ಬೆಳ್ತಂಗಡಿ: ಕೃಷಿ ಪ್ರಧಾನ ಭಾರತದಲ್ಲಿ ರೈತನೇ ಆಧಾರ. ಈ ದಿಸೆಯಲ್ಲಿ ಸರಕಾರವು 100 ಕೋ. ರೂ. ವೆಚ್ಚದಲ್ಲಿ ಹೈಟೆಕ್ ಹಬ್ ರಚಿಸಿ ರೈತರಿಗೆ ಸುಧಾರಿತ ಯಂತ್ರೋಪಕರಣ ಖರೀದಿಗೆ ಅನುಕೂಲ ಕಲ್ಪಿಸಲು ಮುಂದಾಗಿದೆ. ಶೀಘ್ರವೇ ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯಲಾಗುವುದು ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ವತಿಯಿಂದ 2023-24ನೇ ಸಾಲಿನ ಕೃಷಿ ವಿಸ್ತರಣ ಹಾಗೂ ಕೃಷಿ ಯಂತ್ರೋಪಕರಣಗಳ ವಿತರಣ ಕಾರ್ಯಕ್ರಮಕ್ಕೆ ಶನಿವಾರ ಧರ್ಮಸ್ಥಳದಲ್ಲಿ ಚಾಲನೆ ನೀಡಿ ಮಾತನಾಡಿದರು.
ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡಾಗ ಕೃಷಿ ಲಾಭದಾಯಕವಾಗುತ್ತದೆ. ಈ ನೆಲೆಯಲ್ಲಿ ಡಾ| ಹೆಗ್ಗಡೆಯವರು ತಮ್ಮ ಸಂಸ್ಥೆಯ ಮುಖಾಂತರ ಜನಪರ ಯೋಜನೆಗಳಿಂದ ನಾಡು ಸಮೃದ್ಧಿಗೊಳಿಸಿದ್ದಾರೆ. ರಾಜ್ಯದಲ್ಲಿ ಇನ್ನಷ್ಟು ಹೆಚ್ಚುವರಿ ಕೃಷಿ ಯಂತ್ರಧಾರೆ ಕೇಂದ್ರ ಸ್ಥಾಪಿಸಲು ಸರಕಾರದಿಂದ ನೆರವು ಒದಗಿಸಲಾಗುವುದು. ಈಗಾಗಲೆ ಬಾಡಿಗೆ ಸೇವಾ ಕೇಂದ್ರಗಳ ಕಡೆಗೆ ನಿಗಾವಹಿಸಲು ಜಿಲ್ಲಾ ಮಟ್ಟದಲ್ಲಿ ಸಿಇಒ ಅಧ್ಯಕ್ಷತೆಯಲ್ಲಿ ಕಮಿಟಿ ರಚಿಸುವಂತೆ ಆದೇಶಿಸಲಾಗಿದೆ ಎಂದರು.
ಸರಕಾರ ಕೃಷಿ ಭಾಗ್ಯ ತರಲಿ: ಫಲಾನುಭವಿಗಳಿಗೆ ವಿವಿಧ ಕೃಷಿ ಯಂತ್ರೋಪಕರಣಗಳ ವಿತರಣೆ ಮಾಡಿ ಮಾತನಾಡಿದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು, ಆಧುನಿಕ ಜೀವನಕ್ಕೆ ಕೃಷಿಯ ಸಂಪನ್ಮೂಲ ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ. ಎಲ್ಲ ದೇಶಗಳು ಕೃಷಿಗೆ ಬೆಂಬಲ ನೀಡಿ ಪರಿವರ್ತನೆ ಮಾಡಿಕೊಳ್ಳುತ್ತಿದೆ. ಯಂತ್ರೋಪಕರಣ ವೆಚ್ಚ ಅಧಿಕವಾಗಿರುವುದರಿಂದ ಸರಕಾರ ಅದನ್ನು ಯೋಗ್ಯ ದರದಲ್ಲಿ ರೈತರಿಗೆ ಒದಗಿಸಲು ಪ್ರಯತ್ನಿಸಬೇಕು. ಜತೆಗೆ ಸರಕಾರ ಕೃಷಿ ಭಾಗ್ಯ ತರುವ ಮೂಲಕ ಕೃಷಿಕರ ಬಾಳು ಬೆಳಗಿಸಬೇಕು ಎಂದು ಆಶಿಸಿದರು.
