Advertisement

ನಾರಾಯಣಗೌಡರಿಗೆ ಹ್ಯಾಟ್ರಿಕ್‌

10:19 PM Dec 09, 2019 | Team Udayavani |

ಮಂಡ್ಯ: ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದು ಜೆಡಿಎಸ್‌ ಭದ್ರಕೋಟೆ ಸೃಷ್ಟಿಸಿದ್ದ ಕೆ.ಸಿ. ನಾರಾಯಣಗೌಡ, ಕುತೂಹಲ ಕೆರಳಿಸಿದ್ದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಅಖಾಡಕ್ಕಿಳಿದು ದಳಪತಿಗಳ ಭದ್ರ ಕೋಟೆಯನ್ನು ಛಿದ್ರಗೊಳಿಸಿದ್ದಾರೆ. ಹ್ಯಾಟ್ರಿಕ್‌ ಜಯಭೇರಿ ಬಾರಿಸಿರುವ ನಾರಾಯಣಗೌಡ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿ ಇತಿಹಾಸ ಸೃಷ್ಟಿಸಿದ್ದಾರೆ.

Advertisement

ತವರು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಮುಖ್ಯ ಮಂತ್ರಿ ಯಡಿಯೂರಪ್ಪನವರ ಪ್ರತಿಷ್ಠೆ ಹೆಚ್ಚಿಸಿದೆ. ಕಾಂಗ್ರೆಸ್‌-ಜೆಡಿಎಸ್‌ ಕದನ ಕಣವಾಗಿದ್ದ ಮಂಡ್ಯ ಜಿಲ್ಲೆಯೊಳಗೆ ಅಸ್ತಿತ್ವವೇ ಇಲ್ಲದ ಬಿಜೆಪಿ ಕೆ.ಆರ್‌. ಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿ, ಜಿಲ್ಲೆಯಲ್ಲಿ ಹೊಸದೊಂದು ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡಿದೆ.

ಪ್ರಾಬಲ್ಯ ಕಳೆದುಕೊಂಡ ಜೆಡಿಎಸ್‌, ಕಾಂಗ್ರೆಸ್‌: ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಮಂಡ್ಯ ಜಿಲ್ಲೆಯನ್ನು ಶಕ್ತಿ ಕೇಂದ್ರವನ್ನಾಗಿಸಿಕೊಂಡಿದ್ದ ಜೆಡಿಎಸ್‌ ಕೇವಲ ವರ್ಷದ ಅಂತರದಲ್ಲಿ ಎದುರಾದ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿತ್ತು. ಈಗ ಕೆ.ಆರ್‌.ಪೇಟೆ ಉಪ ಚುನಾವಣೆ ಫ‌ಲಿತಾಂಶವೂ ಜೆಡಿಎಸ್‌ ಶಕ್ತಿ ಸಂಪೂರ್ಣ ಕುಗ್ಗಿರುವುದನ್ನು ಸಾಬೀತುಪಡಿಸಿದೆ. ಜೊತೆಗೆ ಮೂರನೇ ಸ್ಥಾನಕ್ಕೆ ಕುಸಿದಿರುವ ಕಾಂಗ್ರೆಸ್‌ ಕೂಡ ಕ್ಷೇತ್ರದಲ್ಲಿ ಪ್ರಾಬಲ್ಯ ಕಳೆದುಕೊಂಡಿದೆ.

ಹಿಂದೆ ಎರಡು ಬಾರಿ ಜೆಡಿಎಸ್‌ ಅಭ್ಯರ್ಥಿಯಾಗಿಯೇ ಗೆದ್ದಿದ್ದ ನಾರಾಯಣ ಗೌಡ, ಮೈತ್ರಿ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಲಿಲ್ಲ ವೆಂಬ ಕಾರಣ ಮುಂದಿಟ್ಟುಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಗೊಂಡರು. ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗಿಳಿದ ನಾರಾಯಣ ಗೌಡ, ಮತ್ತೆ ವಿಜಯ ಮಾಲೆ ಧರಿಸಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

3ನೇ ಯತ್ನದಲ್ಲೂ ಚಂದ್ರಶೇಖರ್‌ಗೆ ಸೋಲು: ಕಾಂಗ್ರೆಸ್‌ನ ಕೆ.ಬಿ. ಚಂದ್ರಶೇಖರ್‌ ಸತತ 3ನೇ ಪ್ರಯತ್ನದಲ್ಲೂ ಗೆಲುವಿನ ಗುರಿ ಮುಟ್ಟಲಾಗದೆ ಪರಾಭವಗೊಂಡಿದ್ದಾರೆ. 2013 ಹಾಗೂ 2018ರ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದ ಕಾಂಗ್ರೆಸ್‌ ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿದು, ಮತ್ತಷ್ಟು ಹೀನಾಯ ಸ್ಥಿತಿ ತಲುಪಿದೆ. ಎರಡು ದಶಕಗಳಿಂದ ಉಪ ಚುನಾವಣೆಯೂ ಸೇರಿದಂತೆ ಆರು ಚುನಾವಣೆಗಳನ್ನು ಕಾಂಗ್ರೆಸ್‌ ಅಭ್ಯರ್ಥಿಯಾ ಗಿಯೇ ಎದುರಿಸಿದ್ದ ಕೆ.ಬಿ.ಚಂದ್ರಶೇಖರ್‌, ಸೋಲನುಭವಿಸುವುದರ ಮೂಲಕ ತಮ್ಮ ರಾಜಕೀಯ ಭವಿಷ್ಯವನ್ನು ತಾವೇ ಅಂತ್ಯಗೊಳಿಸಿಕೊಂಡಿದ್ದಾರೆ.

