Advertisement

ಜಿಲ್ಲೆಯಾದ್ಯಂತ 1-5ನೇ ತರಗತಿ ಇಂದಿನಿಂದ ಆರಂಭ

06:44 PM Oct 24, 2021 | Team Udayavani |

ಉಡುಪಿ/ಕುಂದಾಪುರ/ಕಾರ್ಕಳ: ಉಡುಪಿ ಜಿಲ್ಲೆಯಾದ್ಯಂತ 1ರಿಂದ 5ನೇ ತರಗತಿಗಳು ಇಂದಿನಿಂದ ಆರಂಭಗೊಳ್ಳಲಿವೆ. ಜಿಲ್ಲೆಯಲ್ಲಿ 1ರಿಂದ 5ನೇ ತರಗತಿವರೆಗೆ 220 ಸರಕಾರಿ, 6 ಅನುದಾನಿತ, 15 ಅನುದಾನ ರಹಿತ, 8 ಇತರ ಸಹಿತ ಒಟ್ಟು 249 ಶಾಲೆಗಳಿವೆ. ಸರಕಾರಿ ಶಾಲೆಯಲ್ಲಿ 29,861, ಅನುದಾನಿತ 8,747, ಅನುದಾನ ರಹಿತ 38,056, ಇತರ 227 ಸಹಿತ ಒಟ್ಟು 76,891 ದಾಖಲಾತಿ ಆಗಿದೆ.

Advertisement

ಸಿದ್ಧತೆ ಸಂಪೂರ್ಣ
ತರಗತಿಗಳಿಗೆ ಹಾಜರಾಗುವ ಶೇ. 100 ರಷ್ಟು ಶಿಕ್ಷಕರು ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದಾರೆ. ಸಾಮಾಜಿಕ ಅಂತರ ಪಾಲಿಸಿ, 20 ವಿದ್ಯಾರ್ಥಿಗಳ ಸಣ್ಣ ಗುಂಪು ಮಾಡಲಾಗಿದೆ. ಮಾಸ್ಕ್ ಕಡ್ಡಾಯ ಸಹಿತ ಎಲ್ಲ ಶಾಲೆಗಳ ಎಲ್ಲ ತರಗತಿ ಕೊಠಡಿಗಳನ್ನು ಸ್ಯಾನಿಟೈಸರ್‌ ಮಾಡಲಾಗಿದೆ.

ಸುರಕ್ಷೆ ಕಾಳಜಿಗೆ ಸೂಚನೆ
ಎಲ್ಲ ಶಾಲಾ ಮುಖ್ಯಗುರುಗಳ ಸಭೆ ತಾಲೂಕು ಹಂತದಲ್ಲಿ ಮತ್ತು ಸಿಆರ್‌ಪಿ, ಬಿಆರ್‌ಪಿ , ಬಿಐಆರ್‌ ಟಿಬಿಇಒ ಬಿಆರ್‌ ಸಿಒಗಳ ಸಭೆಯನ್ನು ಜಿಲ್ಲಾ ಹಂತದಲ್ಲಿ ಮಾಡಿ ಅಗತ್ಯ ಸೂಚನೆ ನೀಡಿ ಮಕ್ಕಳ ಸುರಕ್ಷತೆ ಬಗ್ಗೆ ವಿಶೇಷ ಕಾಳಜಿ ಮಾಡಲು ಸೂಚಿಸಲಾಗಿದೆ.

ನ.2ರಿಂದ ಪೂರ್ಣ ತರಗತಿ
1ರಿಂದ 5ನೇ ತರಗತಿ ಮಕ್ಕಳಿಗೆ ಅಕ್ಟೋಬರ್‌ ಅಂತ್ಯದವರೆಗೆ ಅರ್ಧ ದಿನದ ತರಗತಿಗಳ ಶಾಲೆ ನಡೆಸ ಲಾಗುತ್ತದೆ. ನ.2ರಿಂದ ಪೂರ್ಣದಿನ ಶಾಲೆ ನಡೆಸಲಾಗುತ್ತದೆ. 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ 8 ಶಾಲೆಗಳು ಮಾತ್ರ ಜಿಲ್ಲೆ ಯಲ್ಲಿವೆ. ಇಂತಹ ಶಾಲೆಗಳಲ್ಲಿ ಕಾರಿಡಾರ್‌ ಬಳಸಲು ಮತ್ತು ಸರದಿ ಮೇರೆಗೆ ಶಾಲೆ ನಡೆಸಲು ತಿಳಿಸಲಾಗಿದೆ.

