ಮುಂಬಯಿ: ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ 30 ವರ್ಷದ ಯುವಕನೊಬ್ಬ ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸುಮಾರು ಹಲವು ಜನರು ಸಿಲುಕಿರುವ ಘಟನೆ ಮುಂಬೈನ ಕುರ್ಲಾ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಹಾರಾಷ್ಟ್ರದ ಬಳಿಕ ರಾಜಸ್ಥಾನ್, ಜಾರ್ಖಂಡ್, ಬಂಗಾಳ ಸರ್ಕಾರ ಕೂಡಾ ಪತನವಾಗಲಿದೆ: ಸುವೇಂದು
ನಾಯಕ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳದಲ್ಲಿ ಅಗ್ನಿಶಾಮಕ ದಳ ಮತ್ತು ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡ ಭಾಗಶಃ ಕುಸಿದು ಬಿದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರನ್ನು ಘಾಟ್ ಕೋಪರ್ ಮತ್ತು ಸೈಯನ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಘಾಟ್ ಕೋಪರ್ ರಾಜವಾಡಿ ಆಸ್ಪತ್ರೆಗೆ ಕರೆತಂದಾಗ ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡ ಕುಸಿದು ಬಿದ್ದ ಸ್ಥಳಕ್ಕೆ ಸಚಿವ ಆದಿತ್ಯ ಠಾಕ್ರೆ ಭೇಟಿ ನೀಡಿದ್ದು, ಇಂತಹ ಹಳೆಯ ಕಟ್ಟಡಗಳನ್ನು ಗುರುತಿಸಿ ಧ್ವಂಸಗೊಳಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು. ಒಂದು ವೇಳೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ ನೋಟಿಸ್ ನೀಡಿದ್ದರೆ, ಕೂಡಲೇ ವಾಸ್ತವ್ಯ ಹೂಡಿರುವವರು ಸ್ವಯಂ ಆಗಿ ಖಾಲಿ ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ಇಂತಹ ದುರಂತಕ್ಕೆ ಸಾಕ್ಷಿಯಾಗಲಿದೆ ಎಂದು ಠಾಕ್ರೆ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.