ಬೆಂಗಳೂರು: ಉದ್ಯಾನ ನಗರಿಯ ಸಸ್ಯಕಾಶಿ ಗುರುವಾರ ಹೌಸ್‌ಫುಲ್. ಒಂದೇ ದಿನದಲ್ಲಿ ಭೇಟಿ ಕೊಟ್ಟವರ ಸಂಖ್ಯೆ ಬರೋಬ್ಬರಿ 1.72ಲಕ್ಷ. 73ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಸರ್ಕಾರಿ ರಜಾ ದಿನವೂ ಇದ್ದ ಕಾರಣ ಲಾಲ್‌ಬಾಗ್‌ಗೆ ಜನಸಾಗರವೇ ಹರಿದು ಬಂದಿತ್ತು. ಕಣ್ಣು ಹಾಯಿಸಿದಷ್ಟೂ ಜನರಿಂದ ತುಂಬಿ ತುಳುಕುತ್ತಿತ್ತು.
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಒಂದೇ ದಿನದಲ್ಲಿ 8.07 ಲಕ್ಷ ರೂ. ಆದಾಯ ತೋಟಗಾರಿಕೆ ಇಲಾಖೆಗೆ ಬಂದಿದೆ. 1.31 ಲಕ್ಷ ವಯಸ್ಕರು ಮತ್ತು 41 ಸಾವಿರ ಮಕ್ಕಳು ಪಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದರು.
ಮಕ್ಕಳಿಗೆ ಉಚಿತ ಪ್ರವೇಶ: ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡುವ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಗುರುವಾರ ಒಂದೇ ದಿನ 30 ಸಾವಿರಕ್ಕಿಂತ ಹೆಚ್ಚು ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಸಂಚಾರ ದಟ್ಟಣೆ: ಸ್ವಾಂತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್‌ಭಾಗ್ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ರಾಜ್ಯದ ಮೂಲೆ ಮೂಲೆಯಿಂದ ಸಹಸ್ರಾರು ಜನ ಶುಕ್ರವಾರ ಆಗಮಿಸಿದ್ದರು. ಪರಿಣಾಮ ಲಾಲ್‌ಭಾಗ್ ಸುತ್ತಮುತ್ತಲ ಪ್ರದೇಶಗಳಲ್ಲಿ ಕಿಲೋಮೀಟರ್‌ಗಟ್ಟಲೆ ದೂರ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಲಾಲ್ ಭಾಗ್‌ನ ಪಶ್ಚಿಮ, ಪೂರ್ವ ಸೇರಿದಂತೆ ನಾಲ್ಕು ಗೇಟ್‌ಗಳ ರಸ್ತೆಗಳಲ್ಲಿ ಉಂಟಾಗಿದ್ದ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಪರದಾಡಿದರು.
ರಿಚ್‌ಮಂಡ್ ರಸ್ತೆ, ಶಾಂತಿನಗರ, ಕೆ.ಎಚ್ ರಸ್ತೆ, ಎಂ.ಎಚ್ ಮರಿಗೌಡ ರಸ್ತೆ , ಕೃಂಬಿಗಲ್ ರಸ್ತೆ ಸೇರಿದಂತೆ ಲಾಲ್‌ಭಾಗ್ ಸಂಪರ್ಕಿಸುವ ಸುತ್ತಮುತ್ತಲ ನಾಲ್ಕೈದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಭಾರೀ ವಾಹನ ದಟ್ಟಣೆ ಕಂಡು ಬಂದಿತು. ಸರತಿ ಸಾಲಿನಲ್ಲಿ ಕಾಲಿಡಲು ಜಾಗದಂತೆ ನಿಂತುಕೊಂಡಿದ್ದ ವಾಹನಗಳು ಲಾಲ್‌ಭಾಗ್ ತಲುಪಲು ಗಂಟೆಗೂ ಹೆಚ್ಚು ಕಾಲ ಹಿಡಿಯುತ್ತಿತ್ತು. ರಿಚ್ ಮಂಡ್ ಮೇಲ್ಸೇತುವೆ ರಸ್ತೆ, ಶಾಂತಿನಗರ, ಕೃಂಬಿಗಲ್ ರಸ್ತೆಗಳಲ್ಲಿ ಉಂಟಾಗಿದ್ದ ಭಾರೀ ಸಂಚಾರ ದಟ್ಟಣೆ ನಿಯಂತ್ರಿಸಲು ಸಂಚಾರ ಪೊಲೀಸರು ಹರಸಾಹಸಪಟ್ಟರು.
ಲಾಲ್‌ಭಾಗ್‌ನ ಪಶ್ಚಿಮ ದ್ವಾರದ ಬಳಿಯಿರುವ ಮೆಟ್ರೋ ನಿಲ್ದಾಣದ ಸಮೀಪವೂ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. ಪರಿಣಾಮ ಮೆಟ್ರೋ ಅವಲಂಬಿತ ಪ್ರಯಾಣಿಕರು ನಿಲ್ದಾಣದಿಂದ ಹೊರಬಂದು ರಸ್ತೆದಾಟಲು ಹರಸಾಹಸಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ರಸ್ತೆ ದಾಟಿದರೆ ಸಾಕು ಎಂಬ ಭಾವನೆ ಜನರಲ್ಲಿ ಮೂಡಿತ್ತು. ಶುಕ್ರವಾರ ರಾತ್ರಿ 7ಗಂಟೆಯವರೆಗೂ ಇದೇ ಸಂಚಾರ ದಟ್ಟಣೆ ಉಂಟಾಗಿತ್ತು ಬಳಿಕ ಕಡಿಮೆಯಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.