ಪರಿಶೀಲನೆಗೆ ಸೂಚನೆ
ಶಾಲಾ ಸ್ಪಂದನ ಕಾರ್ಯಕ್ರಮದಡಿ ಯಲ್ಲಿ ಜಿಲ್ಲೆಯ ಎಲ್ಲ ಮೆಲ್ವಿಚಾರಣಾಧಿಕಾರಿ ಗಳು ವಾರದಲ್ಲಿ ಐದು ಶಾಲೆಗಳಿಗೆ ಭೇಟಿ ನೀಡಲು ಆದೇಶ ನೀಡಲಾಗಿದೆ. ಶಿಕ್ಷಕರು ಉತ್ತಮ ಬೋಧನೆ, ಅವಲೋಕನ,ವಿದ್ಯಾರ್ಥಿಗಳು ಚೆನ್ನಾಗಿ ಕಲಿಯುತ್ತಿರುವುದನ್ನು ಪರಿಶೀಲಿಸಲು ತಿಳಿಸಲಾ
ಗಿದೆ. ತೀವ್ರ ದುರಸ್ತಿಯಲ್ಲಿರುವ ಶಾಲಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳನ್ನು ಕೂಡಿಸದೆಇರಲು ಕಟ್ಟೆಚ್ಚರ ನೀಡಲಾಗಿದೆ.

Advertisement

ಸೇತುಬಂಧ
ಕಲಿಕೆಯಲ್ಲಿ ಅತ್ಯಂತ ಹಿಂದುಳಿದ ಮಕ್ಕಳನ್ನು ಗುರುತಿಸಿ ಅಂಥವರಿಗೆ ಸೇತುಬಂಧ ನಡೆಸಿ ಅವರ ಕಲಿಕಾ ಕೊರತೆ ಗುರುತಿಸಿ ಪೂರಕ ಬೋಧನೆ ಮಾಡಲು ತಿಳಿಸಲಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಕಳುಹಿಸಲು ಒಪ್ಪದಿರುವವರಿಗೆ ಆನ್‌ ಲೈನ್‌ ಬೋಧನೆ ಮಾಡಲಾಗುತ್ತದೆ. ಭೌತಿಕ ಹಾಜರಾತಿ ಕಡ್ಡಾಯ ಇರುವುದಿಲ್ಲ ಎಂಬುದನ್ನು ತಿಳಿಸಲಾಗಿದೆ.

ಇದನ್ನೂ ಓದಿ:ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

ಕಾರ್ಕಳ ತಾ|: ಪೋಷಕರ ಜತೆ ಸಭೆ
ಕಾರ್ಕಳ: ದೀರ್ಘಾವಧಿ ಬಳಿಕ 1ರಿಂದ 5ನೇ ತರಗತಿ ತನಕದ ಭೌತಿಕ ತರಗತಿಗಳು ಅ.25ರಿಂದ ಆರಂಭಗೊಳ್ಳುತ್ತಿದ್ದು, ಕಾರ್ಕಳ ತಾಲೂಕಿನಲ್ಲಿ ಎಲ್ಲ ಸಿದ್ಧತೆಗಳನ್ನು ಶಾಲೆಗಳಲ್ಲಿ ಮಾಡಿಕೊಳ್ಳಲಾಗಿದೆ.

ಶಾಲೆಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸರ್‌ ಮಾಡಲಾಗಿದೆ. ಮಕ್ಕಳ ಪೋಷಕರ ಜತೆ ಸಭೆ ನಡೆಸಲಾಗಿದೆ. ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಶಾಲೆಯ ಆವರಣಕ್ಕೆ ತೋರಣ ಕಟ್ಟಿ, ಮಕ್ಕಳಿಗೆ ಆರತಿ ಬೆಳಗಿ, ಪುಷ್ಪ ನೀಡಿ ಸ್ವಾಗತಿಸುವ ಕಾರ್ಯಕ್ರಮಕ್ಕೆ ಶಿಕ್ಷಕರು ಅಣಿಯಾಗುತ್ತಿದ್ದಾರೆ. ನ.2ರಿಂದ ಮಧ್ಯಾಹ್ನ ಬಿಸಿಯೂಟ ಆರಂಭಗೊಳ್ಳಲಿದೆ. ಈಗಾಗಲೇ 6ರಿಂದ 10ನೇ ತರಗತಿ ಆರಂಭವಾಗಿದ್ದರಿಂದ ಇದರ ಜತೆಯಲ್ಲೆ 1ರಿಂದ 5 ರ ವರೆಗಿನ ಈ ಮಕ್ಕಳ ತರಗತಿಗಳು ಯಾವುದೇ ಸಮಸ್ಯೆಯಿಲ್ಲದೆ ನಡೆಯಲಿದೆ.

ಇದಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲವು ಸುಸೂತ್ರವಾಗಿ ನಡೆಯಲಿದೆ ಎಂದು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್‌ ನಾಯಕ್‌ ತಿಳಿಸಿದ್ದಾರೆ.

ಕುಂದಾಪುರ, ಬೈಂದೂರು ತಾ|: ಸಕಲ ಸಿದ್ಧತೆ
ಕುಂದಾಪುರ: ಸರಿ ಸುಮಾರು ಒಂದೂವರೆ ವರ್ಷದ ಬಳಿಕ ರಾಜ್ಯಾದ್ಯಂತ ಅ.25ರಿಂದ ಕಿರಿಯ ಪ್ರಾಥಮಿಕ ಶಾಲೆಗಳು ಮಕ್ಕಳ ಆಗಮನಕ್ಕೆ ತೆರೆದುಕೊಳ್ಳುತ್ತಿರು ವುದರಿಂದ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಮುಚ್ಚಿದ್ದ ಶಾಲೆಗಳಲ್ಲಿ ಮತ್ತೆ ಚಿಣ್ಣರ ಕಲರವ ಕೇಳಿಬರಲಿದೆ.

ಈಗಾಗಲೇ ಶಿಕ್ಷಕರು ಇವರನ್ನು ಬರಮಾಡಿಕೊಳ್ಳಲು ಶನಿವಾರ ಹಾಗೂ ರವಿವಾರ ಕುಂದಾಪುರ, ಬೈಂದೂರು ಭಾಗದ ಬಹುತೇಕ ಎಲ್ಲ ಶಾಲೆಗಳಲ್ಲಿ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ.

ಪೋಷಕರಿಂದ ಸ್ವಚ್ಛತೆ ಕುಂದಾಪುರ, ಬೈಂದೂರು ವಲಯದ ಶಿಕ್ಷಕರು, ಅಕ್ಷರ ದಾಸೋಹ ಸಿಬಂದಿಯೊಂದಿಗೆ ಕೆಲ ಶಾಲೆಗಳಲ್ಲಿ ಊರವರು, ಹಳೆ ವಿದ್ಯಾರ್ಥಿಗಳು, ಮಕ್ಕಳ ಪೋಷಕರು ಶಾಲಾ ಆವರಣ, ತರಗತಿ ಕೋಣೆ, ಆಟದ ಮೈದಾನ ಸ್ವತ್ಛತೆ, ಬಿಸಿಯೂಟದ ಕೋಣೆ ಸಿದ್ಧಗೊಳಿಸುವಲ್ಲಿ ಸಹಕರಿಸಿದರು.

