ಮೈಸೂರು: ನಗರದ ಪ್ರತಿಷ್ಠಿತ ಮಹಾತ್ಮಗಾಂಧಿ ರಸ್ತೆಯ ಮಾಲ್ ಆಫ್ ಮೈಸೂರು ಎದುರಿನ ಕಸಬಾ ಹೋಬಳಿ ಸ.ನಂ.1ರಲ್ಲಿ 11.38 ಎಕರೆ ಸರ್ಕಾರಿ ದೊಡ್ಡಕರೆ ಪ್ರದೇಶವನ್ನು ಅತಿಕ್ರಮಣ ಮಾಡಿ ನಿರ್ಮಿಸಿದ್ದ ತಂತಿಬೇಲಿಯನ್ನು ತೆರವುಗೊಳಿಸಿ ಜಿಲ್ಲಾಡಳಿತ ಜಾಗವನ್ನು ವಶಕ್ಕೆ ಪಡೆದಿದೆ. ಮೈಸೂರು ತಾಲೂಕು ತಹಶೀಲ್ದಾರ್ ರಮೇಶ್‌ಬಾಬು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಕಾರ್ಯಾಚರಣೆ ನಡೆಸಿ, ಜೆಸಿಬಿಗಳನ್ನು ಬಳಸಿ ತಂತಿಬೇಲಿಯನ್ನು ತೆರವುಗೊಳಿಸಲಾಯಿತು.
ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ದೊಡ್ಡಕೆರೆ ಟ್ಯಾಂಕ್ ಬಂಡ್ ಮಾಲಿಕರ ಕ್ಷೇಮಾಭಿವೃದ್ಧಿ ಸಂಘದವರು ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದರಿಂದ ಸಂಘದ ಸದಸ್ಯರು ಮತ್ತು ತಹಶೀಲ್ದಾರ್ ರಮೇಶ್ ಬಾಬು ನಡುವೆ ಮಾತಿನ ಚಕಮಕಿ ನಡೆಯಿತು. ಈ ಜಾಗಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳೂ ನಮ್ಮ ಬಳಿ ಇದ್ದು, ಪ್ರತಿ ವರ್ಷ ಕಂದಾಯವನ್ನೂ ಕಟ್ಟುತ್ತಾ ಬಂದಿದ್ದೇವೆ.
ಎಂ.ಜಿ.ರಸ್ತೆ ವಿಸ್ತರಣೆಗಾಗಿ ನಮ್ಮ ಜಾಗವನ್ನು ಬಿಟ್ಟು ಕೊಟ್ಟಿದ್ದರಿಂದ ಬದಲಿ ಜಾಗವನ್ನು ನಮಗೆ ಗುರುತು ಮಾಡಲಾಗಿದೆ. ಇದಕ್ಕೆ ಹೈಕೋರ್ಟ್ ಆದೇಶ ಕೂಡ ಇದೆ. ಈಗ ಏಕಾಏಕಿ ಜೆಸಿಬಿಗಳನ್ನು ತಂದು ಅತಿಕ್ರಮಣ ಮಾಡಿದ್ದಾರೆ ಎಂದು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರ ವಿರುದ್ಧ ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದು ಸಂಘದ ಅಚ್ಯುತ್ ತಿಳಿಸಿದರು.
ತಹಶೀಲ್ದಾರ್ ರಮೇಶ್ ಬಾಬು ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ತೆರವು ಕಾರ್ಯಾಚರಣೆ ಮಾಡುತ್ತಿದ್ದೇವೆ. ಸರ್ಕಾರಿ ಜಾಗ ಉಳಿಸುವುದು ನಮ್ಮ ಕರ್ತವ್ಯ. ನಗರಪಾಲಿಕೆಯವರು ಯಾವ ಆಧಾರದ ಮೇಲೆ ಇವರಿಂದ ಕಂದಾಯ ಕಟ್ಟಿಸಿಕೊಂಡಿದ್ದಾರೋ ನಮಗೆ ಗೊತ್ತಿಲ್ಲ ಎಂದರು.
ಸಂಘದವರು ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ ಎನ್ನುತ್ತಾರೆ. ಆದರೂ 50 ವರ್ಷದಿಂದ ಯಾಕೆ ಇಲ್ಲಿ ಕಟ್ಟಡ ಕಟ್ಟಿಲ್ಲ ಎಂದು ಪ್ರಶ್ನಿಸಿದ ಅವರು, ಸಂಘದವರು ಹಾಕಿರುವ ಫಲಕವನ್ನು ತೆರವುಗೊಳಿಸಿ, ಸರ್ಕಾರದಿಂದ ಎಚ್ಚರಿಕೆ ಫಲಕವನ್ನು ಅಳವಡಿಸಿದ್ದೇವೆ ಎಂದು ತಿಳಿಸಿದರು.