Advertisement
ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ನಿಧಾನಗೊಳಿಸಿದ್ದು, ಮಾಲಕನ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ರವಿವಾರ ದಲಿತ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು, ಮುಖಂಡರು ಠಾಣೆ ಮುಂಭಾಗ ನೆರೆದು ಆಕ್ರೋಶ ವ್ಯಕ್ತಪಡಿಸಿರು. ಇನ್ನೊಂದೆಡೆ ಶಾಸಕ ಅಶೋಕ್ ಕುಮಾರ್ ರೈ ಅವರು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಅನಂತರ ಶಿವಪ್ಪರನ್ನು ಕೆಲಸಕ್ಕೆ ಕರೆದುಕೊಂಡು ಹೋದ ಮಾಲಕ ಹೆನ್ರಿಯ ತಾವ್ರೋ ಇಂಡಸ್ಟ್ರೀಸ್ ಭೇಟಿ ನೀಡಿ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಪ್ರಕರಣ ದಾಖಲಿಸಿ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಶಾಸಕರು ಸೂಚನೆ ನೀಡಿದ್ದು, ಮಿಲ್‌ಗೂ ಬೀಗ ಜಡಿಯುವಂತೆ ಪೊಲೀಸರಿಗೆ ಸೂಚನೆ ನೀಡಿದರು.
ಪ್ರಕರಣದ ವಿರುದ್ಧ ಸಮಗ್ರ ತನಿಖೆಗೆ ಆಗ್ರಹಿಸಿ ಮತ್ತು ಮಾಲಕನ ವಿರುದ್ದ ಪ್ರಕರಣ ದಾಖಲಿಸಿ ಆತನನ್ನು ಬಂಧಿಸುವಂತೆ ದಲಿತ ಸಂಘಟನೆಗಳು, ಕುಟುಂಬಸ್ಥರು ಶನಿವಾರ ತಡರಾತ್ರಿ ತನಕವೂ ಆಗ್ರಹಿಸಿದರು. ರವಿವಾರ ಬೆಳಗ್ಗೆ ಮಿಲ್ ಮಾಲಕ ಹೆನ್ರಿ ಅವರ ಸಂಸ್ಥೆಯ ಬಳಿ ತೆರಳಿ ಅಲ್ಲಿ ಧಿಕ್ಕಾರ ಕೂಗಿದರು. ಮಾಲಕ ಬರುವಂತೆ ಆಗ್ರಹಿಸಿದ ಘಟನೆಯೂ ನಡೆಯಿತು.
Related Articles
ಸಂಘಟನೆಗಳ ಆಗ್ರಹದ ಹಿನ್ನೆಲೆಯಲ್ಲಿ ಪೊಲೀಸರು, ಸಂಘಟನೆಯ ಪ್ರಮುಖರು ಸಾಲ್ಮರ ತಾವ್ರೋ ಇಂಡಸ್ಟ್ರೀಸ್ ಮಿಲ್‌ಗೆ ತೆರಳಿದರು. ಇದೇ ವೇಳೆ ಶಾಸಕ ಅಶೋಕ್ ಕುಮಾರ್ ರೈ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮೊದಲಾದವರು ಸ್ಥಳಕ್ಕೆ ಆಗಮಿಸಿ ಮಾಲಕರು ಎಲ್ಲಿ ಎಂದು ವಿಚಾರಿಸಿದ್ದಾರೆ.
Advertisement
ಈ ವೇಳೆ ಆತ ಅಲ್ಲಿ ಇರಲಿಲ್ಲ. ಪೊಲೀಸರು ಮುಚ್ಚಿದ್ದ ಮಿಲ್‌ನ ಗೇಟ್ ತೆರೆದು ಮೃತದೇಹ ಸಾಗಿಸಿದ ಪಿಕಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಮಾಲಕನನ್ನು ವಿಚಾರಣೆಗೆ ಒಳಪಡಿಸುವ ಭರವಸೆ ನೀಡಿದರು. ಮರಣೋತ್ತರ ಪರೀಕ್ಷೆ ನಡೆದು ರವಿವಾರ ಮೃತರ ಅಂತ್ಯಸಂಸ್ಕಾರ ನಡೆಯಿತು. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.