10 ಶಾಲೆ : ಶೂನ್ಯ ಶಿಕ್ಷಕರು..!
ಕುಂದಾಪುರ, ಬೈಂದೂರು ವಲಯದ ತಲಾ 5ರಂತೆ ಒಟ್ಟು 10 ಶಾಲೆಗಳಲ್ಲಿ ಉತ್ತಮ ದಾಖಲಾತಿ ಹೊರತಾಗಿಯೂ ಶೂನ್ಯ ಶಿಕ್ಷಕರಿದ್ದು, ಭಾರೀ ಸಮಸ್ಯೆಯಾಗಿ ಪರಿಣಮಿಸಿದೆ. ಕುಂದಾಪುರ ವಲಯದ ಅಮಾಸೆಬೈಲಿನ ಕೆಲಾ, ಬಳ್ಮನೆ, ಮರಾತೂರು, ನಡಂಬೂರು, ಬಂಟಕೋಡು ಕಿ.ಪ್ರಾ. ಶಾಲೆಗಳು, ಬೈಂದೂರು ವಲಯದ ಕೊಲ್ಲೂರು ಸಮೀಪದ ಬಸ್ರಿಬೇರು, ಹಳ್ಳಿಬೇರು, ಬೆಳ್ಕಲ್‌, ಕೆರಾಡಿಯ ಹಯ್ಯಂಗಾರು, ಶಾಡಬೇರು ಹಾಗೂ ಹಾಲಾಡಿ-ಕೆರಾಡಿ ಶಾಲೆಯಲ್ಲಿ ಅಧಿಕೃತವಾಗಿ ಶಿಕ್ಷಕರಿಲ್ಲ. ಇಲ್ಲಿಗೆ ಸಮಸ್ಯೆಯಾಗ ಬಾರದು ಎನ್ನುವ ನಿಟ್ಟಿನಲ್ಲಿ ಇಲಾಖೆಯಿಂದ ತಾತ್ಕಾಲಿಕ ನೆಲೆಯಲ್ಲಿ ಅಕ್ಕ-ಪಕ್ಕದ ಶಾಲೆಗಳಿಂದ ಶಿಕ್ಷಕರನ್ನು ನಿಯೋಜಿಸಲಾಗಿದೆ. ಇದಲ್ಲದೆ ಇನ್ನೂ ಅನೇಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಕೊರತೆಯಿದೆ. ಈ ಬಾರಿ ಉತ್ತಮ ದಾಖಲಾತಿಯಾಗಿದ್ದು, ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ.

134 ಕಿ.ಪ್ರಾ. ಶಾಲೆಗಳು
ಕುಂದಾಪುರ ಹಾಗೂ ಬೈಂದೂರು ಎರಡೂ ತಾಲೂಕುಗಳಲ್ಲಿ ಒಟ್ಟು 1 ರಿಂದ 10 ರವರೆಗಿನ 378 ಶಾಲೆಗಳಿದ್ದು, ಅದರಲ್ಲಿ 6 ರಿಂದ 10 ವರೆಗೆ 244 ಶಾಲೆಗಳಿದ್ದರೆ, 1ರಿಂದ 5 ನೇ ತರಗತಿ ವರೆಗಿನ 134 ಶಾಲೆಗಳಿವೆ. ಒಟ್ಟಾರೆ 1-10ರ ವರೆಗೆ 33,773 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ 1 ರಿಂದ 5ನೇ ತರಗತಿಯವರೆಗೆ 17,174 ಮಕ್ಕಳು, 6-10 ವರೆಗೆ 16,599 ಮಕ್ಕಳು ಈ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ನಿಯಮಾವಳಿ ಪಾಲನೆಗೆ ಸೂಚನೆ
ಜಿಲ್ಲೆಯಾದ್ಯಂತ 1ರಿಂದ 5ನೇ ತರಗತಿಗಳು ಇಂದಿನಿಂದ ಆರಂಭಗೊಳ್ಳಲಿವೆ. ಕೋವಿಡ್‌ ಮಾರ್ಗಸೂಚಿ ಪಾಲಿಸುವಂತೆ ಶಿಕ್ಷಕರು, ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ಇವರಿಗೆ ಬೇಕಿರುವ ಎಲ್ಲ ಮೂಲಸೌಕರ್ಯಗಳನ್ನು ತರಗತಿಗಳಲ್ಲಿ ಕಲ್ಪಿಸಲಾಗಿದೆ.
-ಎನ್‌.ಎಚ್‌.ನಾಗೂರ, ಡಿಡಿಪಿಐ

Advertisement

Udayavani is now on Telegram. Click here to join our channel and stay updated with the latest news.

Next