ಕೊಲ್ಲಾಪುರ: ಎರಡು ವರ್ಷಗಳ ಹಿಂದೆ ನಗರದಲ್ಲಿ ನಡೆದ ವಿಚಾರವಾದಿ, ಕಮ್ಯೂನಿಸ್ಟ್ ನಾಯಕ ಗೋವಿಂದ ಪಾನ್ಸರೆ ಅವರ ಹತ್ಯೆ ಪ್ರಕರಣದ ಆರೋಪಿಗಳಾದ ವಿನಯ್ ಪವಾರ್ ಮತ್ತು ಸಾರಂಗ್ ದಿಲೀಪ್ ಅಕೋಲ್ಕರ್ ಅವರ ಬಗೆಗೆ ಮಾಹಿತಿ ನೀಡಿದವರಿಗೆ ರಾಜ್ಯ ಸರಕಾರ 10ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದೆ.
2015ರ ಫೆ.16ರಂದು ವಿಚಾರ ವಾದಿ ಗೋವಿಂದ ಪಾನ್ಸರೆ ಮತ್ತು ಮತ್ತವರ ಪತ್ನಿ ಉಮಾ ಅವರ ಮೇಲೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಗನ್‌ಧಾರಿಗಳಾದ ವಿನಯ್ ಪವಾರ್ ಮತ್ತು ಸಾರಂಗ್ ದಿಲೀಪ್ ಅಕೋಲ್ಕರ್ ಗುಂಡಿನ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪನ್ಸಾರೆ ಆಸ್ಪತ್ರೆಯಲ್ಲಿ ಫೆ.20ರಂದು ಸಾವನ್ನಪ್ಪಿದ್ದರೆ ಅವರ ಪತ್ನಿ ಉಮಾ ಪ್ರಾಣಾಪಾಯದಿಂದ ಪಾರಾಗಿದ್ದರು.
ಘಟನೆ ನಡೆದಾಗಿನಿಂದ ವಿನಯ್, ದಿಲೀಪ್ ಅಕೋಲ್ಕರ್ ತಲೆಮರೆಸಿ ಕೊಂಡಿದ್ದು ಇವರೀರ್ವರಿಗಾಗಿ ಪೊಲೀ ಸರು ಹುಡುಕಾಟ ನಡೆಸುತ್ತಿದ್ದಾರೆ.
ಇದೀಗ ಈ ಈರ್ವರು ಆರೋಪಿಗಳ ಬಗೆಗೆ ಸುಳಿವು ನೀಡಿದವರಿಗೆ 10ಲ. ರೂ. ಬಹುಮಾನವನ್ನು ಘೋಷಿಸ ಲಾಗಿದೆಯಲ್ಲದೆ ಇವರೀರ್ವರ ವಿರುದ್ಧವೂ ಜಾಮೀನು ರಹಿತ ವಾರಂಟ್‌ನ್ನು ಹೊರಡಿಸಲಾಗಿದೆ.
ಉಮಾ ಪನ್ಸಾರೆ ಅವರು ತಮ್ಮ ಮೇಲೆ ಗುಂಡಿನ ದಾಳಿ ನಡೆಸಿದ್ದ ಆರೋಪಿಗಳನ್ನು ಭಾವಚಿತ್ರದ ಮೂಲಕ ಗುರುತಿಸಿದ್ದು ವಿನಯ್ ಮತ್ತು ದಿಲೀಪ್ ನಮ್ಮ ಮೇಲೆ ದಾಳಿ ನಡೆಸಿದ ಆರೋಪಿಗಳೆಂದು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸಮೀರ್ ಗಾಯಕ್ವಾಡ್ ಇದೀಗ ನ್ಯಾಯಾಂಗ ಬಂಧನದಲ್ಲಿದ್ದು ಈತ ವಿನಯ್ ಮತ್ತು ದಿಲೀಪ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು ಎಂದು ಕೊಲ್ಲಾಪುರ ವಲಯ ಐಜಿಪಿ ವಿಶ್ವಾಸ್ ನಂಗಾರೆ-ಪಾಟೀಲ್ ತಿಳಿಸಿದರು.
ಈ ಹಿಂದೆ ಸಿಬಿಐ ಈ ಆರೋಪಿಗಳ ಸುಳಿವು ನೀಡಿದವರಿಗೆ 5 ಲ.ರೂ. ಬಹುಮಾನವನ್ನು ಘೋಷಿಸಿತ್ತು.