಿರಿಜಮ್ಮ, ಪರಿಚಯ ಇರುವ ಗಂಡಸರು ಇಲ್ಲದ ಮನೆಗಳನ್ನು ಆಯ್ಕೆ ಮಾಡಿಕೊಂಡು ದರೋಡೆಗೆ ಸಂಚು ರೂಪಿಸಿದ್ದಳು. ಬಳಿಕ ಡಿಚ್ಚಿ ರಾಜು, ತನಗೆ ಪರಿಚಯ ಇರುವ ಇತರೆ ಆರೋಪಿಗಳನ್ನು ನಿಗದಿತ ಸ್ಥಳಕ್ಕೆ ಕಳುಹಿಸಿ ಕೃತ್ಯ ಎಸಗಿ ಬಂದ ಹಣದಲ್ಲಿ ಎಲ್ಲರು ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದರು.

ಇತ್ತೀಚೆಗೆ ಕೋಣನಕುಂಟೆಯ ಚುಂಚಘಟ್ಟ ಮುಖ್ಯ ರಸ್ತೆಯ ಹಳೇ ಬ್ಯಾಂಕ್‌ ಕಾಲೋನಿ ನಿವಾಸಿ ಪ್ರಭಾವತಿ ಎಂಬವರು ತಾಯಿ ನರಸಮ್ಮ ಅವರ ಜತೆ ವಾಸವಾಗಿದ್ದರು. ಆ ಮನೆ ಪಕ್ಕದಲ್ಲೇ ಗಿರಿಜಮ್ಮ ವಾಸವಾಗಿದ್ದಳು. ಪ್ರಭಾವತಿ ಅವರ ಜತೆ ಸಲುಗೆಯಿಂದ ವರ್ತಿಸಿ, ಅವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದ ಆರೋಪಿ, ಆ.22ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಇತರೆ ಐವರು ಆರೋಪಿಗಳನ್ನು ಕರೆಸಿ ಮನೆಗೆ ನುಗ್ಗಿ, ದರೋಡೆ ಮಾಡಿ 298 ಗ್ರಾಂ ಚಿನ್ನಾಭರಣ ಕಳವು ಮಾಡಿಸಿದ್ದಳು. ಆಟೋದಲ್ಲಿ ಮೂವರು ಪ್ರಯಾಣಿಸಿದರೆ, ಇಬ್ಬರು ದ್ವಿಚಕ್ರ ವಾಹನದಲ್ಲಿ ಆಟೋ ಹಿಂಬಾಲಿಸುತ್ತಿದ್ದರು.

Advertisement

ಆದರೆ, ಗಿರಿಜಮ್ಮ ಮಾತ್ರ ಅನುಮಾನ ಬಾರದಂತೆ ಅಲ್ಲಿಯೇ ವಾಸವಾಗಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಘಟನಾ ಸ್ಥಳದ ಸಮೀಪದಲ್ಲಿರುವ ಸಿಸಿಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿ ತನಿಖೆ ನಡೆಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಗಿರಿಜಮ್ಮನನ್ನು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ಸಹೋದರಿಯ ಮನೆಯಲ್ಲಿ ಕಳವು: ಗಿರಿಜಮ್ಮನ ಸಹೋದರಿ ಮಲ್ಲೇಶ್ವರದಲ್ಲಿ ವಾಸವಾಗಿದ್ದು, ಕೆಲ ತಿಂಗಳ ಹಿಂದೆ ಅವರು ಕುಟುಂಬ ಸಮೇತ ತಮಿಳುನಾಡಿಗೆ ತೆರಳಿದ್ದರು. ಈ ಮಾಹಿತಿ ತಿಳಿದ ಗಿರಿಜಮ್ಮ, ತಮಿಳುನಾಡಿನಿಂದ ಆರೋಪಿಗಳನ್ನು ಕರೆಸಿ, ತಡರಾತ್ರಿ ಅವರ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ 5 ಲಕ್ಷ ರೂ. ನಗದು ಕಳವು ಮಾಡಿಸಿದ್ದಳು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next