ಡಾ| ಹೇಮಾವತಿ ವೀ. ಹೆಗ್ಗಡೆ ಕೃಷಿ ಕಾರ್ಯಕ್ರಮಗಳ ವಾರ್ಷಿಕ ವರದಿ ಬಿಡುಗಡೆಗೊಳಿಸಿದರು. ಡಿ. ಹಷೇìಂದ್ರ ಕುಮಾರ್ ಮಾಹಿತಿ ಪತ್ರ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ವಾರ್ಷಿಕ ಸಸಿ ವಿತರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಚಿವರ ಪತ್ನಿ ಧನಲಕ್ಷಿ$¾à, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ವಿಮಲಾ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ| ಎಚ್. ಕೆಂಪೇಗೌಡ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಟ್ರಸ್ಟಿ ಸಂಪತ್ ಸಾಮ್ರಾಜ್ಯ, ಸಿಒಒ ಅನಿಲ್ ಕುಮಾರ್ ಎಸ್.ಎಸ್. ಉಪಸ್ಥಿತರಿದ್ದರು.
ಯೋಜನೆಯ ಸಿಇಒ ಡಾ| ಎಲ್.ಎಚ್.ಮಂಜುನಾಥ್ ಸ್ವಾಗತಿಸಿದರು. ಯೋಜನಾಧಿಕಾರಿ ಸುರೇಂದ್ರ ವಂದಿಸಿದರು. ಕೃಷಿ ಅಧಿಕಾರಿ ರಾಮ್ ಕುಮಾರ್ ನಿರೂಪಿಸಿದರು.
ಡೀಸೆಲ್‌ಗೆ ಸಬ್ಸಿಡಿ; ಸರಕಾರ ಚಿಂತಿಸಲಿ
ಪ್ರಸಕ್ತ ಸಾಲಿನಲ್ಲಿ 45.37 ಕೋಟಿ ರೂ. ಅನುದಾನದ ಅಂದಾಜು ಪಟ್ಟಿ ತಯಾರಿಸಲಾಗಿದ್ದು ಸುಮಾರು 15 ಲಕ್ಷ ರೈತರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಕಳೆದ 10 ವರ್ಷಗಳಿಂದ ರಾಜ್ಯದ 164 ಹೋಬಳಿಗಳಲ್ಲಿ ಕೃಷಿಯಂತ್ರಧಾರೆ ಕೇಂದ್ರ ಸ್ಥಾಪನೆ ಮಾಡಿ 135 ಕೋ.ರೂ. ವಿನಿಯೋಗ ಮಾಡಲಾಗಿದೆ. ವಾರ್ಷಿಕವಾಗಿ 2.3 ಲಕ್ಷ ರೈತರು ಅನುದಾನಧರಿತ ಯಂತ್ರೋಪಕರಣ ಖರೀದಿಸುತ್ತಾರೆ. ಪ್ರಸಕ್ತ ಯಂತ್ರ ಬಳಕೆ ದುಬಾರಿಯಾಗಿರುವುದರಿಂದ 45 ಕೋ.ರೂ. ನಷ್ಟದಲ್ಲಿದೆ. ಸರಕಾರ ಈ ವಿಚಾರವಾಗಿ ಗಂಭೀರ ಚಿಂತನೆ ನಡೆಸಿ ಡೀಸೆಲ್‌ಗೆ ಸಬ್ಸಿಡಿ ಒದಗಿಸಬೇಕು ಎಂದು ಡಾ| ಎಲ್.ಎಚ್.ಮಂಜುನಾಥ್ ಪ್ರಸ್ತಾವಿಸಿದರು.