ಇಂಡಿ: ಕಳೆದ 40 ವರ್ಷದಿಂದ ಇಂಡಿ ಭಾಗದ ರೈತರು ರೇವಣಸಿದೇಶ್ವರ ಏತ ನೀರಾವರಿ ಯೋಜನೆಗಾಗಿ ಹೋರಾಟ ಮಾಡುತ್ತ ಬಂದರೂ ಸಹ ಯೋಜನೆ ಅನುಷ್ಠಾನಗೊಳ್ಳಲಿಲ್ಲ. 1.22 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿಯಿಂದ ವಂಚಿತವಾಗಿತ್ತು. ಈ ಯೋಜನೆಯಿಂದ ಜಿಲ್ಲೆಯ ನಾಲ್ಕು ತಾಲೂಕುಗಳ ಸುಮಾರು 1,22,885 ಎಕರೆ ಪ್ರದೇಶ ನೀರಾವರಿಗೆ ಅನುಕೂಲವಾಗಲಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ. ಈ ಯೋಜನೆ ಅನುಮೋದನೆಗೆ ಶ್ರಮಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಸಂಸದ ರಮೇಶ ಜಿಗಜಿಣಗಿ ಅವರಿಗೆ ತಾಲೂಕಿನ ರೈತರ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.
ನೀರಾವರಿಯಿಂದ ವಂಚಿತಗೊಂಡಿರುವ ಇಂಡಿ, ಬಬಲೇಶ್ವರ, ಚಡಚಣ, ವಿಜಯಪುರ ತಾಲೂಕಿನ ಸುಮಾರು 56 ಹಳ್ಳಿಗಳು ಈ ಯೋಜನೆಯಿಂದ ಅನುಕೂಲವಾಗಲಿದೆ. ಈ ಭಾಗದ ಕೃಷಿ, ತೋಟಗಾರಿಕೆ, ವಾಣಿಜ್ಯ ಬೆಳೆಗಾರರಿಗೆ ಅನುಕೂಲವಾಗಲಿದ್ದು ಲಿಂಬೆ, ದಾಳಿಂಬೆ, ದ್ರಾಕ್ಷಿ ಮೊದಲಾದ ತೋಟಗಾರಿಕೆ ಬೆಳೆಯಿಂದ ಈ ಭಾಗ ಸಮೃದ್ಧಿಯಾಗಲಿದೆ. ರೈತ ಪರ ಯೋಜನೆ ಜಾರಿಗೊಳಿಸಿದ ರೈತ ಪರ ಕಾಳಜಿ ಹೊಂದಿದ ಬಿಜೆಪಿ ಸರ್ಕಾರಕ್ಕೆ ಇದರ ಕೀರ್ತಿ ಸಲ್ಲಬೇಕು. ಯೋಜನೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ ಸಚಿವ ಗೋವಿಂದ ಕಾರಜೋಳ ಅವರಿಗೆ ಸಲ್ಲುತ್ತದೆ ಎಂದರು.
ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ ಅವರ ಇಚ್ಛಾಶಕ್ತಿ ಫಲವಾಗಿ ಇಂದು ಈ ಯೋಜನೆಗೆ ಅನುಮೋದನೆ ಸಿಕ್ಕಿದೆ. ಯೋಜನೆ ಅನುಮೋದನೆಗೆ ಶ್ರಮಿಸಿದ ಎಲ್ಲ ನಾಯಕರಿಗೆ ಹಾಗೂ ಬಿಜೆಪಿ ಸರ್ಕಾರಕ್ಕೆ ಅಭಿನಂದಿಸುತ್ತೇನೆ ಎಂದು ಹೇಳಿದರು.
ಈ ಬಾರಿ ಗಣೇಶೋತ್ಸವವನ್ನು ಸಂಭ್ರಮದಿಂದ ಉತ್ಸಾಹದಿಂದ ಸೌಹಾರ್ದಯುತವಾಗಿ ಆಚರಣೆ ಮಾಡಬೇಕು. ಗಣೇಶ ಉತ್ಸವಕ್ಕೆ ಅಧಿಕಾರಿಗಳು, ಪೊಲೀಸ್ ಇಲಾಖೆ ಸಹಕಾರ ನೀಡಬೇಕು ಎಂದ ಅವರು, ಗಣೇಶೋತ್ಸವದಲ್ಲಿ ದೇಶಭಕ್ತ ಸಾವರರ್ಕರ ಭಾವಚಿತ್ರ ಇಡಬೇಕು ಎಂದರು.
ಬುದ್ದುಗೌಡ ಪಾಟೀಲ, ಅನಿಲಗೌಡ ಬಿರಾದಾರ, ಸಿದ್ದರಾಮ ತಳವಾರ, ಭೀಮಾಶಂಕರ ಆಳೂರ, ದೇವೇಂದ್ರ ಕುಂಬಾರ, ಮಲ್ಲು ಚಾಕುಂಡಿ, ಮಲ್ಲು ಹಾವಿನಾಳಮಠ, ಮಲ್ಲುಗೌಡ ಬಿರಾದಾರ, ಪ್ರಕಾಶ ಮಲಘಾಣ, ದಯಾನಂದ ಹುಬ್ಬಳ್ಳಿ, ಮಹೇಶ ಹೂಗಾರ, ಶ್ರೀಶೈಲಗೌಡ ಬಿರಾದಾರ, ಪ್ರವೀಣ ಮಠ ಇದ್ದರು.