Advertisement

ಗೆದ್ದವರು
ಕೆ.ಸಿ.ನಾರಾಯಣಗೌಡ(ಬಿಜೆಪಿ)
ಪಡೆದ ಮತ: 66,094
ಗೆಲುವಿನ ಅಂತರ‌: 9,728

ಸೋತವರು
ಬಿ.ಎಲ್‌.ದೇವರಾಜು (ಜೆಡಿಎಸ್‌)
ಪಡೆದ ಮತ: 56,363

ಕೆ.ಬಿ.ಚಂದ್ರಶೇಖರ್‌(ಕಾಂಗ್ರೆಸ್‌)
ಪಡೆದ ಮತ: 41,665

ಗೆದ್ದದ್ದು ಹೇಗೆ?
-ಬಿಜೆಪಿ ಹಿಂದೆಂದೂ ಕಾಣದ ರೀತಿಯಲ್ಲಿ ನಡೆಸಿದ ಚುನಾವಣೆ ಕಾರ್ಯಾಚರಣೆ

-ಜಾತಿ ಸೂಕ್ಷ್ಮತೆ ಅರಿತು ಸಣ್ಣ ಸಮುದಾಯ, ಮಹಿಳಾ ಮತ ಸೆಳೆಯುವಲ್ಲಿ ಬಿಜೆಪಿ ಯಶಸ್ವಿ

-ಸಿಎಂ ಪುತ್ರ ವಿಜಯೇಂದ್ರ, ಡಿಸಿಎಂ ಡಾ.ಅಶ್ವಥನಾರಾಯಣ, ಶಾಸಕ ಪ್ರೀತಂಗೌಡರ ನಿರ್ಣಾಯಕ ಪಾತ್ರ

ಸೋತದ್ದು ಹೇಗೆ?
-ಜೆಡಿಎಸ್‌ ಗೆಲ್ಲಿಸಲೇಬೇಕೆಂಬ ಹಠ, ಛಲ ದಳಪತಿಗಳಿಗೆ ಇಲ್ಲದೇ ಹೋದದ್ದು, ಪ್ರಚಾರದಲ್ಲಿ ನಿರಾಸಕ್ತಿ ತೋರಿದ್ದು, ಪ್ರಮುಖ ನಾಯಕರು, ಅಭ್ಯರ್ಥಿಗೆ ಸೂಕ್ತ ಬೆಂಬಲ ನೀಡದ್ದು

-ಜೆಡಿಎಸ್‌ ಶಾಸಕರೆಲ್ಲರನ್ನೂ ಒಗ್ಗೂಡಿಸಿಕೊಂಡು ಅಭ್ಯರ್ಥಿ ಗೆಲುವಿಗೆ ಕಾರ್ಯತಂತ್ರ ರೂಪಿಸದೇ ಇದ್ದದ್ದು

-ಒಕ್ಕಲಿಗರ ಮತಗಳನ್ನಷ್ಟೆ ನಚ್ಚಿಕೊಂಡು, ಇತರೆ ಸಮುದಾಯದವರ ಮತ ಸೆಳೆಯುವ ಯತ್ನ ನಡೆಸದ ಜೆಡಿಎಸ್‌ ನಾಯಕರು, ಜತೆಗೆ ಆಂತರಿಕ ಅಸಮಾಧಾನ ಶಮನಗೊಳಿಸದೇ ಇದ್ದದ್ದು

ಮತದಾರರು ನನ್ನ ತ್ಯಾಗವನ್ನು ಗೌರವಿಸಿ, ಮತ್ತೆ ಆಶೀರ್ವದಿಸಿದ್ದಾರೆ. ಹ್ಯಾಟ್ರಿಕ್‌ ಗೆಲುವು ತಂದುಕೊಟ್ಟಿದ್ದಾರೆ. ನನ್ನ ಕೊನೆಯುಸಿರಿರುವರೆಗೂ ಜನರ ಸೇವೆ ಮಾಡುತ್ತೇನೆ.
-ನಾರಾಯಣಗೌಡ, ಬಿಜೆಪಿ ಅಭ್ಯರ್ಥಿ

ಮತದಾರರಿಗೆ ಅಭಿವೃದ್ಧಿ ಬೇಕಿಲ್ಲ. ಚುನಾವಣೆ ಹಿಂದಿನ ದಿನ ನೀಡುವ ಕಾಸಿಗೆ ಹಾಕಿದ್ದು, ನನ್ನ ಸೋಲಿಗೆ ಕಾರಣವಾಗಿದೆ. ನನಗೆ ಮತ ನೀಡಿದವರಿಗೆ ಧನ್ಯವಾದಗಳು.
-ದೇವರಾಜು, ಜೆಡಿಎಸ್‌ ಪರಾಜಿತ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next