Advertisement

ಕನಕಮಜಲು ಗ್ರಾ.ಪಂ.ಗೆ 10 ಲಕ್ಷ ರೂ. ಪುರಸ್ಕಾರ

10:46 AM Sep 02, 2018 | |

ಸುಳ್ಯ: ನಮ್ಮ ಗ್ರಾಮ ನಮ್ಮ ಯೋಜನೆ ಅತ್ಯುತ್ತಮವಾಗಿ ಅನುಷ್ಠಾನಿಸಿದ ದ.ಕ. ಮತ್ತು ಉಡುಪಿ ಜಿಲ್ಲೆಯ ಒಟ್ಟು ಆರು ಗ್ರಾ.ಪಂ.ಗಳು ರಾಜ್ಯ ಸರಕಾರದ ಪ್ರೋತ್ಸಾಹಧನ ಪುರಸ್ಕಾರಕ್ಕೆ ಆಯ್ಕೆಗೊಂಡಿದೆ. ದ.ಕ. ಜಿಲ್ಲೆಯ ನಾಲ್ಕು ಗ್ರಾ.ಪಂ.ಗಳಲ್ಲಿ ಸುಳ್ಯ ತಾಲೂಕಿನ ಕನಕಮಜಲು ಗ್ರಾ.ಪಂ. ಒಂದಾಗಿದೆ. ಜಿಲ್ಲೆಯಲ್ಲಿ ಗರಿಷ್ಠ ಅಂಕ ಗಳಿಸಿದ ಪಂಚಾಯತ್‌ ಇದಾಗಿದೆ. ಪ್ರಶಸ್ತಿ 10 ಲ.ರೂ. ನಗದು ಬಹುಮಾನ ಹೊಂದಿದ್ದು, ವಿನಿಯೋಗದ ಮಾರ್ಗಸೂಚಿ ಅನ್ವಯ ನಿರ್ದಿಷ್ಟ ಕಾಮಗಾರಿಗಳಿಗೆ ಅನುದಾನ ಬಳಸಲು ಸೂಚಿಸಲಾಗಿದೆ.

Advertisement

ಏನಿದು ಯೋಜನೆ?
2016-17ನೇ ಸಾಲಿನಲ್ಲಿ ರಾಜ್ಯ ಸರಕಾರ ಪಂಚಾಯತ್‌ರಾಜ್‌ ವ್ಯವಸ್ಥೆ ಮೂಲಕ ನಮ್ಮ ಗ್ರಾಮ ನಮ್ಮ ಯೋಜನೆ ಅನುಷ್ಠಾನಿಸಿತ್ತು. ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ವೇಗವನ್ನು ತರುವ ಉದ್ದೇಶ ಹೊಂದಲಾಗಿತ್ತು.

ಗ್ರಾ.ಪಂ. ಕೈಗೊಂಡ ಚಟುವಟಿಕೆ, ಮುಂದಿನ ಐದು ವರ್ಷದ ಗ್ರಾ.ಪಂ. ದೂರದೃಷ್ಟಿತ್ವದ ಯೋಜನೆ, ಪೂರ್ವಭಾವಿ ಚಟುವಟಿಕೆ, ಆನ್‌ಲೈನ್‌ ಪ್ರಶ್ನೆಗಳಿಗೆ ಸಮರ್ಪಕ ಉತ್ತರ, ನಮ್ಮ ಗ್ರಾಮ ನಮ್ಮ ಯೋಜನೆ ಅನುಷ್ಠಾನಿಸಿದ ಕುರಿತು ದಾಖಲೀಕರಣ ಇತ್ಯಾದಿ ಪ್ರಕ್ರಿಯೆಗಳನ್ನು ಗಮನಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ಎಲ್ಲ ಅಂಕಿ-ಅಂಶದ ಬಗ್ಗೆ ಸರಕಾರದ ತಂಡ ಬಂದು ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುತ್ತದೆ.

ಜಿಲ್ಲೆಗೆ ಅಗ್ರಸ್ಥಾನ
ಕನಕಮಜಲು ಗ್ರಾ.ಪಂ. ಜಿಲ್ಲೆಯ ಎಲ್ಲ ಪಂಚಾಯತ್‌ಗಳ ಪೈಕಿ ಅತಿ ಹೆಚ್ಚು ಅಂಕ ಗಳಿಸಿದೆ. ಜಿ.ಪಂ, ತಾ.ಪಂ. ಆಡಳಿತ, ಅಧಿಕಾರಿ ವರ್ಗ, ಎಲ್ಲ ಹಂತದ ಜನಪ್ರತಿನಿಧಿಗಳು, ಯುವಕ ಮಂಡಲ, ಸಂಘ-ಸಂಸ್ಥೆ ಸಹಭಾಗಿತ್ವದಲ್ಲಿ ನಮ್ಮ ಗ್ರಾಮ-ನಮ್ಮ ಯೋಜನೆ ಅನುಷ್ಠಾನಿಸಿ ಯಶಸ್ಸು ಕಂಡಿದೆ ಎನ್ನುತ್ತಾರೆ ಕನಕಮಜಲು ಗ್ರಾ.ಪಂ. ಅಧ್ಯಕ್ಷೆ ಜಯಲತಾ ಪಿ. ಅವರು.

ಯೋಜನೆ ಕುರಿತು ತರಬೇತಿ ಮಾಹಿತಿ, ಪೂರ್ವಭಾವಿ ಸಭೆ, ಪ್ರಚಾರ, ಕರಪತ್ರ ವಿತರಣೆ, ದತ್ತಾಂಶ ಸಂಗ್ರಹಣೆ, ಸಮಗ್ರ ಮಾಹಿತಿ ಸಂಗ್ರಹಣೆ, ಗ್ರಾ.ಪಂ. ವ್ಯಾಪ್ತಿಯ ಕುಂದು ಕೊರತೆಗಳ ವಾಸ್ತವ ಸ್ಥಿತಿ ವಿಶ್ಲೇಷಣೆ, ಸಾಮಾನ್ಯ ಸಭೆ ಹೀಗೆ ವಿವಿಧ ಹಂತದಲ್ಲಿ ಗ್ರಾ.ಪಂ. ಸ್ಥಿತಿಗತಿ ಅಧ್ಯಯನ ಮಾಡಿ ಐದು ವರ್ಷದ ದೂರದೃಷ್ಟಿತ್ವವನ್ನು ದಾಖಲಿಸಲಾಗಿದೆ ಎನ್ನುತ್ತಾರೆ ಗ್ರಾ.ಪಂ. ಉಪಾಧ್ಯಕ್ಷ ಶ್ರೀಧರ ಕುತ್ಯಾಳ.

Advertisement

ಸಾರ್ವಜನಿಕ ಸಹಭಾಗಿತ್ವ
ಕನಕಮಜಲು ಗ್ರಾ.ಪಂ.ನಲ್ಲಿ ನಮ್ಮ ಗ್ರಾಮ ನಮ್ಮ ಯೋಜನೆ ಅನುಷ್ಠಾನಿಸುವ ಬಗ್ಗೆ ಗ್ರಾಮಸಭೆ ನಡೆಸಿ, ಸಮೀಕ್ಷೆ ಸಂದರ್ಭ ಕಂಡು ಬಂದ ಕುಂದು ಕೊರತೆ ಮುಂದಿಡಲಾಯಿತು. ಗ್ರಾಮಸ್ಥರು ಬೇಡಿಕೆ ಇರಿಸಿದ ವೈಯಕ್ತಿಕ ಮತ್ತು ಸಾರ್ವಜನಿಕ ಕಾಮಗಾರಿ ಪಟ್ಟಿ ರಚಿಸಲಾಯಿತು. ಇದನ್ನು ಯೋಜನಾ ಸಹಾಯಕ ಸಮಿತಿ ಮೂಲಕ ಪರಿಶೀಲಿಸಲಾಯಿತು. ಗ್ರಾಮ ಪಂಚಾಯತ್‌, ತಾ.ಪಂ., ಜಿ.ಪಂ. ಮತ್ತು ಸರಕಾರದ ಮಟ್ಟದಲ್ಲಿ ಅನುಷ್ಠಾನಿಸಬಹುದಾದ ಬೇಡಿಕೆಗಳನ್ನು ವಿಂಗಡಿಸಲಾಯಿತು.

ಕಡಿಮೆ ವೆಚ್ಚ ಹಾಗೂ ಖರ್ಚಿಲ್ಲದ ಕಾಮಗಾರಿ ಗುರುತಿಸಿ, ಆರು ಸಮಿತಿ ರಚಿಸಿ ಅನುಷ್ಠಾನಿಸಲು ಉದ್ದೇಶಿಸಲಾಯಿತು. ಸ್ಥಳೀಯ ಸಂಘ-ಸಂಸ್ಥೆಗಳ ಸಹಭಾಗಿತ್ವ ಹಾಗೂ ಎನ್‌ಆರ್‌ಜಿ ಮೂಲಕ ಕಿಂಡಿ ಅಣೆಕಟ್ಟು ನಿರ್ಮಾಣ, ಮಳೆ ಕೊಯ್ಲು, ಪ್ರವಾಹ ನಿಯಂತ್ರಣ ತಡೆಗೋಡೆ, ಕೊಳವೆಬಾವಿ ಜಲ ಮರುಪೂರಣ ಘಟಕ ಇತ್ಯಾದಿಗಳನ್ನು ಪಂಚಾಯತ್‌ ವ್ಯಾಪ್ತಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಅನುಷ್ಠಾನಿಸಿದೆ. 

ಯಾವ್ಯಾವ ಗ್ರಾ.ಪಂ.
ದ.ಕ. ಜಿಲ್ಲೆಯಲ್ಲಿ ಕನಕಮಜಲು, ರಾಮಕುಂಜ, ಕೊಲ್ನಾಡು, ಎಕ್ಕಾರು, ಉಡುಪಿ ಜಿಲ್ಲೆಯ ಹೊಸಾಡು, ಕಾಡೂರು ಗ್ರಾಮ ಪಂಚಾಯತ್‌ಗೆ ನಮ್ಮ ಗ್ರಾಮ ನಮ್ಮ ಯೋಜನೆ ಪ್ರೋತ್ಸಾಹಧನ ಪುರಸ್ಕಾರ ದೊರೆತಿದೆ.

ಸರ್ವರ ಸಹಕಾರ
ಪಂಚಾಯತ್‌ನ ಎಲ್ಲ ಚುನಾಯಿತ ಪ್ರತಿನಿಧಿಗಳು, ಎಲ್ಲ ಸ್ತರದ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು, ತಾ.ಪಂ., ಜಿ.ಪಂ, ವಿವಿಧ ಹಂತದ ಅಧಿಕಾರಿ ವರ್ಗಗಳ ಸಹಕಾರದಿಂದ ಪ್ರೋತ್ಸಾಹ ಪುರಸ್ಕಾರಕ್ಕೆ ಗ್ರಾ.ಪಂ. ಆಯ್ಕೆಯಾಗಿದೆ. 10 ಲ.ರೂ. ಅನುದಾನವನ್ನು ಮಾರ್ಗಸೂಚಿ ಸುತ್ತೋಲೆಯಂತೆ ಬಳಸಲಾಗುವುದು.
– ಸರೋಜಿನಿ ಬಿ.
ಪಿಡಿಒ, ಕನಕಮಜಲು

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next